Print friendly

ಭಾನುವಾರ, ಮಾರ್ಚ್ 24, 2019

ಸೋವಿ


 * ದರದರನೇ ಕೆಳಗಿಳಿದು ಬ೦ದಾಗ ದರದ ಲ್ಲಾ ಗುವ ಸದರವೇ ಸೋವಿ 
  • ಹೆಚ್ಚು ಹೆಚ್ಚು ಖರೀದಿಯ ಉತ್ಸಾಹವನ್ನು ತೆರೆಯುವ ಚಾವಿ
  •  
  •  ಜಾಸ್ತೀ ವೇಟು, ಕಮ್ಮಿ ರೇಟು ಆದಾಗ ಕೊಡುವ ಹೆಸರು
  •  
  •  ಮಾಲು ಜಾಸ್ತೀಯಾಗಿ ಬೆಲೆಯೇ ನಾಸ್ತೀಯಾದಾಗಿನ ವಸ್ತು-ಸ್ಥಿತಿ 

  •  ಕಡಿಮೆ ದರದ ಎತ್ತುಗಳಿಗೆ ಏನೆನ್ನಬಹುದು

ಶುಕ್ರವಾರ, ಮಾರ್ಚ್ 22, 2019

ಹೆತ್ತವಳು


ಹೆತ್ತವಳು ಅವಳೇ, ಹೊತ್ತವಳು ಅವಳೇ
ಹೊರೆಯಾಕೆ ಆಗುತಿ ಅವಳಿಗೆ?
ಬಡಿಯುವವಳು ಅವಳೇ, ಬಡಿಸುವವಳು ಅವಳೇ
ಬಾರ ಯಾಕ ಆಗುತಿ ಅವಳಿಗೆ?

ಬಣ್ಣದ ಆಟ ಅವಳಿಗೆ ಗೊತ್ತಿಲ್ಲ
ಬದುಕೋದು ಕಲಿಸ್ತಾಳ, ಊರೆಲ್ಲಾ ಹೊಗಳ್ತಾಳ
ಹಸಿದಾಗ ಊಟ ಹೊಟ್ಟೆತುಂಬಾ ಬಡಿಸ್ತಾಳ
ನಡಿಯೋದು ಕಲಿಸಿ, ನಕ್ಕು ನಲಿತಾಳ

ಯಾರೇನೆ ಹೇಳಿದರು ನನ
ಮಗನೆ ಬಾರೀ ಅಂತಾಳ
ಕೊನೆಗೊಮ್ಮೆ ಉಸಿರು ನಿಂತರೂ
ನಿನ್ನ ಮನದಲ್ಲೆ ಉಳಿತಾಳ

ಇಂದ : ಸದಾನಂದ.ಬ.ಸಕ್ಕರಶೆಟ್ಟಿ.

ಬುಧವಾರ, ಮಾರ್ಚ್ 20, 2019

ಮಕ್ಕಳನ್ನು ವರ್ಣಿಸುವ ಜನಪದ ಗೀತೆಗಳು


ಯಾಕಳುವೆ ಎಲೆರಂಗ ಬೇಕಾದ್ದು ನಿನಗೀವೆ ನಾಕೆಮ್ಮೆ ಕರೆದ ನೊರೆ ಹಾಲು|

ಸಕ್ಕರೆ ನೀ ಕೇಳಿದಾಗ ಕೊಡುವೇನು|| 


ಯಾತಕಳುತಾನೆಂದು ಎಲ್ಲಾರು ಕೇಳ್ಯಾರು ಕಾಯದ ಹಾಲ ಕೆನೆ ಬೇಡಿ| 
ಕಂದಯ್ಯ ಕಾಡಿ ಕೈಬಿಟ್ಟು ಇಳಿದಾನ|| 


ಅಳುವ ಕಂದನ ತುಟಿಯು ಹವಳದ ಕುಡಿಹಂಗೆ ಕುಡಿಹುಬ್ಬು ಬೇವಿನೆಸಳಂಗೆ| 
ಕಣ್ಣೋಟ ಶಿವನ ಕೈಯಲಗು ಹೊಳೆದಂತೆ|| 

ಅತ್ತರೆ ಅಳಲವ್ವ ಈ ಕೂಸು ನನಗಿರಲಿ ಕೆಟ್ಟರೆ ಕೆಡಲಿ ಮನೆಗೆಲಸ| 
ಕಂದನಂತ ಮಕ್ಕಳಿರಲವ್ವ ಮನೆತುಂಬ|| 

ಜೋಗೂಳ ಹಾಡಿದರೆ ಆಗಲೇ ಕೇಳ್ಯಾನು ಹಾಲ ಹಂಬಲವ ಮರೆತಾನು| 
ಕಂದಂಗೆ ಜೋಗೂಳದಾಗೆ ಅತಿಮುದ್ದು|| 

ಅತ್ತು ಕಾಡುವನಲ್ಲ ಮತ್ತೆ ಬೇಡುವನಲ್ಲ ಎತ್ತಿಕೊಳ್ಳೆಂಬ ಹಟವಿಲ್ಲ| 
ನಿನ್ನಂತ ಹತ್ತು ಮಕ್ಕಳೂ ಇರಬಹುದು|| 

ಆಡಿ ಬಾ ಎನ್ನ ಕಂದ ಅಂಗಾಲ ತೊಳೆದೇನ ತೆಂಗಿನ ಕಾಯಿ ತಿಳಿನೀರ| 
ತಕ್ಕೊಂಡು ಬಂಗಾರದ ಮೊರೆ ತೊಳೆದೇನ|| 


ಕೂಸು ಇದ್ದ ಮನೆಗೆ ಬೀಸಣಿಗೆ ಯಾತಕೆ ಕೂಸು ಕಂದಯ್ಯ ಒಳ ಹೊರಗ| 
ಆಡಿದರೆ ಬೀಸಣಿಗೆ ಗಾಳಿ ಸುಳಿದಾವ||

ಭಾನುವಾರ, ಮಾರ್ಚ್ 03, 2019

ನೋವು - ಸಂತೋಷ

ಒಬ್ಬರಿಗೆ ನೋವು ಮಾಡುವುದೆಂದರೆ ಮರವನ್ನು ಕಡಿದು ಉರುಳಿಸಿದಂತೆ
         - ಕೆಲವೇ ನಿಮಿಷಗಳ ಕೆಲಸ....

ಒಬ್ಬರನ್ನು ಸಂತೋಷಪಡಿಸುವುದೆಂದರೆ ಗಿಡವನ್ನು ನೆಟ್ಟು, ಮರವಾಗಿ ಬೆಳೆಸಿದಂತೆ
         - ತುಂಬಾ ಸಮಯ, ಪ್ರೀತಿ, ತಾಳ್ಮೆ, ಕಾಳಜಿಯ ಅಗತ್ಯವಿರುತ್ತದೆ....

ಬದುಕು ಆಶೀರ್ವಾದಗಳ ಸಂತೆ,ನಾವು ಅದನ್ನು ಅರ್ಥ ಮಾಡಿಕೊಳ್ಳಬೇಕು.
           .. "ಶಾಂತವಾಗಿ ಆಲೋಚಿಸಿ ನೋಡಿ"

ಭಾನುವಾರ, ಫೆಬ್ರವರಿ 24, 2019

ಉಪ್ಪು

ಪ್ರಮಾಣದಲ್ಲಿ ವ್ಯತ್ಯಾಸವಾದಾಗ ಇದರ ಮಹತ್ವದ ಅರಿವಾಗುತ್ತದೆ
ಉಪ್ಪು ತಿಂದವನ ಮುಖವು ಬೆಪ್ಪು ತಕ್ಕಡಿಯಂಥಕ್ಕು
ಸಮುದ್ರದಲ್ಲಿ ದೊರೆಯುವುದರಿಂದ ಇದು ಮೀನಿನ ಬೆವರಿನಿಂದ ಉಂಟಾಗುವುದೆಂದು ಊಹಿಸಬಹುದು
ಯಾವ ಕಾಲಕ್ಕೂ ಸಪ್ಪೆಯೆನಿಸದ ಪದಾರ್ಥ
ನಮ್ಮ ದೇಹದ ಕಣ ಕಣದಲ್ಲೂ ಉಪ್ಪೇ ಇದೆ. ಬೆವರಿದಾಗ ತಿಳಿಯುತ್ತದೆ
ಉಪ್ಪಿನಲ್ಲಿ ಮೋಸ ಮಾಡುವ ದ್ರೋಹಕ್ಕೆ ಉಪ್ಪಾಯ ಎನ್ನಬಹುದು
ತಪ್ಪು ಮಾಡಿದರೆ ಒಪ್ಪಿಕೊಳ್ಳಬೇಕು,ಅಥವಾ ಉಪ್ಪು ಕೊಳ್ಳಬೇಕು
ಉಪ್ಪಿಗೆ ಪೆಪ್ಪರ್ ಬೆರೆಸಿ ತಿಂದರೆ ನೀರೂರಿಸುತ್ತೆ
ಉಪ್ಪಿಗಿಂಥ ರುಚಿಯಿಲ್ಲ ಎನ್ನುವವರು ಒಮ್ಮೆ ಉಪ್ಪಿನಕಾಯಿ ತಿಂದು ನೋಡುವುದು ಒಳಿತು

-ವಿಶ್ವನಾಥ ಸುಂಕಸಾಳ

ಶುಕ್ರವಾರ, ಫೆಬ್ರವರಿ 22, 2019

ಒಬ್ಬ ತಾಯಿಒಬ್ಬ ತಾಯಿ ತನ್ನ ಮಕ್ಕಳಿಗಾಗಿ ಪಡುವ ಕಷ್ಟ ಅಪಾರವಾದದ್ದು ಅನ್ನೋದು ಸತ್ಯ. ಅಂತಹಾ ತಾಯಂದಿರಿಗಾಗಿ, ಪ್ರತಿಯೊಬ್ಬ ಮಹಿಳಾಮಣಿಯರಿಗಾಗಿ ಬರೆದ ಕೆಲವು ಸಾಲುಗಳಿವು,
 
 ಹಸುಗೂಸು ಹೆರುವಾಗ ನೀ ಕಷ್ಟಪಟ್ಟೆ
ಹೆತ್ತಕಂದನ ಕಂಡು ಸಂತಸವ ಪಟ್ಟೆ
ಹುಟ್ಟಿದ ಹಸುಗೂಸ ಒಲುಮೆಯಲಿ ಸಾಕಿ
ಒಲುಮೆ ಸಿರಿ ಸಂತಸವ ಅನುದಿನವು ಉಣಿಸಿ

ಎದ್ದು ಬಂದಿದ್ದೆ ನಡುರಾತ್ರಿಯಲಿ, ಕೇಳಿ ಕಂದನ ಕೂಗು
ರಟ್ಟೆನೋವಾದರೂ ನೀ ಬಿಡಲಿಲ್ಲ ತೊಟ್ಟಿಲ ತೂಗು
ರಚ್ಚೆಹಿಡಿದತ್ತಾಗ ತೋಳ ತೆಕ್ಕೆಯಲಿ ಮಲಗಿಸಿ
ಮುದ್ದು ಕಂದನ ನಿನ್ನ ಕಣ್ರೆಪ್ಪೆಯಲಿ ಇರಿಸಿ

ಅಯ್ಯೋ ಕಂದನ ಒಡಲು ಬಿಸಿಯಾಯ್ತು
ಹೆತ್ತಕರುಳಿನ ಕೂಗು, ಚಿಂತೆ ನೂರಾಯ್ತು
ಗುಡಿ ಗೋಪುರದಿ ಪೂಜೆ, ಮನೆ ದೇವರಲಿ ಹರಕೆ
ಕಂದನಿಗೆ ಗುಣಮಾಡು, ನಗುತರಿಸು ಮೊಗಕೆ

ಅಪಾರ ಪ್ರೀತಿಯ ಮೊಗೆದು ಬೊಗಸೆಯಲಿ ತುಂಬಿ
ಮಮಕಾರ ತೋರಿ ಮುತ್ತಿನ ಮಳೆ ಸುರಿಸಿ
ನೋವುಗಳ ನುಂಗಿ, ಸಂತಸವ ಉಣಬಡಿಸಿ
ಕಣ್ಣೀರನು ಮರೆಸಿ, ನೋವನ್ನು ತೊರೆಸಿ

ಕೂಸದು ಗೆದ್ದಾಗ ನೀನೂ ಸಂಭ್ರಮಿಸಿ
ಸಿಹಿಯೂಟ ಪ್ರೋತ್ಸಾಹ, ಕಂದನಿಗೆ ಹರಸಿ
ನಿನ್ನೊಲುಮೆಯ ಧಾರೆ ಹರಿದಿರಲಿ ನಿರಂತರ
ನೀಜೊತೆಯಲಿದ್ದರೆ ಸಂಭ್ರಮದ ಸಡಗರ
                                                                                                      Posted by Prashanth Urala. G