ಐನೂರು, 1 ಸಾವಿರ ರೂಪಾಯಿ ನೋಟುಗಳ ಚಲಾವಣೆಗೆ ನಿಷೇಧ ಹೇರಿರುವ ಕೇಂದ್ರ ಸರ್ಕಾರದ ಕ್ರಮದಿಂದ ಜನಸಾಮಾನ್ಯರು ಒಂದು ಕಡೆ ಸಂತುಷ್ಟರಾಗಿದ್ದಾರೆ. ಆದರೆ ದೈನಂದಿನ ಚಟುವಟಿಕೆಗೆ ತೊಂದರೆಯಾಗಿದೆ ಎಂಬ ಆಕ್ರೋಶ ಕೂಡಾ ಇದೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳಿಗಿದ್ದ ಸಾಲು-ಸಾಲು ರಜೆಯನ್ನು ರದ್ದುಪಡಿಸಲಾಗಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು, ಖಾಸಗಿ ಬ್ಯಾಂಕುಗಳು, ಸ್ಥಳೀಯ ಬ್ಯಾಂಕುಗಳು, ಕೋ ಆಪರೇಟಿವ್ ಸೊಸೈಟಿಗಿರುವ ರಜೆಯನ್ನು ರದ್ದುಪಡಿಸಲಾಗಿದೆ.
ನಾಳೆಯಿಂದ ಬ್ಯಾಂಕ್‌ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಎರಡನೇ ಶನಿವಾರದ 12 ಮತ್ತು ಭಾನುವಾರವಾದ 13ರಂದು ಇದ್ದ ರಜೆಯನ್ನು ರದ್ದು ಮಾಡಿರುವ ಆರ್‌ಬಿಬಿ ಜನಸಾಮಾನ್ಯರ ನೆರವಿಗೆ ಧಾವಿಸಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ ಸಲುವಾಗಿ ಹೆಚ್ಚುವರಿ ಕೌಂಟರ್ ಸೇರಿದಂತೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಆರ್‌ಬಿಐ ನಿರ್ದೇಶಿಸಿದೆ. ಕಚೇರಿ ಕೆಲಸ ಅವಧಿಯ ವಿಸ್ತರಣೆ, ನಿವೃತ್ತ ಉದ್ಯೋಗಿಗಳನ್ನು ತಾತ್ಕಾಲಿಕವಾಗಿ ನಿಯೋಜಿಸುವುದು ಸೇರಿದಂತೆ ಇನ್ನಿತರೆ ಸಾಧ್ಯತೆಗಳನ್ನು ಪರಿಶೀಲಿಸುವಂತೆ ಆರ್‌ಬಿಐ ಬ್ಯಾಂಕ್‌ಗಳಿಗೆ ಸೂಚಿಸಿದೆ.
ಆದರೆ ನಾಳೆ ಎಟಿಎಂ ಕಾರ್ಯನಿರ್ವಹಿಸಲ್ಲ. ನವೆಂಬರ್ 11 ರಿಂದ ಎಟಿಎಂ ಎಂದಿನಂತೆ ತೆರೆಯಲಿದೆ. ಆದರೆ ಅಲ್ಲಿ ಲಭ್ಯವಾಗುವುದು 50 ರೂಪಾಯಿ ಮತ್ತು 100 ರೂಪಾಯಿ ನೋಟು ಮಾತ್ರ ಎಂದು ಆರ್‌ಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಬ್ಯಾಂಕಿಗೆ ಹೋಗಿ ಏನ್ ಮಾಡಬೇಕು..?
ನೋಟುಗಳ ಬದಲಾವಣೆಗಾಗಿಯೇ ಆರ್‌ಬಿಐ ಚಿಹ್ನೆಯುಳ್ಳ ಅರ್ಜಿಯನ್ನು ಭರ್ತಿ ಮಾಡಿಕೊಡಬೇಕು. ಅದು ನಿಮಗೆ ಬ್ಯಾಂಕ್‌ನಲ್ಲೇ ಲಭ್ಯವಿರುತ್ತದೆ. ನೀವು ಖಾತೆ ಹೊಂದಿರುವ ಬ್ಯಾಂಕ್, ಅದರ ಶಾಖೆ ಹೆಸರು, ನಿಮ್ಮ ಹೆಸರು, ನೀವು ಯಾವ ಗುರುತಿನ ಚೀಟಿಯನ್ನು ತೆಗೆದುಕೊಂಡು ಹೋಗಿರುತ್ತಿರೋ ಆ ಐಡಿ ಕಾರ್ಡಿನ ಸಂಖ್ಯೆ, ವಿನಿಮಯ ಬಯಸುತ್ತಿರುವ ನೋಟುಗಳ ಸಂಖ್ಯೆಯನ್ನು ನಮೂದು ಮಾಡಿ ಸಹಿ ಹಾಕಿ ಸಂಬಂಧಪಟ್ಟ ಕೌಂಟರ್‌ನಲ್ಲಿ ಕೊಟ್ಟರೆ ಆಗ ಬ್ಯಾಂಕಿನವರು ನಿಮಗೆ ಹೊಸ ನೋಟನ್ನು ಕೊಡುತ್ತಾರೆ.
ಇದನ್ನು ತಿಳಿದುಕೊಳ್ಳಲೇಬೇಕು:
ನೋಟುಗಳ ಬದಲಾವಣೆಗೆ ಇರುವ ಕಾಲಮಿತಿ ಡಿಸೆಂಬರ್ 30. ಹೀಗಾಗಿ ಯಾರೂ ಗಾಬರಿಯಾಗಬೇಕಾದ ಅಗತ್ಯವಿಲ್ಲ.
ಒಬ್ಬರು ದಿನವೊಂದಕ್ಕೆ ಕೇವಲ 4 ಸಾವಿರ ರೂಪಾಯಿ ಮೊತ್ತದಷ್ಟು ಮಾತ್ರ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶವಿದೆ. ಭವಿಷ್ಯದಲ್ಲಿ ಈ ಮೊತ್ತವನ್ನು ಏರಿಕೆ ಮಾಡಲಾಗುತ್ತದೆ.
ಒಂದು ವೇಳೆ ನಿಮ್ಮ ಬಳಿಯಿರುವ ನೋಟುಗಳ ಮೊತ್ತ 4 ಸಾವಿರ ರೂಪಾಯಿಗಿಂತ ಹೆಚ್ಚಾಗಿದ್ದರೆ ಆಗ ನೀವು ನಿಮ್ಮ ಖಾತೆಗೆ ಹಣವನ್ನು ಜಮೆ ಮಾಡಬಹುದು. ಈ ಜಮೆಗೆ ಯಾವುದೇ ಮಿತಿಯಿಲ್ಲ.
ಒಂದು ವೇಳೆ ನೋಟುಗಳ ಬದಲಾವಣೆ ಬಯಸದೇ ತಾವು ಖಾತೆಯಲ್ಲೇ ಠೇವಣಿ ಇಡಲು ಬಯಸಿದರೆ ಅದಕ್ಕೂ ಅವಕಾಶವಿದೆ. ಠೇವಣಿ ಇಡುವುದಕ್ಕೆ ಯಾವುದೇ ಮಿತಿಯಿಲ್ಲ. ಆದರೆ 50 ಸಾವಿರ ರೂಪಾಯಿಗಿಂತ ಮೇಲ್ಪಟ್ಟ ಠೇವಣಿ ಇಡಬೇಕಾದರೆ ಪಾನ್ ಕಾರ್ಡ್ ದಾಖಲೆ ಸಲ್ಲಿಕೆ ಕಡ್ಡಾಯ. ಅಂದರೆ ನೀವು ಹಳೆ ನೋಟುಗಳನ್ನು ಕೊಟ್ಟರೆ ಅಷ್ಟೇ ಮೊತ್ತವನ್ನು ಬ್ಯಾಂಕ್ ನಿಮ್ಮ ಖಾತೆಗೆ ಕ್ರೆಡಿಟ್ ಮಾಡುವುದು.
ಹಳೆಯ ನೋಟುಗಳನ್ನು ನೀವು ಎಟಿಎಂಗಳಲ್ಲಿ ಇರುವ ಕ್ಯಾಶ್ ಡೆಪಾಸಿಟ್ ಮೆಷಿನ್ ಅಥವಾ ಕ್ಯಾಷ್ ರಿಸೈಕ್ಲಲರ್ಸ್ ಮೂಲಕವೂ ನಿಮ್ಮ ಖಾತೆಗೆ ಜಮೆ ಮಾಡಬಹುದು.
ನೋಟುಗಳ ಬದಲಾವಣೆಗೆ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವುದು ಕಡ್ಡಾಯ.
ಒಂದು ವೇಳೆ ನಿಮ್ಮ ಸಂಬಂಧಿಕರು ಅಥವಾ ಸ್ನೇಹಿತರು ನಿಮ್ಮ ಖಾತೆಯ ಮೂಲಕ ಅವರ ಬಳಿಯಿರುವ ನೋಟುಗಳ ಬದಲಾವಣೆಗೆ ಬಯಸಿದರೆ ಆಗ ಅವರು ನಿಮಗೆ ಲಿಖಿತ ರೂಪದಲ್ಲಿ ಅನುಮತಿ ಪತ್ರವನ್ನು ನೀಡಿರಬೇಕು. ಈ ವ್ಯವಹಾರದ ವೇಳೆ ಸಂಬಂಧಪಟ್ಟ ಶಾಖೆಯಲ್ಲಿ ಅವರು ಹಾಜರಿರಬೇಕು. ನಿಮ್ಮ ಮತ್ತು ಅವರ ಅಗತ್ಯ ಗುರುತಿನ ಪತ್ರಗಳನ್ನು ಸಲ್ಲಿಕೆ ಮಾಡಬೇಕು.
ಒಂದು ವೇಳೆ ನಿಮಗೆ ಖುದ್ದಾಗಿ ಹೋಗಲು ಸಾಧ್ಯವಾಗದೇ ಇದ್ದಲ್ಲಿ ಆಗ ನಿಮ್ಮ ಪ್ರತಿನಿಧಿಯನ್ನು ಕಳುಹಸಿಕೊಡಬಹುದು. ಆಗ ಬ್ಯಾಂಕಿಗೆ ನೀವು ಲಿಖಿತ ರೂಪದಲ್ಲಿ ಅನುಮತಿ ಪತ್ರವನ್ನು ನೀಡಿರಬೇಕು. ಆದರೆ ಆರ್‌ಬಿಐ ಸಲಹೆ ಪ್ರಕಾರ ಖುದ್ದಾಗಿ ವ್ಯವಹಾರ ಮಾಡಿದರೆ ಒಳ್ಳೆಯದು.
ಒಂದು ವೇಳೆ ನೀವು ವಿದೇಶದಲ್ಲಿದ್ದು ನಿಮ್ಮ ಹಣ ಭಾರತದಲ್ಲಿದ್ದರೆ ಆಗ ನೀವು ಸಂಬಂಧಪಟ್ಟವರಿಗೆ ನೋಟುಗಳ ವಿನಿಮಯಕ್ಕೆ ಅನುಮತಿ ಪತ್ರ ನೀಡಬಹುದು. ಈ ವೇಳೆ ನಿಮ್ಮ ಪ್ರತಿನಿಧಿ ಅಗತ್ಯ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯ.
ಒಂದು ವೇಳೆ ನೀವು ವಿದೇಶದಲ್ಲಿಯೇ ಭಾರತದ ಕರೆನ್ಸಿಯನ್ನು ಹೊಂದಿದ್ದರೆ ಆಗ ನೀವು ನಿಮ್ಮ ಎನ್‌ಆರ್‌ಒ ಅಕೌಂಟ್‌ಗೆ ಹಣ ಜಮೆ ಮಾಡಬಹುದು.
ಎಟಿಎಂಗಳಲ್ಲಿ ಎಷ್ಟು ಸಿಗುತ್ತೆ..?
ನವೆಂಬರ್ 11 ರಿಂದ ಎಟಿಎಂಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಆದರೆ ದಿನವೊಂದಕ್ಕೆ ಒಂದು ಎಟಿಎಂ ಕಾರ್ಡ್‌ನಿಂದ ಡ್ರಾ ಮಾಡಬಹುದಾದ ಗರಿಷ್ಠ ಮೊತ್ತ ಕೇವಲ 2 ಸಾವಿರ ರೂಪಾಯಿ ಮಾತ್ರ. ನವೆಂಬರ್ 19ರ ಬಳಿಕ ಈ ಮೊತ್ತವನ್ನು 4 ಸಾವಿರ ರೂಪಾಯಿಗೆ ಹೆಚ್ಚಳ ಮಾಡಲಾಗುತ್ತದೆ.
ಬ್ಯಾಂಕಿನಿಂದ ಎಷ್ಟು ತೆಗೆಯಬಹುದು..?
ಬ್ಯಾಂಕಿನಿಂದ ಹಣ ಡ್ರಾ ಮಾಡಿಕೊಳ್ಳುವುದಕ್ಕೂ ಮಿತಿ ಹೇರಲಾಗಿದೆ. ಓರ್ವ ಖಾತೆದಾರರು ತಮ್ಮ ಖಾತೆಯಿಂದ ಅದೂ ಅಂಚೆ ಕಚೇರಿ ಇರಬಹುದು ಅಥವಾ ಬ್ಯಾಂಕ್ ಖಾತೆ ಇರಬಹುದು ದಿನವೊಂದಕ್ಕೆ ಗರಿಷ್ಠ 10 ಸಾವಿರ ರೂಪಾಯಿ ಡ್ರಾ ಮಾಡಿಕೊಳ್ಳಬಹುದು. ಆದರೆ ವಾರವೊಂದಕ್ಕೆ ಈ ಮಿತಿ 20 ಸಾವಿರ ರೂಪಾಯಿ.
ಕ್ರೆಡಿಟ್, ಡೆಬಿಟ್ ಕಾರ್ಡ್ ಮೂಲಕ ಮಾಡಬಹುದಾದ ನಗದು ರಹಿತ ಹಣ ವರ್ಗಾವಣೆಗೆ ಯಾವುದೇ ಮಿತಿ ಇಲ್ಲ. ಆದರೆ ಚೆಕ್ ಮೂಲಕ ಬ್ಯಾಂಕಿನಿಂದ ದಿನವೊಂದಕ್ಕೆ ಗರಿಷ್ಠ ೧೦ ಸಾವಿರ ರೂಪಾಯಿ ಮಾತ್ರ ಡ್ರಾ ಮಾಡಬಹುದು.
ಕಾಲಾವಧಿ ಮೀರಿದ ಬಳಿಕ:
ಒಂದು ವೇಳೆ ನಿಮಗೆ ಡಿಸೆಂಬರ್ 30ರೊಳಗೆ ನೋಟುಗಳ ಬದಲಾವಣೆ ಮಾಡಿಕೊಳ್ಳಲು ಸಾದ್ಯವಾಗದೇ ಇದ್ದಲ್ಲಿ ಆಗ ನೀವು ಆರ್‌ಬಿಐ ಕಚೇರಿ ಅಥವಾ ಆರ್‌ಬಿಐ ಸೂಚಿತ ನಿರ್ದಿಷ್ಟ ಕಚೇರಿಗಳಲ್ಲಿ ವಿಳಂಬಕ್ಕೆ ಕಾರಣವನ್ನು ಉಲ್ಲೇಖಿಸಿ ಪ್ರಮಾಣಪತ್ರ ಸಲ್ಲಿಸಿ ನೋಟುಗಳ ಬದಲಾವಣೆಯನ್ನು ಮಾಡಿಕೊಳ್ಳಬಹುದು.
ಜನಧನ ಯೋಜನೆಯಡಿ ಖಾತೆ ಹೊಂದಿರುವವರಿಗೂ ಈ ಎಲ್ಲಾ ನಿಯಮಗಳು ಅನ್ವಯಿಸುತ್ತವೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.