ಜನನ | ಅನಂತ ನಾಗರಕಟ್ಟೆ ಸೆಪ್ಟೆಂಬರ್ ೪, ೧೯೪೮ |
---|---|
ವೃತ್ತಿ | ಚಲನಚಿತ್ರ ನಟ |
ಪರಿವಿಡಿ
೨ ಸಪ್ತಭಾಷಾ ನಟ
೩ ವಿವಿಧ ಭಾಷೆಗಳ ಪ್ರಸಿದ್ಧ ಚಿತ್ರಗಳಲ್ಲಿ
೪ ಕನ್ನಡ ಚಿತ್ರರಂಗದಲ್ಲಿ
೫ ರಾಜಕಾರಣದ ಬದುಕು
೬ ಕನ್ನಡ ಚಿತ್ರಗಳು
೭ ಹಿಂದಿ ಚಿತ್ರಗಳು
೮ ಆಂಗ್ಲ ಚಿತ್ರಗಳು
೯ ಜನಪ್ರಿಯ ಧಾರಾವಾಹಿಗಳು
ಜೀವನ
ಅನಂತನಾಗ್ ಅವರು ಜನಿಸಿದ್ದು ಸೆಪ್ಟೆಂಬರ್ ೪, ೧೯೪೮ರಲ್ಲಿ. ಅಮ್ಮ ಆನಂದಿ, ತಂದೆ ಸದಾನಂದ ನಾಗರಕಟ್ಟೆ. ಪ್ರಾರಂಭಿಕ ಓದು ದಕ್ಷಿಣ ಕನ್ನಡದ ಆನಂದ ಆಶ್ರಮದಲ್ಲಿ. ಆ ನಂತರದಲ್ಲಿ ಉತ್ತರ ಕನ್ನಡದ ಚಿತ್ರಾಪುರ ಮಠದಲ್ಲಿ ನೆರವೇರಿತು. ಹೆಚ್ಚಿನ ಓದಿಗೆ ಮುಂಬೈನಲ್ಲಿ ನೆಲೆಸಿದ್ದ ಅನಂತ್, ಮರಾಠಿ ರಂಗಭೂಮಿಯನ್ನು ಎಂಟು ವರ್ಷಗಳ ಕಾಲ ಬೆಳಗಿದರು.ಅನಂತನಾಗ್ ಅವರ ಸಹೋದರ ಶಂಕರನಾಗ್ ಮತ್ತು ಪತ್ನಿ ಗಾಯತ್ರಿ ಅನಂತನಾಗ್. ಇವರಿಬ್ಬರೂ ಚಲನಚಿತ್ರರಂಗದಲ್ಲಿ, ಸಕ್ರಿಯರಾಗಿದ್ದವರು.
ಸಪ್ತ (7) ಭಾಷಾ ನಟ
ಚಿತ್ರರಂಗದಲ್ಲಿ ಅವರಿವರನ್ನು ‘ಓ, ಅವರು ಪಂಚ ಭಾಷಾ ತಾರೆ ಎಂದು ಕೆಲವರನ್ನು ಕರೆಯುವುದುಂಟು’. ಅನಂತನಾಗ್ ಸಪ್ತಭಾಷಾ ತಾರೆ. ಕನ್ನಡ, ಹಿಂದಿ, ಮರಾಠಿ, ತಮಿಳು, ತೆಲುಗು, ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಅವರು ನೆನಪಿನಲ್ಲಿ ಉಳಿಯುವಂತಹ ಪಾತ್ರಗಳಲ್ಲಿ ನಟಿಸಿ ಎಲ್ಲೆಲ್ಲೂ ವಿಜ್ರಂಭಿಸಿದ್ದಾರೆ.ವಿವಿಧ ಭಾಷೆಗಳ ಪ್ರಸಿದ್ಧ ಚಿತ್ರಗಳಲ್ಲಿ
ಅನಂತನಾಗ್ ಅವರು ಶ್ಯಾಂ ಬೆನೆಗಾಲ್ ಅವರ ‘ಅಂಕುರ್’ ಚಿತ್ರದಿಂದ ಚಿತ್ರರಂಗಕ್ಕೆ ಬಂದವರು.ನಿಶಾಂತ್, ಕಲಿಯುಗ್, ಗೆಹ್ರಾಯಿ, ಭೂಮಿಕಾ, ಮಂಗಳಸೂತ್ರ್. ಯುವ, ಕೊಂಡುರಾ, ಉತ್ಸವ್-ಮುಂತಾದ ಹಲವಾರು ಹಿಂದಿ ಚಿತ್ರಗಳಲ್ಲಿ ಅನಂತ್ ನಟಿಸಿದ್ದಾರೆ. ಕೆಲವೊಂದು ಪಾತ್ರಗಳಿಗೆ ಅನಂತ್ ಬೇಕೇ ಬೇಕು ಎಂದು ಬಯಸುವ ಚಿತ್ರರಂಗದ ಪ್ರಸಿದ್ಧರು ಎಲ್ಲೆಡೆಯ ಮೂಲೆ ಮೂಲೆಗಳಲ್ಲಿದ್ದಾರೆ. ಮರಾಠಿಯ ಅಮೋಲ್ ಪಾಲೇಕರ್ ನಿರ್ದೇಶನದ ‘ಅನಹತ್’, ಮಲಯಾಳಂನ ‘ಸ್ವಾತಿ ತಿರುನಾಳ್’, ತೆಲುಗಿನ ‘ಅನುಗ್ರಹಂ’, ಇಂಗ್ಲಿಷಿನ ‘ಸ್ಟಂಬಲ್’ ಮುಂತಾದ ಹಲವಾರು ಚಿತ್ರಗಳನ್ನು ಈ ನಿಟ್ಟಿನಲ್ಲಿ ಗಮನಿಸಬಹುದು. ಇವೆಲ್ಲಾ ಯಾರೋ ಒಬ್ಬ ನಟರು ಬಂದು ಅಭಿನಯಿಸಿ ಹೋದರು ಎಂಬಂತಹ ಪಾತ್ರಗಳಲ್ಲದೆ ರಾಷ್ಟ್ರಮಟ್ಟದಲ್ಲಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನಾರ್ಹವಾದ ಚಿತ್ರಗಳು ಎಂಬುದನ್ನು ನಾವು ಗಮನಿಸಬೇಕು.
ಕನ್ನಡ ಚಿತ್ರರಂಗದಲ್ಲಿ
ಅನಂತನಾಗ್ ಅವರು ಕನ್ನಡ ಚಿತ್ರರಂಗಕ್ಕೆ ಬಂದದ್ದು ೧೯೭೩ರಲ್ಲಿ ಮೂಡಿಬಂದ ಪಿ. ವಿ. ನಂಜರಾಜ ಅರಸ್ ಅವರ ‘ಸಂಕಲ್ಪ’ ಚಿತ್ರದಿಂದ. ‘ಸಂಕಲ್ಪ’ ಕನ್ನಡದಲ್ಲಿ ಬಂದ ಹೊಸ ಅಲೆಯ ಚಿತ್ರಗಳಲ್ಲಿ ಗಮನಾರ್ಹವಾದ ಚಿತ್ರ.ಅನಂತನಾಗ್ ಅವರನ್ನು ಕನ್ನಡಕ್ಕೆ ಅಮೂಲ್ಯವಾಗಿ ಉಳಿಸಿದ ಚಿತ್ರ ೧೯೭೫ರಲ್ಲಿ ಮೂಡಿಬಂದ ಜಿ.ವಿ. ಅಯ್ಯರ್ ಅವರ ‘ಹಂಸಗೀತೆ’. ‘ಹಂಸಗೀತೆ’ಯಿಂದ ಅನಂತನಾಗ್ ಕಲಾ ಸಾಂಸ್ಕೃತಿಕ ಲೋಕಗಳಲ್ಲಿ ಜನಪ್ರಿಯರಾದರು. ಮುಂದೆ ೧೯೭೭ರ ದೊರೈ ಭಗವಾನರ ‘ಬಯಲುದಾರಿ’ ಅವರನ್ನು ಕನ್ನಡದ ಮನೆಮನೆಯಲ್ಲೂ ಮನಮನಗಳಲ್ಲೂ ಪ್ರತಿಷ್ಟಾಪಿಸಿತು.
ಅನಂತ್ ಅಭಿನಯಿಸಿದ ಕೆಲವೊಂದು ಚಿತ್ರಗಳಂತೂ ಬೇರೆಯವರಿಗೆ ಅದು ಸಾಧ್ಯ ಎಂದು ಊಹಿಸಲೂ ಕಷ್ಟಕರವಾದದ್ದು. ಅನಂತ್ ಅವರು ಅಭಿನಯಿಸಿರುವ ವಿವಿಧ ಭಾಷೆಗಳ ಪ್ರಸಿದ್ಧ ಚಿತ್ರಗಳಿರಲಿ ಕನ್ನಡದ್ದೇ ಚಿತ್ರಗಳನ್ನು ನೋಡಿದರೂ ‘ಹಂಸಗೀತೆ’, ‘ಕನ್ನೇಶ್ವರ ರಾಮ’, ‘ಬರ’, ‘ಅವಸ್ಥೆ’, ‘ಉದ್ಭವ’, ‘ಮಿಂಚಿನ ಓಟ’, ‘ಆಕ್ಸಿಡೆಂಟ್’, ‘ಬೆಳದಿಂಗಳ ಬಾಲೆ’, ‘ಮತದಾನ’, ‘ಮೌನಿ’, ‘ಅನುರೂಪ’, ‘ರಾಮಾಪುರದ ರಾವಣ’, ‘ಸಿಂಹಾಸನ’, ‘ಅನ್ವೇಷಣೆ’, ‘ಮಾಲ್ಗುಡಿ ಡೇಸ್’ ಇವೆಲ್ಲಾ ಅನಂತ್, ನಾಸಿರುದ್ದೀನ್ ಷಾ ಅಂಥಹ ಕೆಲವರಿಗೆ ಮಾತ್ರ ಸಾಧ್ಯವಿರುವಂತದ್ದು.
ಅನಂತ್ ಅವರನ್ನು ಎಷ್ಟು ವಿಭಿನ್ನವಾಗಿ ಬೇಕಿದ್ದರೂ ಬಳಸಬೇಕೆಂಬುದಕ್ಕೆ ‘ನಾನಿನ್ನ ಬಿಡಲಾರೆ’ ಚಿತ್ರ ಒಂದು ಅಪೂರ್ವ ನಿದರ್ಶನ. ‘ಬಯಲು ದಾರಿ’ ಚಿತ್ರದ ನಂತರದಲ್ಲಿ ಕನ್ನಡದ ಪ್ರಸಿದ್ಧ ನಿರ್ದೇಶಕ ಜೋಡಿ ದೊರೈ ಭಗವಾನರು ಅನಂತನಾಗ್ ಅವರನ್ನು ಗುತ್ತಿಗೆಗೆ ಹಿಡಿದಷ್ಟು ಒಂದಾದ ಮೇಲೊಂದು ಸುಂದರ ಚಿತ್ರಗಳನ್ನು ನಿರ್ಮಿಸಿದರು. ಅದರಲ್ಲೂ ಅನಂತನಾಗ್ ಲಕ್ಷ್ಮೀ ಜೋಡಿ ಅಂತೂ, ಇವರು ನಿಜ ಜೀವನದಲ್ಲಿ ಸತಿ ಪತಿಗಳು ಎಂಬ ಹೃದ್ಭಾವ ಮೂಡಿಸುವಷ್ಟು ಸುಂದರ ಪಾತ್ರಗಳಲ್ಲಿ ಸುಂದರ ಜೋಡಿಯಾಗಿ ಕಂಗೊಳಿಸಿದರು. ‘ಬೆಂಕಿಯ ಬಲೆ’, ‘ಚಂದನದ ಗೊಂಬೆ’, ‘ಇಬ್ಬನಿ ಕರಗಿತು’, ಮುದುಡಿದ ತಾವರೆ ಅರಳಿತು’, ‘ಮಕ್ಕಳಿರಲವ್ವ ಮನೆತುಂಬ’, ‘ನೋಡಿ ಸ್ವಾಮಿ ನಾವಿರೋದು ಹೀಗೆ’, ‘ನಾ ನಿನ್ನ ಬಿಡಲಾರೆ’, ‘ಧೈರ್ಯಲಕ್ಷ್ಮಿ’, ‘ಬಿಡುಗಡೆಯ ಬೇಡಿ’ ಮುಂತಾದ ಚಿತ್ರಗಳಲ್ಲಿ ಈ ಜೋಡಿ ಸಾಮಾನ್ಯ ಜನಜೀವನವನ್ನು ಪ್ರತಿಬಿಂಬಿಸಿದ ಪಾತ್ರಗಳು ಅವಿಸ್ಮರಣೀಯ. ‘ಅರುಣರಾಗ’, ‘ಅನುಪಮ’, ‘ಮುಳ್ಳಿನಗುಲಾಬಿ’, ‘ಹೊಸ ನೀರು’ , ‘ದೇವರ ಕಣ್ಣು’, ‘ಜನ್ಮಜನ್ಮದ ಅನುಬಂಧ’, ‘ಬಾಡದ ಹೂವು’ ಮುಂತಾದವು ಅನಂತ್ ಇತರ ನಟಿಯರೊಂದಿಗೆ ನಟಿಸಿದ ಇಂತದ್ದೇ ಮನಮುಟ್ಟುವ ಚಿತ್ರಗಳ ಸಾಲಿಗೆ ಸೇರಿದಂತಹವು.
ಒಬ್ಬ ಸುರದ್ರೂಪಿ ನಟರಾಗಿದ್ದ ಅನಂತನಾಗ್ ನಾಯಕನಾಗಿ ಹಾಸ್ಯಪಾತ್ರಗಳಲ್ಲಿ ಮಿಂಚಿದ್ದು, ಚಲನಚಿತ್ರರಂಗದಲ್ಲಿ ಇನ್ಯಾವುದೇ ಹೋಲಿಕೆಗೂ ಸಿಗದಷ್ಟು ಮಿಗಿಲಾದದ್ದು. ‘ಚಾಲೆಂಜ್ ಗೋಪಾಲಕೃಷ್ಣ’, ‘ಗೋಲ್ ಮಾಲ್ ರಾಧಾಕೃಷ್ಣ’, ‘ಸುಖ ಸಂಸಾರಕ್ಕೆ ಹನ್ನೆರಡು ಸೂತ್ರಗಳು’, ‘ಹೆಂಡ್ತೀಗ್ಹೇಳ್ಬೇಡಿ’, ‘ಗೌರಿ ಗಣೇಶ’, ‘ಗಣೇಶ ಸುಬ್ರಮಣ್ಯ’, ‘ಮನೇಲಿ ಇಲಿ ಬೀದೀಲಿ ಹುಲಿ’, ‘ಧೈರ್ಯಲಕ್ಷ್ಮಿ’, ‘ನಾರದ ವಿಜಯ’, ‘ಹಾಸ್ಯರತ್ನ ರಾಮಕೃಷ್ಣ’, ‘ಯಾರಿಗೂ ಹೇಳ್ಬೇಡಿ’, ‘ಗಾಯತ್ರಿ ಮದುವೆ’, ‘ಇನ್ನೊಂದು ಮದುವೆ’, ‘ಯಾರಿಗೆ ಸಾಲುತ್ತೆ ಸಂಭಳ’, ‘ಉಂಡು ಹೋದ ಕೊಂಡುಹೋದ’, ‘ಉದ್ಭವ’, ‘ಹೆಂಡ್ತಿ ಬೇಕು ಹೆಂಡ್ತಿ’, ‘ಸಮಯಕ್ಕೊಂದು ಸುಳ್ಳು’, ‘ನಾನೇನೂ ಮಾಡ್ಲಿಲ್ಲ’ ಇಂಥಹ ಹಲವಾರು ಚಿತ್ರಗಳನ್ನು ಈ ಪಟ್ಟಿಗೆ ಸೇರಿಸಬಹುದು. ಸದ್ಯದಲ್ಲೇ ಇಂಥಹ ನಿರೀಕ್ಷೆ ಹುಟ್ಟಿಸಿರುವ ‘ಸಕ್ಕರೆ’ ಎಂಬ ಚಿತ್ರ ಬಿಡುಗಡೆಯ ಸಮೀಪದಲ್ಲಿದೆ.
ತಾವು ಅಷ್ಟೊಂದು ದೊಡ್ಡ ನಟರಾದರೂ ಅನಂತ್ ಇತರ ನಾಯಕರು ಪ್ರಧಾನವಾಗಿದ್ದ ಚಿತ್ರಗಳಲ್ಲಿನ ಬೆಂಬಲಿತ ಪಾತ್ರಗಳಲ್ಲಿ ನಟಿಸಲು ಎಂದೂ ಹಿಂಜರಿದವರಲ್ಲ. ರಾಜ್ ಕುಮಾರ್ ಅವರೊಡನೆ ‘ಕಾಮನಬಿಲ್ಲು’; ವಿಷ್ಣುವರ್ಧನರೊಡನೆ ‘ನಿಷ್ಕರ್ಷ’, ‘ಮತ್ತೆ ಹಾಡಿತು ಕೋಗಿಲೆ’, ‘ಜೀವನದಿ’; ರವಿಚಂದ್ರನ್ ಜೊತೆ ‘ರಣಧೀರ’, ಶಾಂತಿಕ್ರಾಂತಿ’; ಉಪೇಂದ್ರರೊಡನೆ ‘ಹಾಲಿವುಡ್’ ಇವೇ ಮುಂತಾದ ಅನಂತ್ ನಟಿಸಿದ ಅನೇಕ ಚಿತ್ರಗಳನ್ನು ಈ ಪಟ್ಟಿಯಲ್ಲಿ ಸೇರಿಸಬಹುದು.
‘ಮುಂಗಾರುಮಳೆ’, ‘ಗಾಳಿಪಟ’ ಮುಂತಾದ ಚಿತ್ರಗಳಲ್ಲಿ ಪೋಷಕ ಪಾತ್ರವಹಿಸಿದ್ದರೂ ಚಿತ್ರದ ಚೌಕಟ್ಟಿನಲ್ಲಿ ಅವರು ಪ್ರಧಾನವಾಗಿ ಎದ್ದು ಕಾಣುತ್ತಾರೆ.
ಭಾರತದ ಖ್ಯಾತ ಧಾರಾವಾಹಿಗಳಲ್ಲೊಂದಾದ ತಮ್ಮ ಸಹೋದರ ದಿವಂಗತ ಶಂಕರನಾಗ್ ನಿರ್ದೇಶನದ ಮಾಲ್ಗುಡಿ ಡೇಸ್ ಧಾರಾವಾಹಿಯಲ್ಲಿ ಅಭಿನಯಿಸಿದ್ದಲ್ಲದೆ ಕನ್ನಡದಲ್ಲಿಯೂ ಕಿರುತೆರೆಯ ಹಲವಾರು ಪ್ರಸಿದ್ಧ ಧಾರಾವಾಹಿಗಳಲ್ಲೂ ಅಭಿನಯಿಸಿದ್ದಾರೆ.
ಅನಂತ್ ಯಾವುದೇ ಪಾತ್ರವಾದರೂ, ಎಷ್ಟೇ ಚಿಕ್ಕ ಸ್ಪೇಸ್ ಇದ್ದರೂ ಅದರ ವ್ಯಾಪ್ತಿಯನ್ನು ವಿಸ್ತೃತವಾಗಿ ಪ್ರೇಕ್ಷಕನ ಅನುಭಾವಕ್ಕೆ ತರಬಲ್ಲ ಅಸಮಾನ್ಯ ನಟರೆನಿಸಿದ್ದು , ಎಲ್ಲೇ ಇದ್ದರೋ, ಹೇಗೇ ಇದ್ದರೂ, ಯಾವುದೇ ಸಣ್ಣ ಪಾತ್ರವೇ ಇದ್ದರೂ ಯಾವುದೇ ಸೀಮೆಗಳ ಬಂಧನವಿಲ್ಲದೆ ಅನಂತರಾಗಿರುವವರು.
ರಾಜಕಾರಣದ ಬದುಕು
ಬೆಂಗಳೂರಿನ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಿಂದ ಚುನಾಯಿತರಾಗಿ, ಕರ್ನಾಟಕ ಸರ್ಕಾರದಲ್ಲಿನ ಶಾಸಕರಾದ ಅನಂತನಾಗ್, ನಂತರ ಜೆ.ಹೆಚ್.ಪಟೇಲ್ ಅವರ ಮಂತ್ರಿಮಂಡಲದಲ್ಲಿ ಮಂತ್ರಿಗಳಾಗಿದ್ದರು.ಕನ್ನಡ ಚಿತ್ರಗಳು
ಹಿಂದಿ ಚಿತ್ರಗಳು
- ಅಂಕುರ
- ನಿಶಾಂತ
- ಕಲಿಯುಗ್
- ಗೆಹ್ರಾಯುನ್
- ಉತ್ಸವ್
- ಯೂವಾ
ಆಂಗ್ಲ ಚಿತ್ರಗಳು
ಜನಪ್ರಿಯ ಧಾರಾವಾಹಿಗಳು
- ಪ್ರೀತಿ ಇಲ್ಲದ ಮೇಲೆ
- ಗರ್ವ
- ದುರ್ಗಾ
- ಮಾಲಗುಡಿ ಡೇಜ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.