ಶನಿವಾರ, ಏಪ್ರಿಲ್ 22, 2017

ಪಿತೃ ದೇವೋಭವ...

ಜನ್ಮನೀಡಿದ ತಂದೆ, ತಾಯಿಯ ಋಣವನ್ನ ತೀರಿಸೋದಕ್ಕೆ ಆಗದೇ ಇರ್ ವಿಷಯ. ೮ನೇ ಜನವರಿಯಂದು ನಮ್ಮನ್ನಗಲಿದ ನಮ್ಮ ತಂದೆಯವರಿಗೆ ನಾನು ಇಲ್ಲಿ ಕೇವಲ ನನ್ನ ನಮನವನ್ನ ಸಲ್ಲಿಸುತ್ತಿದ್ದೇನೆ.

ಹುಟ್ಟಿದಾಗಿನಿಂದಲೂ ಕೈ ಹಿಡಿದು,
ಗುಟುಕು ನೀಡಿ ನಮ್ಮ ಬೆಳೆಸಿದ
ಕೈಗಳು ಇಂದು ಕೇವಲ ಒಂದು ಹಿಡಿ ಭಸ್ಮ...

ಪುಟ್ಟ ಹೆಜ್ಜೆಗಳನಿಟ್ಟು ನಡೆವಾಗ
ಬಿದ್ದು ಅತ್ತಾಗ ಎತ್ತಿಹಿಡಿದು ಮುದ್ದಾಡಿದ
ಕೈಗಳು ಇಂದು ಕೇವಲ ಅರೆ ಬೆಂದ ಮೂಳೆ ಮಾತ್ರ...

ಅಂದು ನಮಗೆ ಮಾತಕಲಿಸಿದ
ತೊದಲು ನುಡಿಯ ಕೇಳಿ ಆನಂದಿಸಿದ
ಮಹಾನ್ ತೇಜ ಇಂದು ಕೇವಲ ನೆನಪು ಮಾತ್ರ...

ತುತ್ತು ಕೂಳಿಗೋಸ್ಕರ ಸಾಲ ಮಾಡಿ
ಭವಿಷ್ಯದ ಕನಸ ಹೆಣೆದು ಕೈ ಹಿಡಿದು
ಜೊತೆಗೂಡಿ ನಡೆಸಿದ ಕ್ಷಣಗಳು ಇಂದು ಕೇವಲ ಸ್ಮರಣಿಕೆ...

ಬಾಳಪಯಣದಿ ಸಾಗುತಿದ್ದ ನೌಕೆಗೆ
ಇಂದು ನಾವಿಕನಿಲ್ಲ, ದಿಕ್ಕು ತಪ್ಪದೇ
ಪಯಣವ ಸಾಗಿಸುತ್ತಿದ್ದ ದಿಕ್ಸೂಚಿ ಇಲ್ಲ...

ದಾರಿಕಾಣದೇ ಮುಂದೇನೆಂದು
ಯೋಚಿಸುತ್ತಾ ನಿಂತಿರುವಾಗ ಸರಿಯಾದ
ಮಾರ್ಗವ ತೋರಿದ ಮಾರ್ಗದರ್ಶಿಯು ಇಂದಿಲ್ಲ...

ಆಗಸದಿ ಮೂಡಿದ್ದ ರವಿಯ ಕಿರಣದ
ತೇಜ ಇಂದು ಕಾಣುತ್ತಿಲ್ಲ,
ಎಲ್ಲೇಲ್ಲೂ ಕತ್ತಲು, ಕಗ್ಗತ್ತಲು...

ತುಂಬಿದ ಮನೆಯಲ್ಲಿ ನೆಲೆಸಿದ್ದ
ಕಲರವದ ಸದ್ದು, ಇಂದು
ಅಡಗಿ ಬರೀ ಮೌನ ತುಂಬಿದ ವಾತಾವರಣ...

ಕುಟುಂಬದೆಲ್ಲೆಡೆ ಸೂತಕದ ಛಾಯೆ,
ಮನೆಯ ಪ್ರತಿ ಹೆಜ್ಜೆಯಲ್ಲೂ
ನಿಮ್ಮದೇ ನೆನಪಿನ ಹೊದಿಕೆ...

ದುಃಖ ತುಂಬಿರುವ ಮನಕೆ ನಿಮ್ಮ
ಮಾತನು ಕೇಳುವ ತವಕ, ಕಣ್ಣೀರಿನಲಿ ಮುಳುಗಿರುವ
ಕಣ್ಣುಗಳಿಗೆ ನಿಮ್ಮ ನೋಡುವ ಕಾತರ...

ದೇಹ ನಾಶವಾದರೇನು ಆತ್ಮವೊಂದಿರಲು,
ಜೊತೆಯಿದ್ದು ದಾರಿ ತೋರಿಸಿ ತಂದೆ
ನಮ್ಮ ಮನ, ಮನೆಯಲ್ಲಿ ಶಾಂತಿ ನೆಲೆಸಿರಲು...
                                                                                                     Posted by Prashanth Urala. G

ಕಾಮೆಂಟ್‌ಗಳಿಲ್ಲ: