fly

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಗುರುವಾರ, ನವೆಂಬರ್ 12, 2015

ದೀಪಾವಳಿ


          ಈಗ ಎಲ್ಲೆಲ್ಲೂ ದೀಪಾವಳಿಯ ಸಡಗರ. ಪೌರಾಣಿಕ ಕಥನಗಳಲ್ಲಿ ಬೆಸುಗೆಗೊಂಡಿರುವ ಈ ಪರ್ವದ ಆಚರಣೆ ಕುರಿತು ಮಹತ್ವ ಸಾರುವ ಕಾರ್ಯಗಳು ಎಲ್ಲೆಡೆ ನಡೆಯುತ್ತಿವೆ. ಆದರೆ ಇದೇ ವೇಳೆ, ದೀಪಾವಳಿ ಆಚರಣೆ ಹಿಂದೆ ವೈಜ್ಞಾನಿಕ ಕಾರಣಗಳೂ ಇದ್ದು ಇದು ಪ್ರಕೃತಿಯೊಂದಿಗೆ ಬೆಸೆದುಕೊಂಡಿದೆ ಎಂಬ ಅಂಶ ಮಾತ್ರ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಇದರ ಬಗ್ಗೆ ತಿಳಿದುಕೊಳ್ಳುತ್ತಾ ಹೋದರೆ ಅಚ್ಚರಿಯ ಬಾಗಿಲು ತೆರೆದುಕೊಳ್ಳುತ್ತಾ ಹೋಗುತ್ತದೆ.
ರೈತ ಸಮುದಾಯದಲ್ಲಿ ಎರಡು ಪ್ರಮುಖ ಹಬ್ಬಗಳಿವೆ. ಅವು ಒಂದು ದೀಪಾವಳಿ, ಇನ್ನೊಂದು ಸಂಕ್ರಾಂತಿ. ದೀಪಾವಳಿ, ಬೆಳೆಗಳಲ್ಲಿ ಹೂವು ಕಟ್ಟುವ ಸಮಯ. ಹೂವು ಸಮರ್ಪಕವಾಗಿ ಪರಾಗಸ್ಪರ್ಶ ಹೊಂದಿದರೆ ಮಾತ್ರ ಸಂಕ್ರಾಂತಿ ಸಮಯದಲ್ಲಿ ಉತ್ತಮ ಕೊಯ್ಲು.
          ದೀಪಾವಳಿ ಸಸ್ಯಜಗತ್ತಿನ ಬಹುಮುಖ್ಯ ಸಮಯ. ಏಕೆಂದರೆ, ಇದೇ ಸಮಯದಲ್ಲೇ ಕೀಟಗಳ ಕಾಟ ಅಧಿಕವಾಗಿರುತ್ತದೆ. ಹಾಗಾಗಿ, ರೈತಸಮುದಾಯದಲ್ಲಿ ದೀಪಾವಳಿಯೆಂದರೆ ಪಟಾಕಿ ಹಚ್ಚುವುದಲ್ಲ. ಅದು ನೈಜವಾಗಿ ದೀಪಗಳ ಹಬ್ಬ. 
ತುಮಕೂರು ಭಾಗದ ಉದಾಹರಣೆಯನ್ನು ತೆಗೆದುಕೊಳ್ಳೋಣ. ದೀಪಾವಳಿ ಸಂದರ್ಭದಲ್ಲಿ ಸಾವಿರಾರು ಮಹಿಳೆಯರು ದೀಪಗಳನ್ನು ಹೊತ್ತು, ತೋಪಿನ ಕಡೆ ರಾತ್ರಿ ಸಮಯದಲ್ಲಿ ಮೆರವಣಿಗೆ ಹೋಗುತ್ತಾರೆ ಇಲ್ಲಿ. ಇದು ರಾತ್ರಿಯೇ ಏಕೆ ನಡೆಯುತ್ತದೆಂಬುದು ಕುತೂಹಲಕಾರಿ. ಮಂಡ್ಯ-ಮೈಸೂರು ಭಾಗದಲ್ಲಿ ರಾತ್ರಿಹೊತ್ತು ಹುಲಿವಾನ ಅಥವಾ ಹುಲಿವಾಹನದಲ್ಲಿ, ಇಡೀ ರಾತ್ರಿ ದೇವರನ್ನು ಹೊತ್ತು ಪಂಜಿನ ಮೆರವಣಿಗೆ ಊರಿನಲ್ಲಿ ಸಾಗುತ್ತದೆ. ಇಲ್ಲಿನ ಪ್ರತೀ ಆಚರಣೆಯನ್ನು ಕೊಂಚ ಸೂಕ್ಷ್ಮವಾಗಿ ಅರ್ಥೈಸಿಕೊಂಡರೆ, ದೀಪಾವಳಿಯ ಆಚರಣೆ ಅಚ್ಚರಿಯೆನಿಸುತ್ತದೆ.
       ಪಂಜುಗಳು ರಾತ್ರಿಪೂರ ಉರಿಯಲೆಂದು, ಅನೇಕ ಪದರದ ಬಟ್ಟೆಗಳನ್ನು ಕಟ್ಟಿ, ಸಾಮಾನ್ಯವಾಗಿ ಹೊಂಗೆ ಎಣ್ಣೆ ಹಚ್ಚುತ್ತಾರೆ. ಹೊಂಗೆಯಿಂದ ಕಮಟು ವಾಸನೆ ಹೊಮ್ಮುತ್ತದೆ. ಹುಲಿವಾನ ಮನೆಯ ಮುಂದೆ ಬಂದಾಗ ಊರಿನ ಪ್ರತಿಯೊಬ್ಬರು ಹರಳೆಣ್ಣೆಯ ದೀಪದ ಆರತಿ ಬೆಳಗುತ್ತಾರೆ. ಬೆಳಕಿನ ಪ್ರಕಾಶತೆಗೆ, ಪತಂಗ, ಕೀಟಗಳು  ಆಕರ್ಷಿಸಲ್ಪಡುತ್ತವೆ. ಈ ರೀತಿ ಇಡೀ ಊರೇ ತೊಡಗಿಕೊಂಡಾಗ, ಸಾಕಷ್ಟು ಪ್ರಮಾಣದ ಹೊಗೆ ಉತ್ಪತ್ತಿಯಾಗುತ್ತದೆ. ಮೆರವಣಿಗೆ ಊರ ಹೊರಗಿನ ಗುಡಿವರೆಗೂ ಸಾಗುತ್ತದೆ. ಅಲ್ಲಿನ ದೇವರಿಗೆ ಸಿಹಿಯಾಗಿರುವ ಎಡೆಯನ್ನಿಡಲಾಗುತ್ತದೆ.
            ದೊಡ್ಡಬಳ್ಳಾಪುರ, ದೇವನಹಳ್ಳಿ ಭಾಗದ ಕಾಟಮ್ಮರಾಯನ/ಕಾಟರಾಯನ ಪೂಜೆ ಈ ಆಚರಣೆಗೆ ಬಹಳ ಹತ್ತಿರವಾಗಿದೆ. ಈ ಎಡೆಯನ್ನು ಕಬಳಿಸಲು ಹಕ್ಕಿಗಳು ಆಗಮಿಸುತ್ತವೆ. ಹಕ್ಕಿಗಳು ಒಂದೆಡೆ ಸೇರುತ್ತವೆ. ಇದೇ ಹಕ್ಕಿಗಳು ಬೆಳೆಗಳಿಗೆ ತೊಂದರೆ ಕೊಡುವ ಕೀಟಗಳನ್ನು ಭಕ್ಷಿಸಿ, ರೈತಸ್ನೇಹಿಯಾಗಿರುತ್ತವೆ. ಉದಾಹರಣೆಗೆ, ಸಾಮಾನ್ಯವಾಗಿ ಭತ್ತದ ಗದ್ದೆಯಲ್ಲಿ ಕಾಣಸಿಗುವ ಮುನಿಯಾ ಹಕ್ಕಿಗಳ ದಂಡು, ಭತ್ತದ ನಡುವೆ ಹುದುಗಿರುವ ಕೀಟಗಳನ್ನು ಹಿಡಿದು ತಿನ್ನುತ್ತವೆ.
ಹಾಗಾಗಿಯೇ ಇಂದಿಗೂ ನಮ್ಮ ಹಳ್ಳಿಗಳ ಹೊಲಗಳಲ್ಲಿ, ಒಂದು-ಒಂದೂವರೆ ಅಡಿ ಉದ್ದದ ಕಲ್ಲಿನ ದೇವಸ್ಥಾನಗಳು ಕಾಣಸಿಗುತ್ತವೆ. ಇಲ್ಲಿ ಸಾಮಾನ್ಯವಾಗಿ ಎರಡು ಗುಂಡಿನ ಕಲ್ಲುಗಳನ್ನಿರಿಸಿ, ಮಾರಮ್ಮ, ದಂಡಮ್ಮ, ಕಾಟಮ್ಮ, ಕಾಟರಾಯ ಎಂದೋ ಹೆಸರಿಸಿ, ಆಗಾಗ ಎಡೆಯಿಡುತ್ತಾರೆ. ಈ ಎಡೆಗಳನ್ನು ತಿನ್ನಲು ಹಕ್ಕಿಗಳು ಬಂದೇ ಬರುತ್ತವೆ. ಹಕ್ಕಿಗಳಿಗೆ ಎಡೆಯಿಟ್ಟು ಕರೆಯವ ಆಚರಣೆ ಪ್ರಕೃತಿಯೊಂದಿಗಿನ ಮಾನವನ ಅನುಸಂಧಾನದ ಕುರುಹಷ್ಟೇ.
      ಇವು ನೈಸರ್ಗಿಕ ಸಮತೋಲನದ ಮಾರ್ಗಗಳಾಗಿವೆ. ರಾಸಾಯನಿಕಗಳು ತಿಳಿದಿರದಿದ್ದ ಕಾಲಘಟ್ಟದಲ್ಲಿ ರೈತಸಮುದಾಯಗಳು ಕಂಡುಕೊಂಡಿದ್ದ ‘ನೆಲದ ನ್ಯಾಯ’ದ ಆಚರಣೆಗಳು ಮೇಲೆ ಹೆಸರಿಸಿದಂತಹವುಗಳೇ ಆಗಿರುತ್ತಿದ್ದವು. ಕಾಡಾಗಿದ್ದ ನೆಲವನ್ನು ಆರಂಭಕ್ಕಾಗಿ ಪರಿವರ್ತಿಸಿದ ನಂತರ ಅಲ್ಲಿನ ಸಂಘರ್ಷಗಳನ್ನು ಎದುರಿಸಲು, ಪ್ರಕೃತಿಯನ್ನು ಖುಷಿ ಪಡಿಸಲು ಇಂತಹ ಆಚರಣೆಗಳು ಅವಶ್ಯಕವಾಗಿದ್ದವೇನೋ...
ಹಬ್ಬಗಳು ಪೂರ್ಣ ಪ್ರಮಾಣದಲ್ಲಿ ಆಚರಿಸಲಾಗುತ್ತಿದ್ದ ಸಂದರ್ಭದಲ್ಲಿ, ಊರು ಎಂದರೆ ಕೇವಲ ನೂರರ ಆಸುಪಾಸಿನ ಮನೆಗಳಿದ್ದ ಹಳ್ಳಿಯಷ್ಟೇ ಆಗಿರುತ್ತಿತ್ತು. ಊರ ಹೊರಗಿನ ದೇವಸ್ಥಾನವೇ ಆ ಹಳ್ಳಿಯ ಗಡಿಯೂ ಆಗಿರುತ್ತಿತ್ತು. ಮುಂದಿನ ಹಳ್ಳಿಯೂ ಹಬ್ಬವನ್ನು ಆಚರಿಸುತ್ತಿತ್ತು. ಈ ಒಟ್ಟು ಪ್ರಕ್ರಿಯೆಯಲ್ಲಿ ಹೂವು ಕಾಯಾಗಲು ತೊಡಕಾಗುವ ಕೀಟಗಳು ಕಡಿಮೆಯಾಗುತ್ತವೆ. ಹುಲಿವಾನದ ಮೆರವಣಿಗೆ ಪ್ರಕೃತಿಗೆ ಹತ್ತಿರದ ಆಚರಣೆಯಾಗಿದ್ದರೂ, ಊಳಿಗಮಾನ್ಯ ವ್ಯವಸ್ಥೆ ಪರಿಧಿಯಲ್ಲೇ ಆಚರಿಸಲಾಗುತ್ತಿತ್ತು.
           ಪಂಜನ್ನು ಅಗಸನೇ ಹಿಡಿಯುತ್ತಿದ್ದ, ಹುಲಿವಾನದ ಅಲಂಕಾರ ಆಚಾರಿಯೂ, ತಮಟೆಯನ್ನು ತಳಸಮುದಾಯವು ಇತ್ಯಾದಿಯಾಗಿ ಭಾಗವಹಿಸುತ್ತಿದ್ದರು. ಇವೆಲ್ಲವನ್ನು ಮೀರಿ, ದೀಪಾವಳಿ ಸಮಯದಲ್ಲಿ ಊರು-ಕೇರಿಯ ದುಡಿಯುವ ವರ್ಗವೆಲ್ಲಾ ಬೆರೆತು ಅಹೋರಾತ್ರಿ ಮೆರವಣಿಗೆ ಹೊರುತ್ತಾ, ಕೊರವಂಜಿ, ಹುಲಿವರಸೆ, ಕೋಲಾಟದಲ್ಲಿ ಮಿಂದೇಳುತಿದ್ದರು.
ಚಿಕ್ಕಮಗಳೂರು ಭಾಗದಲ್ಲಿ ದೀಪಾವಳಿ ಸಮಯದಲ್ಲಿ ತಿಪ್ಪೆ ಪೂಜೆ ಮಾಡುತ್ತಾರೆ. ಅಲ್ಲೇ ದೀಪವನ್ನು ಹಚ್ಚಿಡುತ್ತಾರೆ. ಮ್ಯಾಂಗನೀಸ್, ಕಬ್ಬಿಣ, ಕ್ಯಾಲ್ಸಿಯಂನಂತಹ ಬಹುಮುಖ್ಯ ಸಸ್ಯ ಅವಶ್ಯಕಗಳು ತಿಪ್ಪೆಯಲ್ಲೇ ದೊರೆಯುವುದರಿಂದ, ತಿಪ್ಪೆಪೂಜೆ ಸಾಂಸ್ಕೃತಿಕವಾಗಿ ಶ್ರೀಮಂತ ಆಚರಣೆಯೆಂದರೆ ಅತಿಶಯೋಕ್ತಿಯಲ್ಲ.
           ಕರ್ನಾಟಕದ ಅನೇಕ ಭಾಗದಲ್ಲಿ ದೀಪಾವಳಿ ಸಮಯದಲ್ಲಿ ಎರಡು ಕ್ರಿಯೆಗಳು ಕಾಣಸಿಗುತ್ತವೆ. ಒಂದು ಅಧಿಕವಾಗಿ ಸಲ್ಫರ್ ತುಂಬಿದ ಪಟಾಕಿಗಳನ್ನು ಸ್ಫೋಟಿಸುವುದು, ಎರಡನೆಯದು, ಮನೆಗಳನ್ನು ಸೆಗಣಿ ಉಂಡೆಯ-ಮಣ್ಣಿನ ದೀಪಗಳಿಂದ ಅಲಂಕರಿಸುವುದು. ಹೂಬಿಡುವ ಸಮಯಕ್ಕೆ ಕೀಟಗಳ ಕಾಟ ಅಧಿಕ. ಇವುಗಳ ನಿರ್ನಾಮಕ್ಕೆ ಸಲ್ಫರ್ ಅವಶ್ಯಕ. ಸಲ್ಫರ್ ಸ್ಫೋಟಗೊಂಡಾಗ, ಗಾಳಿಯಲ್ಲಿನ ಆಮ್ಲಜನಕದೊಂದಿಗೆ ಬೆರೆತು, ಸಲ್ಫರ್ ಡೈ ಆಕ್ಸೈಡ್ ಆಗಿ ಪರಿವರ್ತಿತವಾಗುತ್ತವೆ. ಇವುಗಳನ್ನು ಗಿಡಮರಗಳು ಹೀರಿಕೊಳ್ಳುತ್ತವೆ.
          ಗಿಡಮರಗಳಿಗೆ ತಗಲುವ ಕೀಟಬಾಧೆಯ ಮುಕ್ತಿಗೆ ಈ ರೀತಿ ಮಾಡುತ್ತಿದ್ದರೇನೋ. ಇದರ ಬಗ್ಗೆ ಇನ್ನಷ್ಟು ಅಧ್ಯಯನಗಳು ನಡೆದರಷ್ಟೇ ದೃಢೀಕರಿಸಬಹುದು. ಎರಡನೆಯ ಆಚರಣೆಯಲ್ಲಿ, ಸೆಗಣಿ ಅಥವಾ ತೊಪ್ಪೆಯ ಉಂಡೆಯನ್ನು ಚಪ್ಪಟೆ ಮಾಡಿ, ಅದರ ಸುತ್ತ ಉಚ್ಚೆಳ್ಳಿನ ಹೂಗಳನ್ನು ಸಿಕ್ಕಿಸಿ, ಅದರ ಮೇಲೆ ದೀಪ ಇಡುತ್ತಿದ್ದರು. ದೀಪದ ಬಿಸಿಗೆ, ಸೆಗಣಿಯ ನೀರಿನಾಂಶ ಮರೆಯಾಗುತ್ತದೆ. ಒಣಗಿದ ಸೆಗಣಿ, ಬಹುಬೇಗ ಮಣ್ಣಿನೊಂದಿಗೆ ಬೆರೆಯುತ್ತದೆ. ಉಚ್ಚೆಳ್ಳಿನ ಹೂವಿನಲ್ಲಿರುವ ರಾಸಾಯನಿಕ ಅಂಶಗಳು, ಮುಖ್ಯವಾಗಿ ಎಲ್ಲಾ ಬಗೆಯ ಹಳದಿ ಹೂಗಳಲ್ಲಿರುವ ಮ್ಯಾಂಗನೀಸ್, ಸಸ್ಯಗಳಿಗೆ ಅವಶ್ಯಕವಾದ ಜೈವಿಕ ಸಾಮಗ್ರಿಗಳಾಗಿರುತ್ತವೆ. ಈ ಕ್ರಿಯೆಯನ್ನು, ಇನ್ನೊಂದು ರೀತಿಯಲ್ಲೂ ವಿಮರ್ಶಿಸಬಹುದು;
         ದನಗಳ ಹೊಟ್ಟೆಯಿಂದ ಹೊರಬಂದ ಸೆಗಣಿಯಲ್ಲಿ ಅನೇಕ ಬೀಜಗಳೂ ಸೇರಿರುತ್ತವೆ. ಸೆಗಣಿ ಉಂಡೆಯ ಮೇಲಿನ ದೀಪದ ಪೂಜೆ ಬೀಜಗಳನ್ನು ಪೋಷಿಸುವ ಪದ್ಧತಿ, ಬೀಜಪ್ರಸರಣದ, ಬೀಜ ಸಂರಕ್ಷಣೆಯ ಕ್ರಮವಾಗಿರಬಹುದಲ್ಲವೇ? ಕಣಜ, ಜಾಡಿಯೊಳಗೆ ಹೂತಿಟ್ಟ ಬೀಜಕ್ಕೆ ಆಯಸ್ಸು ಕಡಿಮೆ; ಹೆಚ್ಚೆಂದರೆ ಕೇವಲ ಎರಡು ವರ್ಷಗಳಲ್ಲಿ ಎಂಬ್ರಿಯೋ ಅಥವಾ ಬೀಜದ ಭ್ರೂಣ ಸತ್ತುಹೋಗುತ್ತದೆ. ಆದ್ದರಿಂದ ನೆಲದಲ್ಲೇ ಸಹಜವಾಗಿ ಸಂರಕ್ಷಿಸುವ ಪದ್ಧತಿ ಸೂಕ್ತ ಎಂಬ ಜ್ಞಾನವೂ ಇರಬಹುದು. ಸಂಕ್ರಾಂತಿ ಸಮಯದಲ್ಲಿ ಆಚರಿಸಲಾಗುವ ‘ಭೂಮಿಪೂಜೆ’ ಈ ಪ್ರಮೇಯಕ್ಕೆ ಪುಷ್ಟಿ ನೀಡುತ್ತದೆ. ನವಧಾನ್ಯಗಳನ್ನು ಭೂಮಿಗೆ ಚೆಲ್ಲಿ ಪೂಜಿಸುವುದು, ಮಣ್ಣಲ್ಲಾದರೂ  ಇವು ಜೀವಂತವಾಗಿರಲಿ ಎಂಬ ನಂಬಿಕೆಯಿಂದ.
          ಮನೆಯ ಸಿಂಗಾರ, ಮನೆಯೊಡತಿಯ ಸಂಭ್ರಮ, ಎತ್ತುಗಳ ಜೋರಾಟವೆಲ್ಲವನ್ನೂ ಮೀರಿ, ಮನುಷ್ಯ ಪ್ರಕೃತಿಯೊಂದಿಗೆ ಹೊಂದಿದ್ದ ಜೈವಿಕ-ಸಾವಯವ ಸಂಬಂಧದ ಎಳೆಗಳು ನಗರೀಕರಣದ ಭರದಲ್ಲಿ ಮೌಢ್ಯದ ಪರಾಮಾವಧಿಗಳನೆಸುತ್ತಿರುವುದು ಶೋಚನಿಯ. ರೈತನೇ ಸಾವಿನ ಕುಣಿಕೆಯಲ್ಲಿರುವ ದಿನಗಳಲ್ಲಿ, ಪ್ರಕೃತಿಯನ್ನು ಖುಷಿಪಡಿಸುವ ಆತನ ಆಚರಣೆಗಳು ಕಣ್ಮರೆಯಾಗುತ್ತಿರುವುದು ಯಾವುದೇ ಆಶ್ಚರ್ಯಕರ ಸಂಗತಿಯಲ್ಲ.
          ಇಂದು, ದೀಪಾವಳಿ ತನ್ನ ನೈಜ ಪ್ರಾಮುಖ್ಯ ಕಳೆದುಕೊಂಡು, ಮಾರಕ-ವಿನಾಶದ ಹಬ್ಬವಾಗಿದೆ. ಹಲವರಿಗೆ ನೋವನ್ನು, ನಮ್ಮ ಆರೋಗ್ಯವನ್ನು ಹಾಳುಗೆಡುವ, ಪ್ರಕೃತಿಯನ್ನು ಹಿಂಸಿಸುವ ಹಬ್ಬವಾಗಿಬಿಟ್ಟಿದೆ. ಕತ್ತಲನ್ನು ಓಡಿಸುವ ಬೆಳಕಿನ ಹಬ್ಬ, ಹಲವರ ಬದುಕನ್ನು ಕತ್ತಲೆಗೆ ದೂಡುವ ಕ್ರೂರಹಬ್ಬವಾಗಿಬಿಟ್ಟಿದೆ. ಅಕ್ಷರ ಜ್ಞಾನವಿಲ್ಲದ ರೈತಸಮುದಾಯದ ದೀಪಾವಳಿ ಆಚರಣೆಗೂ, ಆಧುನಿಕ ಶಿಕ್ಷಣ ಪಡೆದ ನಮ್ಮಗಳ ದೀಪಾವಳಿ ಆಚರಣೆಗೂ ಯಾವುದಾದರೂ ಸಾಮ್ಯವಿದೆಯೇ? ಕನಿಷ್ಠ, ಪ್ರಕೃತಿಯನ್ನು ಮೆಚ್ಚಿಸುವ ಒಂದಾದರೂ ಅಂಶವಿದೆಯೇ ಎಂಬುದನ್ನು ಯೋಚಿಸಬೇಕು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು