ಟಿ.ಎಂ.
ಸತೀಶ್
ದಾವಣಗೆರೆ ಜಿಲ್ಲೆಯ ಹರಪನಹಳ್ಳಿಯಿಂದ 8 ಕಿಮೀ ದೂರದಲ್ಲಿರುವ ಪುಟ್ಟಗ್ರಾಮ ಬಗಲಿ ಅಥವಾ ಬಾಗಳಿ. ಹಿಂದೆ ಬಳ್ಗುಲಿ ಎಂದು ಹೆಸರಾಗಿದ್ದ ಈ ಗ್ರಾಮ ಹೊಯ್ಸಳರ 2ನೇ ಬಲ್ಲಾಳನ ಕಾಲದಲ್ಲಿ ಪ್ರಮುಖ ಪಟ್ಟಣವಾಗಿತ್ತು ಎಂದೂ ತಿಳಿದುಬರುತ್ತದೆ.
ದಾವಣಗೆರೆ ಜಿಲ್ಲೆಯ ಹರಪನಹಳ್ಳಿಯಿಂದ 8 ಕಿಮೀ ದೂರದಲ್ಲಿರುವ ಪುಟ್ಟಗ್ರಾಮ ಬಗಲಿ ಅಥವಾ ಬಾಗಳಿ. ಹಿಂದೆ ಬಳ್ಗುಲಿ ಎಂದು ಹೆಸರಾಗಿದ್ದ ಈ ಗ್ರಾಮ ಹೊಯ್ಸಳರ 2ನೇ ಬಲ್ಲಾಳನ ಕಾಲದಲ್ಲಿ ಪ್ರಮುಖ ಪಟ್ಟಣವಾಗಿತ್ತು ಎಂದೂ ತಿಳಿದುಬರುತ್ತದೆ.
ಇಲ್ಲಿರುವ ಕಲ್ಯಾಣ ಚಾಳುಕ್ಯರ
ಕಾಲದ ಕಲ್ಲೇಶ್ವರ ದೇವಾಲಯ ಕಲಾತ್ಮಕವಾಗಿ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಕೆರೆಯ
ಏರಿಯ ಮೇಲಿರುವ ಈ ದೇವಾಲಯದಲ್ಲಿ ಕಲಾತ್ಮಕ ಕೆತ್ತನೆಗಳಿಂದ ಕೂಡಿದ
64 ಬಳಪದ ಕಲ್ಲಿನ
ನುಣುಪಾದ ಕಂಬಗಳಿವೆ. ಈ ಎಲ್ಲ ಕಂಬಗಳೂ ಒಂದಕ್ಕಿಂತ ಒಂದು ಭಿನ್ನವಾದ
ಕಲಾಶ್ರೀಮಂತಿಕೆಯಿಂದ ಕೂಡಿದ್ದು ವೈವಿಧ್ಯಮಯವಾಗಿವೆ. ನಕ್ಷತ್ರಾಕಾರ, ವರ್ತುಲಾಕಾರ,
ಷಟ್ಕೋಣಾಕಾರ,
ಚೌಕಾರಾರ ಹೀಗೆ ವಿವಿಧ ರೂಪದಲ್ಲಿರುವ ತಲಾ 8 ಅಡಿ ಎತ್ತರದ ಕಂಬಗಳ
ಪೈಕಿ ಕೆಲವು ಕಂಬಗಳ ಕೆಳಭಾಗದಲ್ಲಿ ಲತೆಗಳು ಹಾಗೂ ಲತಾಂಗಿಯರ ನರ್ತನ ಶಿಲ್ಪಗಳು,
ಶಿಲ್ಪಿಯ ನೈಪುಣ್ಯತೆಗೆ ಹಿಡಿದ ಕನ್ನಡಿಯಾಗಿವೆ.
ವಿಶಾಲವಾದ ಕಲ್ಲೇಶ್ವರ ದೇಗುಲದ
ಮುಖಮಂಟಪ ಮನೋಹರವಾಗಿದೆ. ಮಹಾಮಂಟಪದಲ್ಲಿ 3 ಅಡಿ ಎತ್ತರದ ಸುಂದರ ನಂದಿಯ
ವಿಗ್ರಹವಿದೆ. ಛಾವಣಿಯಲ್ಲಿ ಅಷ್ಟದಿಕ್ಪಾಲಕರ ಉಬ್ಬುಶಿಲ್ಪಗಳಿವೆ.
ಗರ್ಭಗೃಹದಲ್ಲಿರುವ ಶಿವಲಿಂಗದ ಕೆತ್ತನೆಯೂ ಮೋಹಕವಾಗಿದೆ.ಮಪ್ರಾಕಾರದಲ್ಲಿ ಹಾಗೂ
ಮಹಾಮಂಟಪದಲ್ಲಿ ಅನೇಕ ಸುಂದರವಾದ ವಿಗ್ರಹಗಳಿವೆ.
ಭಿತ್ತಿಗಳಲ್ಲಿ ಕಲಾತ್ಮಕವಾದ
ಕೆತ್ತನೆಯ ನಡುವೆ ಚಾಲಂದ್ರಗಳನ್ನು ನಿರ್ಮಿಸಲಾಗಿದೆ. ದೇವಾಲಯದ ಅರೆಮಂಟಪದ
ಚೌಕಟ್ಟುಗಳು ಕುಸೂರಿಶಿಲ್ಪಗಳಿಂದ ಚಿತ್ತಾಕರ್ಷಕವಾಗಿವೆ.
ದೇವಾಲಯದ ಮಹಾಮಂಟಪದ
ಉತ್ತರದಿಕ್ಕಿನಲ್ಲಿ ಉಗ್ರನರಸಿಂಹಸ್ವಾಮಿಯ ಗುಡಿ ಇದೆ. ಇಲ್ಲಿ ಸುಮಾರು ಮನುಷ್ಯನ
ಎತ್ತರದ ಉಗ್ರನರಸಿಂಹನ ಶಿಲ್ಪವಿದೆ. ಗದಾಚಕ್ರಧಾರಿಯಾದ ನರಸಿಂಹ ಉಗ್ರನಾಗಿ
ಬಾಯಿತೆರೆದು, ತನ್ನ ತೊಡೆಯ ಮೇಲೆ ಹಿರಣ್ಯಕಶಿಪುವನ್ನು ಮಲಗಿಸಿಕೊಂಡು ಉಳಿದೆರೆಡು
ಕೈಗಳಿಂದ ರಕ್ಕಸನ ಎದೆಬಗೆದು, ಕರುಳು ಹೊರಗೆಳೆಯುತ್ತಿರುವ ಸೂಕ್ಷ್ಮ ಕೆತ್ತನೆಯ
ಕೃಷ್ಣಶಿಲೆಯ ಮೂರ್ತಿ ಮನಮೋಹಕವಾಗಿದೆ. ಹಿಂಬದಿಯಲ್ಲಿರುವ ಪ್ರಭಾವಳಿಯಲ್ಲಿ ಸುಂದರ
ಕೆತ್ತನೆಗಳಿವೆ. ಪಾದದ ಬಳಿ ಪ್ರಹ್ಲಾದ ಸಹಿತ ನಾಲ್ಕು ಪುಟ್ಟ ವಿಗ್ರಹಗಳಿವೆ.
ದೇವಾಲಯದ ಪ್ರಾಕರದಲ್ಲಿರುವ
ಮತ್ತೊಂದು ಮಂದಿರ ಸೂರ್ಯಭಗವಾನನದು. ಈ ಗುಡಿಯಲ್ಲಿ 5 ಅಡಿ ಎತ್ತರದ ಸೂರ್ಯನಾರಾಯಣನ
ವಿಗ್ರಹವಿದೆ.
ಹೋಗುವುದು ಹೇಗೆ-
ಹರಪನಹಳ್ಳಿಯಿಂದ ಹೊಸಪೇಟೆಗೆ ಹೋಗುವ ಮಾರ್ಗದಲ್ಲಿ 6 ಕಿಲೋ ಮೀಟರ್ ದೂರ ಕ್ರಮಿಸಿದ
ಬಳಿಕ ಸಿಂಗಾರ ಕ್ರಾಸ್ ಸಿಗುತ್ತದೆ. ಅಲ್ಲಿಂದ ಬಾಗಳಿಗೆ ಕೇವಲ 2 ಕಿಲೋ ಮೀಟರ್.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.