ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ📶 👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಮಕ್ಕಳ ಹಾಡು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಮಕ್ಕಳ ಹಾಡು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ಮಾರ್ಚ್ 20, 2019

ಮಕ್ಕಳನ್ನು ವರ್ಣಿಸುವ ಜನಪದ ಗೀತೆಗಳು


ಯಾಕಳುವೆ ಎಲೆರಂಗ ಬೇಕಾದ್ದು ನಿನಗೀವೆ ನಾಕೆಮ್ಮೆ ಕರೆದ ನೊರೆ ಹಾಲು|

ಸಕ್ಕರೆ ನೀ ಕೇಳಿದಾಗ ಕೊಡುವೇನು|| 


ಯಾತಕಳುತಾನೆಂದು ಎಲ್ಲಾರು ಕೇಳ್ಯಾರು ಕಾಯದ ಹಾಲ ಕೆನೆ ಬೇಡಿ| 
ಕಂದಯ್ಯ ಕಾಡಿ ಕೈಬಿಟ್ಟು ಇಳಿದಾನ|| 


ಅಳುವ ಕಂದನ ತುಟಿಯು ಹವಳದ ಕುಡಿಹಂಗೆ ಕುಡಿಹುಬ್ಬು ಬೇವಿನೆಸಳಂಗೆ| 
ಕಣ್ಣೋಟ ಶಿವನ ಕೈಯಲಗು ಹೊಳೆದಂತೆ|| 

ಅತ್ತರೆ ಅಳಲವ್ವ ಈ ಕೂಸು ನನಗಿರಲಿ ಕೆಟ್ಟರೆ ಕೆಡಲಿ ಮನೆಗೆಲಸ| 
ಕಂದನಂತ ಮಕ್ಕಳಿರಲವ್ವ ಮನೆತುಂಬ|| 

ಜೋಗೂಳ ಹಾಡಿದರೆ ಆಗಲೇ ಕೇಳ್ಯಾನು ಹಾಲ ಹಂಬಲವ ಮರೆತಾನು| 
ಕಂದಂಗೆ ಜೋಗೂಳದಾಗೆ ಅತಿಮುದ್ದು|| 

ಅತ್ತು ಕಾಡುವನಲ್ಲ ಮತ್ತೆ ಬೇಡುವನಲ್ಲ ಎತ್ತಿಕೊಳ್ಳೆಂಬ ಹಟವಿಲ್ಲ| 
ನಿನ್ನಂತ ಹತ್ತು ಮಕ್ಕಳೂ ಇರಬಹುದು|| 

ಆಡಿ ಬಾ ಎನ್ನ ಕಂದ ಅಂಗಾಲ ತೊಳೆದೇನ ತೆಂಗಿನ ಕಾಯಿ ತಿಳಿನೀರ| 
ತಕ್ಕೊಂಡು ಬಂಗಾರದ ಮೊರೆ ತೊಳೆದೇನ|| 


ಕೂಸು ಇದ್ದ ಮನೆಗೆ ಬೀಸಣಿಗೆ ಯಾತಕೆ ಕೂಸು ಕಂದಯ್ಯ ಒಳ ಹೊರಗ| 
ಆಡಿದರೆ ಬೀಸಣಿಗೆ ಗಾಳಿ ಸುಳಿದಾವ||

ಭಾನುವಾರ, ಜನವರಿ 20, 2019

ವರುಷದ ಕಂದಮ್ಮ

ಮನೆಯ ಬೆಳಗಿದ ದೀಪಕೆ

ಮನವ ತಣಿಸುವ ಮೂರ್ತಿಗೆ
ನಮ್ಮ ಮನೆಯ ಪುಟ್ಟ ರತಿಗೆ
ವರುಷವಾಯಿತು ಇಂದಿಗೆ

ತನುವ ಕುಣಿಸಿ ಅತ್ತು ಕಾಡಿಸಿ
ನಮ್ಮ ಮಣಿಸಿ ಮುತ್ತು ಪೋಣಿಸಿ
ಸರವ ಧರಿಸಿದ ಮುಗುಧೆಗೆ
ವರುಷವಾಯಿತು ಇಂದಿಗೆ

ಮಿಂಚಿನಂತೆ ಹೊಳೆಯುತಿರುವ
ಸಂಚಿನಲ್ಲೇ ನಮ್ಮ ಸೆಳೆವ
ನಮ್ಮ ಮನೆಯ ಮಿಂಚುಳ್ಳಿಗೆ
ವರುಷವಾಯಿತು ಇಂದಿಗೆ

ಹರುಷ ಸುರಿಸುವ ಕಂದಗೆ
ಹೊಣೆಯ ಕಲಿಸಿದ ಬಾಲೆಗೆ
ನಮ್ಮ ಮನೆಯ ಚಾರುಲತೆಗೆ
ವರುಷವಾಯಿತು ಇಂದಿಗೆ

ನಮ್ಮ ಬಾಳಿನ ಗ್ರಂಥವ
ತನ್ನ ಹೆಸರಲಿ ಬರೆಯುತಿರುವ
ಈ ಪುಟ್ಟ ಕೃತಿಕರ್ತೃವಿಗೆ
ವರುಷವಾಯಿತು ಇಂದಿಗೆ

..- ಶ್ರೀಮತಿ ಶುಭಶ್ರೀ. ಜಿ. ಬೆಳಂದೂರ. ಡೆಲ್‌ವೇರ್, ಕೊಲೆರಾಡೊ, ಯು.ಎಸ್.ಏ.


((ನಮ್ಮ ಮಗಳು ಸೌದಾಮಿನಿಗೆ ಒಂದು ವರುಷ ತುಂಬಿದ ಸಂದರ್ಭದಲ್ಲಿ ಬರೆದ ಕವನ))

ಗುರುವಾರ, ಡಿಸೆಂಬರ್ 20, 2018

ಮಕ್ಕಳಾಟ..

ಬಿತ್ತೊಂದು ಮಳೆ
ನೆತ್ತಿ ತಣ್ಣಗಾಗಲಿಲ್ಲ
ಕತ್ತೆತ್ತುವ ಭರದಲ್ಲಿ
ಕತ್ತು ಉಳುಕಿತಲ್ಲ||

ಬಾರೊ ಬಾರೊ
ಮಳೆರಾಯ
ಮಕ್ಕಳ ಹಾಡಿಗೆ
ಕುಣಿಯಲಾಗಲಿಲ್ಲ||

ಚೌಕಾ ಬಾರಾ
ಕವಡೆ ಕಾಯಿ
ಕುಲು ಕುಲುಕಿ
ಹಾಕಲಾಗಲಿಲ್ಲ||

ಚಿನ್ನಿ ದಾಂಡು
ಗಿರ ಗಿರ ಗಿಲ್ಲಿ
ಹೊಡೆಯುವ ಹಳೆ ಆಟ
ಹೇಳಿಕೊಡಲಾಗಲಿಲ್ಲ||

ಚನ್ನೆಮಣೆಯ
ಅಟ್ಟದಿ ತೆಗೆದು
ಮಕ್ಕಳೊಟ್ಟಿಗೆ ಕುಳಿತು
ಆಡಿಸಲಾಗಲಿಲ್ಲ||

ಕಣ್ಣಾ ಮುಚ್ಚೆ
ಕಾಡೆ ಗೂಡೆ….
ಅಡಗುವ ಆಟ
ತಿಳಿಸಿಕೊಡಲಾಗಲಿಲ್ಲ||

ತಿರುಗುವ ಮಕ್ಕಳ
ಒಟ್ಟಿಗೆ ಸೇರಿಸಿ
ಚಂದಮಾಮಾ ಕಥೆ
ಹೇಳಲಾಗಲಿಲ್ಲವಲ್ಲ||

ಕಜ್ಜಾಯದಡುಗೆ
ಕೈ ತುತ್ತ ನೀಡಿ
ಒಟ್ಟಿಗೆ ಕುಳಿತ
ಬೆಳದಿಂಗಳೂಟವಿಲ್ಲ||

ಮಕ್ಕಳ ಕರೆದು
ಹೇಳಿದರಂದರು
ಇವೆಲ್ಲ ಓಲ್ಡ ಜಮಾನಾ
ಹೋಗಜ್ಜಿ||

ನಮಗೇನಿದ್ದರು
ಟೀವೀನೇ ಬೇಕು
ಮೊಬೈಲು ಬೇಕು
ನಿನ್ನಾಟ ಯಾರಿಗೆ ಬೇಕು||

ರುಚಿಕಟ್ಟಾದ
ಪಿಜ್ಜಾ ಬರಗರ್
ಸಾಕು ಹೊಟೇಲಿನ
ಮಂದ ದೀಪ||

ಬೈ ಬೈ ಅಜ್ಜಿ
ಹೊರಡುವೆವೀಗ
ಬಾಗಿಲು ತೆಗಿ ಬರುವೆವು
ರಾತ್ರಿ ಹನ್ನೆರಡರೊಳಗೆ ||
From - Sandhyadeepa…

ಗುರುವಾರ, ಸೆಪ್ಟೆಂಬರ್ 20, 2018

ಮಳೆ ಕಳೆ (Rain ... )

ಮಳೆ ಬಂತು
ಮಳೆ ಬಂತು
ನಮ್ಮ ನಾಡಿಗೆ 
ತರುಲತೆಗಳಿಗೆ ತುಂಬಿತು ನವಚೇತನ 
ನದಿನಾಲೆಗಳು ಕೂಡ 
ತುಂಬಿ ತುಳುಕಾಡಿದವು 
ಜನಮನಗಳಲ್ಲಿ ಕೂಡಾ 
ಹೊಸತನವು ತುಂಬಿತು 
ಬೋಳು ಬೋಳಾಗಿದ್ದ 
ಬರಡು ಭೂಮಿಗಳೆಲ್ಲಾ 
ಹಚ್ಚ ಹಸುರಿನ ಚಾದರವ 
ಹೊದ್ದು ಮಲಗಿದವು 
ದೇಗುಲಗಳಲ್ಲಿ ಗಂಟೆ 
ಮಾರ್ದನಿಯು ಮೂಡಿತು 
ಹರಕೆ ಪೂಜೆಗಳೆಲ್ಲಾ 
ಭಕ್ತಿಯಲಿ ನಡೆಯಿತು 

ಕೃಪೆ - ವಿ. ಸತ್ಯನಾರಾಯಣ ರಾವ್‌ 

ಸೋಮವಾರ, ಆಗಸ್ಟ್ 20, 2018

ಹಬ್ಬದ ಸಾಲು

ಶ್ರಾವಣ ಮಾಸವು
ಬಂದಿತು ಎಂದರೆ
ಬರುವುದು ಹಬ್ಬದ ಸಾಲು,
ಉಣುವುದು ಉಡುವುದು
ಸಂಭ್ರಮ ಪಡುವುದು
ಹರುಷವೆ ಎಲ್ಲರ ಪಾಲು
ಮೊದಲು ಬರುವದು
ನಾಗರ ಚವುತಿ
ಹಾವಿಗೆ ಹಾಲೆರೆಯುವರು,
ವಿಷ ಜಂತುವಿಗೂ
ಸಿಹಿ ನೀಡುತಲಿ
ಪ್ರಾಣಿ ಪ್ರೀತಿ ತೋರುವರು
ನಂತರ ಬರುವಳು
ವರ ಮಹಾಲಕುಮಿ
ಸಿರಿ ಸಂಪದದ ಅರಸಿ,
ರಕ್ಷಾ ಬಂಧನವು
ಅಣ್ಣ-ತಂಗಿಯರ
ಪೊರೆವುದು ಬಂಧನ ಬೆಸೆಸಿ.
ಇದೇ ಮಾಸದಲಿ
ಸ್ವಾತಂತ್ರ್ಯದ ದಿನ
ಭಾರತೀಯರ ಹಬ್ಬ,
ತ್ರಿವರ್ಣ ಧ್ವಜವು
ಬಾನಲಿ ಮೆರೆದಿದೆ
ಮೀರಿದೆ ಹರುಷವು ಅಬ್ಬ!
ಕೃಷ್ಣನ ಜನುಮ
ದಿನವು ಬರುವುದು
ಬಹುಳ ಅಷ್ಟಮಿ ದಿವಸ
ಗೀತೆಯ ಸಾರಿ
ಜೀವನ ಧನ್ಯತೆ
ಪಾಠವ ಹೇಳಿದ ಅರಸ.
ಹೀಗೆಯೆ ಶ್ರಾವಣ
ಮಾಸವು ಪೂರ್ತಿ
ಸಂಭ್ರಮ ಪಡುವ ಕಾಲ,
ಭಕುತಿ ಪ್ರೇಮಗಳ
ಭಾವೈಕ್ಯತೆಯನು
ಬೆಳೆಪುದೆ ಇದರ ಮೂಲ
-ಗುರುರಾಜ್ ಬೆಣಕಲ್

ಶುಕ್ರವಾರ, ಜುಲೈ 20, 2018

ಮಕ್ಕಳ ಮನಸು

ಮಕ್ಕಳ ಮನಸು ಮಲ್ಲಿಗೆ
ಮಕ್ಕಳ ಮನಸು ಮಲ್ಲಿಗೆ ಹೂವಿನ
ಹಾಗೆ ಬಿಳುಪಾಗಿಹುದು
ಅರಳಿದ ಮಲ್ಲಿಗೆ ಹೂವಿನ ಹಾಗೆ
ಪರಿಮಳ ಸೂಸುತಲಿಹುದು
ನೋಡುವರ ಮರುಳು ಮಾಡುವ
ಮುಗ್ಧತೆ ಮೊಗದಲ್ಲಿಹುದು
ನೋಡುಗರಲಿ ಖುಷಿಯ ಹೆಚ್ಚಿಸೊ
ಉಲ್ಲಾಸದ ಚಿಲುಮೆ ನಗುವಲ್ಲಿಹುದು.
ಮಗುವಿನ ಮುಗ್ಧ ಮನಸು
ರಾಗದ್ವೇಷಗಳಿರದೆ ಶುಭ್ರವಾಗಿಹುದು
ಮಗುವು ಬೆಳೆಯುವ ಪರಿಸರ
ಮಾತ್ರ ಘನಘೋರವಾಗಿಹುದು
ಬಿಳಿಯ ಮನಸಿನಾ ಮೇಲೆ
ಚೆಲ್ಲಿದ ಬಣ್ಣ ಮೆತ್ತಿಕೊಳ್ಳುವುದು
ಯಾವ ಬಣ್ಣ ಚೆಲ್ಲುವಿರೋ ಅದೇ
ಬಣ್ಣವನ್ನು ಅವು ಪ್ರದರ್ಶಿಸುವುದು
ಬಣ್ಣ ಆಯ್ದುಕೊಳ್ಳುವ ಅವಕಾಶ
ಮಗುವ ಕೈಯಲಿಲ್ಲ
ಮಗುವನ್ನು ಹೇಗೆ ಬೆಳೆಸುವುದು
ಎಂದು ತಿಳಿಯಬೇಕು ಎಲ್ಲ.
ಭವ್ಯ ಭಾರತದ ಭವಿಷ್ಯವು
ಮಕ್ಕಳ ಕೈಯಲ್ಲಿಹುದು
ಮುಂದಿನ ಭಾರತದ ಅಡಿಪಾಯ
ಇಂದು ನಮ್ಮ ಕೈಯಲ್ಲಿಹುದು.
ಬೆಳೆಸಿರಿ ಮಕ್ಕಳನು ಹೂವಂತೆ
ಯಾವಾಗಲೂ ಖುಷಿಯಲಿ ನಗುವಂತೆ
ವಿದ್ಯೆ ಬುದ್ಧಿ ತಿಳಿವಳಿಕೆಯ ನೀಡಿ
ಬೆಳೆಸಿರಿ ಮಕ್ಕಳನು ಬಾಗುವ ಬಳ್ಳಿಯಂತೆ
ಮಹಾಂತೇಶ ಎಸ್. ಪಾಟೀಲ

ಬುಧವಾರ, ಜೂನ್ 20, 2018

ಮಿನುಗು ಮಿನುಗು ಸಣ್ಣ ತಾರೆ

ಮಿನುಗು ಮಿನುಗು ಸಣ್ಣ ತಾರೆ
ತುಂಬಾ ಕುತೂಹಲ ನನಗೆ ನೀನು ಯಾರೇ
ಮೇಲೆ ಮೇಲು ಪ್ರಪಂಚ ತುಂಬಾ ಎತ್ತರದಲಿ
ವಜ್ರದ ಹೊಳಪು ಕಾಣುತಿದೆ ಆಕಾಶದಲಿ
ಮಿನುಗು ಮಿನುಗು ಸಣ್ಣ ತಾರೆ
ತುಂಬಾ ಕುತೂಹಲ ನನಗೆ ನೀನು ಯಾರೇ

ಸೂರ್ಯ ಹೋದ ನಂತರ ಬೆಳಗುವನು
ಅಲ್ಲಿ ಏನೂ ಇಲ್ಲದಾಗ ಅವನು ಹೊಳೆಯುವನು
ಅದರ ನಂತರ ತೋರಿಸುವೆ ನಿನ್ನ ಸಣ್ಣ ಬೆಳಕು ನೀನು
ಮಿನುಗು ಮಿನುಗು ಎಲ್ಲ ರಾತ್ರಿ ನೀನು
ಮಿನುಗು ಮಿನುಗು ಸಣ್ಣ ತಾರೆ
ತುಂಬಾ ಕುತೂಹಲ ನನಗೆ ನೀನು ಯಾರೇ

ತುಂಬಾ ಆಳವಾದ ದಟ್ಟ ನೀಲಿ ಆಕಾಶದಲಿ
ನನ್ನ ಪರದೆ ಮೂಲಕ ಆಗಾಗ್ಗೆ ಇಣುಕಿ ನೋಡುವೆ
ನೀನು ಕಣ್ಣು ಮುಚ್ಚುವುದಿಲ್ಲ ಎಂದಿಗೂ
ಬೆಳಗ್ಗೆ ಸೂರ್ಯ ಹುಟ್ಟುವವರೆಗೂ
ಮಿನುಗು ಮಿನುಗು ಸಣ್ಣ ತಾರೆ
ತುಂಬಾ ಕುತೂಹಲ ನನಗೆ ನೀನು ಯಾರೇ

ಮಿನುಗು ಮಿನುಗು ಸಣ್ಣ ತಾರೆ
ತುಂಬಾ ಕುತೂಹಲ ನನಗೆ ನೀನು ಯಾರೇ

ಅನುವಾದ : by ಹರೀಶ್ ಶೆಟ್ಟಿ, ಶಿರ್ವ (Twinkle, twinkle)

ಭಾನುವಾರ, ಮೇ 20, 2018

ಗಡಿಯಾರದ ಸಡಗರ



ಕೋಳಿ ಕೂಗಿತೇಳು ಕಂದ!
ಸೂರ್ಯ ಪೂರ್ವದಲಿ ಬಂದ

ಹೆಚ್ಚು ಮಲಗಲೇನು ಚಂದ?
ಬಾ! ಕಂದ ಬಾ!
ಟಿಕ್! ಟಾಕ್! ಟಿಕ್! ಟಾಕ್!
ಟಿಕ್! ಟಿಕ್! ಟಿಕ್!

ಹಲ್ಲನುಜ್ಜಿ ತಿಂಡಿ ತಿಂದು
ಪಾಠವೋದಿ ಬಳಿಕ ಮಿಂದು
ಊಟಮಾಡಿ ಶಾಲೆಗೆಂದು
ಬಾ! ಕಂದ ಬಾ!
ಟಿಕ್! ಟಾಕ್! ಟಿಕ್! ಟಾಕ್!
ಟಿಕ್! ಟಿಕ್! ಟಿಕ್!

ಶಾಲೆ ಮುಗಿದ ಬಳಿಕ ಓಟ
ಸಂಜೆವರೆಗೆ ಆಟ ಪಾಟ
ಮನೆಗೆ ಬಂದು ಸ್ತೋತ್ರಪಾಠ
ಬಾ! ಕಂದ ಬಾ!
ಟಿಕ್! ಟಾಕ್! ಟಿಕ್! ಟಾಕ್!
ಟಿಕ್! ಟಿಕ್! ಟಿಕ್!

ರಾತ್ರೆ ದೇವಗಡ್ಡ ಬಿದ್ದು
ಊಟಮಾಡಿ ನಿದ್ರಿಸಿದ್ದು
ನಾಳೆ ತಿರುಗಿ ಬೇಗನೆದ್ದು
ಬಾ! ಕಂದ ಬಾ!
ಟಿಕ್! ಟಾಕ್! ಟಿಕ್! ಟಾಕ್!
ಟಿಕ್! ಟಿಕ್! ಟಿಕ್!
-ಜಿ. ಪಿ. ರಾಜರತ್ನಂ

1.. ಜಾಹೀರಾತು

2.ಜಾಹೀರಾತು