ಗಂಗೋತ್ರಿ ಹಿಮನದಿ ಭಾರತದ ಉತ್ತರಾಖಂಡ ರಾಜ್ಯದ ಉನ್ನತ ಹಿಮಾಲಯ ಪ್ರಾಂತ್ಯದಲ್ಲಿರುವ ಒಂದು ಹಿಮನದಿ. ಗಂಗಾ ನದಿಯ ಮೂಲವಾದ ಗಂಗೋತ್ರಿ ಹಿಮನದಿಯು ಹಿಮಾಲಯದ ಅತಿ ದೊಡ್ಡ ಹಿಮನದಿಗಳಲ್ಲಿ ಒಂದು. ಇದರಲ್ಲಿರುವ ಹಿಮ ೨೭ ಘನ ಕಿಲೋಮೀಟರ್‌ಗಳಷ್ಟೆಂದು ಅಂದಾಜು ಮಾಡಲಾಗಿದೆ.
ಗಂಗೋತ್ರಿ ಹಿಮನದಿಯು ಸುಮಾರು ೩೦ ಕಿ.ಮೀ. ಉದ್ದವಾಗಿದ್ದು ೨ ರಿಂದ ೪ ಕಿ.ಮೀ.ಗಳಷ್ಟು ಅಗಲವಾಗಿದೆ. ಈ ಹಿಮನದಿಯ ಸುತ್ತಲೂ ಗಂಗೋತ್ರಿ ಶ್ರೇಣಿಯ ಹಿಮಾಲಯ ಶಿಖರಗಳಿವೆ. ಇವುಗಳಲ್ಲಿ ಶಿವಲಿಂಗ, ಥಲಯ್ ಸಾಗರ್, ಮೇರು ಮತ್ತು ಭಾಗೀರಥಿ-೩ ಶಿಖರಗಳು ಮುಖ್ಯವಾದವು. ಈ ಸರಣಿಯ ಅತಿ ಎತ್ತರದ ಶಿಖರವಾದ ಚೌಖಂಬಾದ ತಳದಲ್ಲಿ ಉಗಮಿಸುವ ಈ ಹಿಮನದಿಯು ವಾಯವ್ಯ ದಿಕ್ಕಿನಲ್ಲಿ ಸರಿಯುತ್ತದೆ (ಹರಿಯುತ್ತದೆ). ಗಂಗೋತ್ರಿ ಹಿಮನದಿಯ ಕೊನೆಯು ಹಸುವಿನ ಮುಖದ ಆಕಾರದಲ್ಲಿದ್ದು ಅದನ್ನು ಗೋಮುಖ ಎಂದು ಕರೆಯಲಾಗುತ್ತದೆ. ಗೋಮುಖದಲ್ಲಿ ಹಿಮನದಿಯು ನೀರಾಗಿ ಹರಿಯಲಾರಂಭಿಸುವುದರಿಂದ ಈ ಸ್ಥಾನವನ್ನು ಗಂಗಾ ಮೂಲವೆಂದು ತಿಳಿಯಲಾಗುತ್ತದೆ. ಗೋಮುಖ ಹಿಂದೂ ಶ್ರದ್ಧಾಳುಗಳಿಗೆ ಒಂದು ಅತಿ ಪಾವನ ಕ್ಷೇತ್ರವಾಗಿದೆ. ಗೋಮುಖವು ಶಿವಲಿಂಗ ಪರ್ವತದ ಬುಡದಲ್ಲಿದೆ. ಗಂಗೋತ್ರಿಯಿಂದ ೧೮ ಕಿ.ಮೀ. ದೂರದಲ್ಲಿರುವ ಗೋಮುಖವನ್ನು ಕಾಲ್ನಡಿಗೆಯಲ್ಲಿ ಕಠಿಣಹಾದಿಯನ್ನು ಕ್ರಮಿಸಿ ತಲುಪಬಹುದಾಗಿದೆ.ಇಲ್ಲಿಂದ ಮುಂದೆ ಮತ್ತಷ್ಟು ದುರ್ಗಮ ಹಾದಿಯನ್ನು ಕ್ರಮಿಸಿದಲ್ಲಿ ಶಿವಲಿಂಗ ಪರ್ವತದ ತಪ್ಪಲಾದ ಹಾಗೂ ಧಾರ್ಮಿಕವಾಗಿ ಪವಿತ್ರ ಸ್ಥಳವಾದ ತಪೋವನವನ್ನು ತಲುಪಬಹುದು. ಶಿವಲಿಂಗ ಪರ್ವತವು ಗಂಗಾಮಾತೆಯ ನಿಜಮೂಲವಾಗಿದೆ.
ಗಂಗೋತ್ರಿಯಿಂದ ತಪೋವನಕ್ಕೆ ಒಟ್ಟು ೨೨ ಕಿ.ಮಿ.ಗಳಷ್ಟಾಗುತ್ತದೆ. ಸರಿಯಾದ ಮಾರ್ಗದರ್ಶಕರಿಲ್ಲದೆ ಸಾಗುವುದು ಅಪಾಯಕಾರಿ. ಗಂಗೋತ್ರಿ>ಚಿರಬಾಸ>ಭೊಜವಾಸ>ಗೋಮುಖ>ತಪೋವನ.
ಗಂಗೋತ್ರಿ ಹಿಮನದಿಯ ಪರಿಸರದಲ್ಲಿ ಮಾನವ ಚಟುವಟಿಕೆಗಳು ಹೆಚ್ಚುತ್ತಿದ್ದು ಈ ಕಾರಣದಿಂದಾಗಿ ಮತ್ತು ಒಟ್ಟಾರೆ ಪರಿಸರ ಹಾನಿಯಿಂದಾಗಿ ಗಂಗೋತ್ರಿ ಹಿಮನದಿಯು ತೀವ್ರ ಗತಿಯಲ್ಲಿ ಕುಗ್ಗುತ್ತಿದೆ. ಇದು ಹೀಗೇ ಮುಂದುವರಿದಲ್ಲಿ ಇನ್ನು ಕೆಲ ದಶಕಗಳಲ್ಲಿ ಗಂಗೋತ್ರಿ ಹಿಮನದಿಯು ಸಂಪೂರ್ಣವಾಗಿ ಮಾಯವಾಗುವ ಭೀತಿ ವ್ಯಕ್ತಪಡಿಸಲಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.