ಬಣ್ಣಗಳನ್ನು ಬಿಟ್ಟು ಹೇಗೆ ಬದುಕೋದು ನಾವು? ಅದು ಸಾಧ್ಯವೇ? ಎಲ್ಲಾ ವಸ್ತುಗಳಿಗೂ ಒಂದಲ್ಲಾ ಒಂದು ಬಣ್ಣ ಇದ್ದೇ ಇರುತ್ತದೆ. ನಾವು ಬಣ್ಣವೇ ಇಲ್ಲದ ಬಟ್ಟೆ ಹಾಕಿಕೊಳ್ಳಬೇಕು ಎಂದು ಇಷ್ಟಪಟ್ಟರೆ ಅದು ಯಾವತ್ತೂ ಸಿಗಲು ಸಾಧ್ಯವಿಲ್ಲ. ಬಣ್ಣವಿಲ್ಲದ ಯಾವುದನ್ನೂ ನಾವು ಊಹಿಸಿಕೊಳ್ಳಲು ಅಸಾಧ್ಯ.
ಕೆಲವು ಪ್ರಾಣಿಗಳಿಗೆ ಬಣ್ಣಗಳನ್ನು ಗುರುತಿಸುವುದು ಸಾಧ್ಯವಿಲ್ಲವಂತೆ. ಆದರೆ ಮನುಷ್ಯ ಅನಾದಿ ಕಾಲದಿಂದಲೂ ಬಣ್ಣದ ಜೊತೆಗೇ ಬೆಳೆದು ಹಾಗೂ ಬೆರೆತು ಬಂದಿದ್ದಾನೆ. ನಾಗರಿಕತೆಯ ಉಗಮದಿಂದಲೂ ಮನುಷ್ಯನ ಬದುಕಿನೊಂದಿಗೆ ಬಣ್ಣಗಳು ತಳುಕು ಹಾಕಿಕೊಂಡಿವೆ. ಹಾಗಾಗಿ ನಾವು ಬಣ್ಣಗಳಿಗೆ ಸಾಕಷ್ಟು ಆದ್ಯತೆ ನೀಡುತ್ತೇವೆ. ನಿತ್ಯ ಜೀವನದಿಂದ ಹಿಡಿದು ಹಬ್ಬ ಹರಿದಿನಗಳವರೆಗೆ ಪ್ರತಿ ಹಂತದಲ್ಲೂ ಬಣ್ಣಗಳ ಜೊತೆ ನಮ್ಮ ಒಡನಾಟವಿರುತ್ತದೆ.
ಬಣ್ಣಗಳಲ್ಲೂ ಶುಭ-ಅಶುಭ ಬಣ್ಣಗಳಿವೆ. ಎಲ್ಲಾ ಬಣ್ಣಗಳೂ ಕಣ್ಣಿಗೆ ಆನಂದವನ್ನುಂಟು ಮಾಡುತ್ತವೆಯಾದರೂ ಎಲ್ಲಾ ಬಣ್ಣಗಳನ್ನೂ ಎಲ್ಲಾ ಕಾರ್ಯಗಳಿಗೂ ಉಪಯೋಗಿಸುವುದಿಲ್ಲ. ಏಕೆಂದರೆ ಬಣ್ಣಗಳ ಜೊತೆಗೆ ನಂಬಿಕೆಯೂ ಬಹಳ ಮುಖ್ಯವಾದ ನಂಟು ಹೊಂದಿದೆ. ನಮ್ಮ ಸಂಸ್ಕೃತಿಯಲ್ಲಿ ಹಾಗೂ ಪರಂಪರೆಯಲ್ಲಿ ಪ್ರತಿಯೊಂದು ಬಣ್ಣಕ್ಕೂ ಅದರದ್ದೇ ಆದ ವಿಭಿನ್ನ ವ್ಯಾಖ್ಯಾನಗಳಿವೆ. ಸಾಮಾನ್ಯವಾಗಿ ಮನೆಗಳಲ್ಲಿ ಕಪ್ಪು ಬಟ್ಟೆ ಹಾಕ್ಕೋಬೇಡ, ಕಪ್ಪು$ಬಣ್ಣದ ವಾಹನ ತಗೋಬೇಡ ಎನ್ನುವುದುಂಟು. ಕಪ್ಪು$ಬಣ್ಣದ ಚಪ್ಪಲಿ, ಬ್ಯಾಗ್ ಏನೇ ತೆಗೆದುಕೊಂಡರೂ ಕೆಲ ಮನೆಗಳಲ್ಲಿ ಹಿರಿಯರು ಅಪಸ್ವರ ಎತ್ತುತ್ತಾರೆ. ಏಕೆಂದರೆ ಕಪ್ಪು ಅಶುಭವೆಂದೂ ಅದು ಶನಿಗ್ರಹದ ಬಣ್ಣವೆಂದೂ ನಂಬಿಕೆ. ಕಪ್ಪು$ಬಣ್ಣದ ಬಟ್ಟೆ ಹಾಕಿಕೊಂಡ ದಿನ ಯಾವ ಕೆಲಸವೂ ಆಗುವುದಿಲ್ಲ, ಕಪ್ಪು$ಬಣ್ಣದ ವಾಹನ ತೆಗೆದುಕೊಂಡರೆ ಒಂದಲ್ಲಾ ಒಂದು ದಿನ ಆಕ್ಸಿಡೆಂಟ್ ಆಗುತ್ತದೆ ಎಂದು ಬಹಳ ಜನ ನಂಬುತ್ತಾರೆ. ನೀಲಿ ಬಣ್ಣ ಕೂಡ ಶನಿಗೆ ಪ್ರಿಯವಾದದ್ದೆಂದು ಅದನ್ನೂ ಸ್ವಲ್ಪ ದೂರವಿಟ್ಟಿರುತ್ತಾರೆ.
ಯಾವ ಬಣ್ಣಕ್ಕೆ ಏನರ್ಥ?
ಕಾಮನಬಿಲ್ಲಿನಲ್ಲಿರುವ ಏಳು ಬಣ್ಣಗಳಿಗೂ ನಮ್ಮ ಶಾಸ್ತ್ರದ ಪ್ರಕಾರ ಏಳು ಗ್ರಹಗಳನ್ನು ಪ್ರತಿಬಿಂಬಿಸುವ ಬಣ್ಣಗಳಿಗೂ ಸ್ವಲ್ಪ ವ್ಯತ್ಯಾಸವಿದೆ. ಕಾಮನಬಿಲ್ಲಿನ ಬಣ್ಣಗಳನ್ನು ಜ್ಞಾಪಕ ಇಟ್ಟುಕೊಳ್ಳಲು ಶಾಲೆಯಲ್ಲಿ ಒಂದು ಚುಟುಕಾದ ಪದ ಹೇಳಿಕೊಟ್ಟಿದ್ದು ನೆನಪಿದೆಯೇ? ವಿಬYಯಾರ್ (Vibgyor): ವೈಲೆಟ್, ಇಂಡಿಗೋ, ಬ್ಲೂ, ಗ್ರೀನ್, ಯಲ್ಲೋ, ಆರೆಂಜ್ ಮತ್ತು ರೆಡ್. ಈ ಏಳು ಬಣ್ಣಗಳು ನಮ್ಮ ಕಣ್ಣಿಗೆ ಕಾಮನಬಿಲ್ಲಿನಲ್ಲಿ ಕಾಣಿಸುತ್ತವೆ, ಈ ಏಳು ಬಣ್ಣಗಳೂ ಸೇರಿ ಬಿಳಿಯ ಬಣ್ಣವಾಗಿದೆ ಅಂತ ಹೇಳಿದ್ದರು. ಹಾಗೆಯೇ ನಮ್ಮ ಏಳು ಗ್ರಹಗಳು ಹಾಗೂ ಏಳು ದಿನಗಳು ಯಾವ ಯಾವ ಬಣ್ಣಗಳನ್ನು ಸೂಚಿಸುತ್ತವೆ ಎಂಬುದನ್ನು ನೋಡಿಕೊಂಡು ಆ ಬಣ್ಣಗಳ ಜೊತೆ ವ್ಯವಹರಿಸುವವರೂ ಇದ್ದಾರೆ. ಇತ್ತೀಚೆಗೆ ಬಹಳ ಜನರು ಪ್ರತಿದಿನ ಆಯಾ ದಿನದ ಪ್ರಕಾರ, ಆಯಾ ಗ್ರಹಕ್ಕೆ ಪ್ರಿಯವಾದ ಬಣ್ಣದ ಬಟ್ಟೆಯನ್ನೇ ಧರಿಸುತ್ತಾರೆ.
ಸೋಮವಾರ- ಹಾಲಿನ ಬಣ್ಣ,
ಮಂಗಳವಾರ-ಕೆಂಪು,
ಬುಧವಾರ-ಹಸಿರು,
ಗುರುವಾರ-ಹಳದಿ,
ಶುಕ್ರವಾರ-ಬಿಳಿ,
ಶನಿವಾರ-ನೀಲಿ
ಹೀಗೆ ಆಯಾ ದಿನಗಳಿಗೆ ತಕ್ಕಂತೆ ಬಣ್ಣದ ಉಡುಪು ಧರಿಸಿದರೆ ನಮ್ಮೆಲ್ಲ ಕೆಲಸಗಳಲ್ಲಿ ಗೆಲುವು ಕಾಣುತ್ತೇವೆಂಬ ನಂಬಿಕೆ ಇವರದು.
ಸೋಮವಾರ- ಹಾಲಿನ ಬಣ್ಣ,
ಮಂಗಳವಾರ-ಕೆಂಪು,
ಬುಧವಾರ-ಹಸಿರು,
ಗುರುವಾರ-ಹಳದಿ,
ಶುಕ್ರವಾರ-ಬಿಳಿ,
ಶನಿವಾರ-ನೀಲಿ
ಹೀಗೆ ಆಯಾ ದಿನಗಳಿಗೆ ತಕ್ಕಂತೆ ಬಣ್ಣದ ಉಡುಪು ಧರಿಸಿದರೆ ನಮ್ಮೆಲ್ಲ ಕೆಲಸಗಳಲ್ಲಿ ಗೆಲುವು ಕಾಣುತ್ತೇವೆಂಬ ನಂಬಿಕೆ ಇವರದು.
ಬಿಳಿ ಬಣ್ಣವನ್ನು ಶಾಂತಿಯ ಸಂಕೇತವೆಂದು ಕರೆದರೆ, ಕೆಲವರ ಮನೆಯ ಸಂಪ್ರದಾಯದ ಪ್ರಕಾರ ಬಿಳಿ ಸೀರೆಯನ್ನು ಗಂಡ ಬದುಕಿರುವಾಗ ಉಡಬಾರದು, ಗಂಡ ಸತ್ತ ನಂತರ ವಿಧವೆಯರು ಉಡಬೇಕು ಎಂದು ನಿಶ್ಚಯಿಸಿದ್ದಾರೆ. ಹಾಗೆಯೇ ಶುಭ ಸಮಾರಂಭಗಳಲ್ಲೂ ಬಣ್ಣಗಳ ಶಾಸ್ತ್ರ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಗರ್ಭಿಣಿಯರಿಗೆ ಸೀಮಂತ ಮಾಡುವಾಗ ಹಸಿರು ಸೀರೆಯನ್ನೇ ಉಡಿಸಬೇಕು, ಹಸಿರು ಬಳೆಗಳನ್ನೇ ತೊಡಿಸಬೇಕು, ಕೆಂಪು ಕುಂಕುಮವನ್ನೇ ಹಣೆಗಿಟ್ಟುಕೊಳ್ಳಬೇಕು, ಸೀರೆಗೆ ಮ್ಯಾಚಿಂಗ್ ಅಂತ ಹಸಿರು ಬಣ್ಣದ ಹಣೆಬೊಟ್ಟು ಇಟ್ಟುಕೊಳ್ಳಬಾರದು ಹೀಗೆ ನಾನಾ ಶಾಸ್ತ್ರಗಳನ್ನು ಹೇಳುತ್ತಾರೆ. ಮದುವೆಯ ಶಾಸ್ತ್ರದಲ್ಲಂತೂ ಒಬ್ಬೊಬ್ಬರ ಸಂಪ್ರದಾಯದ ಬಣ್ಣಗಳೂ ಬೇರೆ ಬೇರೆ. ಒಬ್ಬರ ಮನೆಯಲ್ಲಿ ಮದುವೆ ಹುಡುಗಿ ಧಾರೆಯ ಸಮಯದಲ್ಲಿ ಬಿಳೀ ಸೀರೆಯನ್ನೇ ಉಡಬೇಕು ಎಂದು ಹೇಳಿದರೆ, ಇನ್ನೊಬ್ಬರ ಮನೆಯಲ್ಲಿ ಕೆಂಪು ಸೀರೆಯನ್ನೇ ಧಾರೆಗೆ ಉಡಬೇಕು ಎನ್ನುತ್ತಾರೆ. ಮತ್ತೂಬ್ಬರು ಹಳದಿ-ಕೆಂಪು ಮಿ]ತ ಸೀರೆ ಉಟ್ಟು, ಮೇಲೆ ಹೊದಿಕೆ ಸೀರೆ ಹಸಿರು ಬಣ್ಣದ್ದಾಗಿರಬೇಕು ಎನ್ನುತ್ತಾರೆ. ಮದುವೆಗೂ ಮುನ್ನ ಕೆಲ ಮನೆಗಳಲ್ಲಿ ಬಣ್ಣದ ಸಲುವಾಗಿಯೇ ಜಗಳಗಳಾಗುವುದೂ ಇದೆ!
ಕೆಲವರಿಗೆ ಕೆಲವು ಬಣ್ಣಗಳು ಫೇವರಿಟ್ ಆದರೆ, ಮತ್ತೆ ಕೆಲವರು ಒಂದಷ್ಟು ಬಣ್ಣಗಳನ್ನು ದ್ವೇಷಿಸುವುದೂ ಉಂಟು. ಬಣ್ಣದ ಇಷ್ಟಾನಿಷ್ಟಗಳು ಅವರವರ ಕಣ್ಣಿಗೆ ಬಿಟ್ಟಿದ್ದು. ನಮಗಿಷ್ಟ ಆಗುವ ಬಣ್ಣ ಬೇರೆಯವರಿಗೂ ಇಷ್ಟ ಆಗಬೇಕು ಅಂತೇನೂ ಇಲ್ಲ.
ಸಿಗ್ನಲ್ ಲೈಟ್‌ನಲ್ಲಿ ಕೆಂಪು ಬಣ್ಣ ಬಂದರೆ ನಿಂತುಕೊಳ್ಳಬೇಕು, ಹಸಿರು ಬಣ್ಣ ಬಂದರೆ ಮುನ್ನಡೆಯ ಬೇಕು ಎಂದು ಟ್ರಾಫಿಕ್ ನಿಯಮವಿದೆ. ಇದನ್ನೇ ಬಹಳ ವಿಷಯಗಳಿಗೆ "ರೆಡ್ ಸಿಗ್ನಲ್' "ಗ್ರೀನ್ ಸಿಗ್ನಲ್' ಎಂದು ಬಳಸುತ್ತಿರುತ್ತೇವೆ. ಕೆಂಪು ತೋರಿಸಿದರೆ ನಿಷೇಧವೆಂದೂ, ಹಸಿರು ತೋರಿಸಿದರೆ ಒಪ್ಪಿಗೆಯೆಂದೂ ಅಲಿಖೀತ ನಿಯಮ. ಆದರೆ ಪ್ರೀತಿಯ ಸಂಕೇತ ಕೆಂಪು. ನಿಮ್ಮ ಪ್ರೀತಿಯ ಹುಡುಗಿ ಪ್ರೇಮಿಗಳ ದಿನದಂದು ಕೆಂಪು ಉಡುಪು ಧರಿಸಿ ಬಂದರೆ ಪ್ರೀತಿಗೆ ಓಕೆ ಸಿಗ್ನಲ್ ಕೊಟ್ಟಂತೆ. ನಾನು ನಿನ್ನ ಪ್ರೀತಿಸ್ತೀನಿ ಅಂತ ಪ್ರೊಪೋಸ್ ಮಾಡುವಾಗಲೂ ಕೆಂಪು ಬಣ್ಣದ ಗುಲಾಬಿಯನ್ನೇ ಕೊಡುವುದು. ಫ್ರೆಂಡ್‌ಶಿಪ್‌ಗೆ ಹಳದಿ ಬಣ್ಣದ ಉಡುಪು ಧರಿಸಿದರೆ, ಸೋದರತ್ವಕ್ಕೆ ಗುಲಾಬಿ ಬಣ್ಣ.
ಬದುಕಿನ ಬಣ್ಣ ಯಾವುದು?
ಬಣ್ಣಗಳು ಎಲ್ಲೆಲ್ಲೂ ಆವರಿಸಿಕೊಂಡಿವೆ. ನಮ್ಮ ದೇಶವನ್ನು ಪ್ರತಿನಿಧಿಸುವ ಧ್ವಜದಲ್ಲಿ ಕೇಸರಿ-ಬಿಳಿ-ಹಸಿರು ಪಟ್ಟಿಗಳಿವೆ ಮತ್ತು ನೀಲಿ ಬಣ್ಣದ ಚಕ್ರವಿದೆ. ನಾವು ಯಾವುದೇ ದೇಶಕ್ಕೆ ಹೋದರೂ ನಮ್ಮ ದೇಶದ ಬಾವುಟದ ಬಣ್ಣ ನೋಡಿದ ತಕ್ಷಣ ಮನದೊಳಗೆ ಅವ್ಯಕ್ತ ಆನಂದವಾಗುತ್ತದೆ.
ಬಣ್ಣ ನಮ್ಮ ವ್ಯಕ್ತಿತ್ವವನ್ನು ಸೂಚಿಸುತ್ತದೆ. ಪೀಠಗಳಲ್ಲಿ ವೇದಾಧ್ಯಯನ ಮಾಡುತ್ತಿರುವ ಮಕ್ಕಳಿಗೆ ಕೇಸರಿ ಬಣ್ಣದ ಉಡುಪು ಧರಿಸಲು ಗುರುಗಳು ಅನುಮತಿ ನೀಡುವುದಿಲ್ಲ. ಅವರು ಬಿಳಿ ಬಟ್ಟೆಯನ್ನೇ ಧರಿಸಬೇಕು. ಮಂತ್ರೋಪದೇಶವಾಗಿ ದೀಕ್ಷೆ ತೆಗೆದುಕೊಂಡ ನಂತರವಷ್ಟೇ ಕೇಸರಿ ಬಣ್ಣದ ಉಡುಪು ಧರಿಸಲು ಅನುಮತಿ ನೀಡುವುದು.
ಬಣ್ಣಗಳಿಗೆ ಒಬ್ಬೊಬ್ಬರೂ ಒಂದೊಂದು ಅರ್ಥ ಹೇಳಿಯಾರು. ಆದರೆ ಬದುಕಿನ ಬಣ್ಣ ಯಾವುದು? ಏಳು ಬಣ್ಣಗಳು ಸೇರಿ ಬಿಳಿ ಬಣ್ಣವಾಗುವ ಪ್ರಕ್ರಿಯೆಯಲ್ಲಿ ಅಡಗಿರುವ ಸಂದೇಶವೇನು? ಇದು ನಮ್ಮ ಬದುಕನ್ನು ರೂಪಿಸುವ ಅಂಶ.
ಸೃಷ್ಟಿಯಲ್ಲಿ ಏಳು ಬಣ್ಣಗಳಿರುವಂತೆ ಪ್ರತಿಯೊಬ್ಬರ ಬದುಕಿನಲ್ಲೂ ಬೇರೆ ಬೇರೆ ಬಣ್ಣಗಳನ್ನು ಸಾಂಕೇತಿಕವಾಗಿ ಪ್ರತಿನಿಧಿಸುವಂತೆ ವಿಭಿನ್ನ ಏರಿಳಿತಗಳಿರುತ್ತವೆ. ಒಂದೊಂದು ಬಣ್ಣವೂ ಹೇಗೆ ಸಂಪೂರ್ಣ ಭಿನ್ನವಾದ ನೋಟ ಹೊಂದಿದೆಯೋ ಹಾಗೆ ಪ್ರತಿಯೊಬ್ಬರ ಬದುಕಿನಲ್ಲೂ ಒಳ್ಳೆಯದು, ಕೆಟ್ಟದ್ದು, ಅತೃಪ್ತಿ ಹುಟ್ಟಿಸುವುದು, ಖುಷಿ ನೀಡುವುದು, ತಟಸ್ಥ ಭಾವನೆ ಹುಟ್ಟಿಸುವುದು, ದುಃಖ ತರುವಂಥದ್ದು, ಲಾಭ ನೀಡುವಂಥದ್ದು, ನಷ್ಟ ಮಾಡುವಂಥದ್ದು ಹೀಗೆ ನಾನಾ ನಮೂನೆಯ ಘಟನೆಗಳು ನೋಡಲು ಸಿಗುತ್ತವೆ. ಎಲ್ಲ ಬಣ್ಣಗಳು ಸೇರಿ ಬಿಳಿಯಾಗುವಂತೆ ಬದುಕಿನ ಈ ಎಲ್ಲ ವೈವಿಧ್ಯಗಳೂ ಸೇರಿದರೆ ಮಾತ್ರ ನಾವು ರೂಪುಗೊಳ್ಳುತ್ತೇವೆ. ಕಪ್ಪು ಇಷ್ಟವಿಲ್ಲವೆಂದು ಆ ಬಣ್ಣವನ್ನು ನಮ್ಮ ಬದುಕಿನಿಂದಲೇ ದೂರವಿಡಲು ಸಾಧ್ಯವಿಲ್ಲ. ರಾತ್ರಿಯಾದ ತಕ್ಷಣ ನಮ್ಮ ಕಣ್ಣಿಗೆ ಕಪ್ಪು ಕಂಡೇ ಕಾಣಿಸುತ್ತದೆ. ಹಳದಿ ಇಷ್ಟವಿಲ್ಲವೆಂದರೂ ಜಾಂಡೀಸ್ ಆದಾಗ ನಮ್ಮ ಬಣ್ಣವೇ ಹಳದಿಯಾಗುತ್ತದೆ ಮತ್ತು ಲೋಕವೆಲ್ಲ ಹಳದಿಯಾಗಿ ಕಾಣಿಸುತ್ತದೆ. ಬೂದು ಬಣ್ಣ ಇಷ್ಟವಿಲ್ಲವಿದ್ದರೂ ಆ ಬಣ್ಣದ ಮೋಡಗಳು ಕಣ್ಣಿಗೆ ಬಿದ್ದೇ ಬೀಳುತ್ತವೆ. ಅಂತೆಯೇ ಬದುಕಿನಲ್ಲೂ ನಮಗೆ ಯಾವುದಾದರೂ ಒಂದು ಅಥವಾ ಎರಡು ಮಾದರಿಯ ಅನುಭವಗಳನ್ನು ಸಂಪೂರ್ಣ ದೂರವಿಡಲು ಸಾಧ್ಯವಿಲ್ಲ. ಎಲ್ಲ ಅನುಭವಗಳನ್ನೂ ಅನುಭವಿಸಬೇಕು. ಅವು ಕಪ್ಪಾಗಿದ್ದರೂ ಸರಿ, ಕೆಂಪಾಗಿದ್ದರೂ ಸರಿ, ಅನುಭವಿಸಲೇಬೇಕು. ಬದುಕಿನಲ್ಲಿ ಬೇಸರವೇ ಇರಬಾರದು ಎಂದು ಬಯಸಿದರೆ ಅದು ಈಡೇರುವುದಿಲ್ಲ. ಖುಷಿ ಮಾತ್ರ ಇರಬೇಕು ಎಂದು ಆಶಿಸಿದರೆ ಅದೂ ಸಾಧ್ಯವಿಲ್ಲ.
ಏಕೆಂದರೆ ಬದುಕಿಗೆ ನಾನಾ ಬಣ್ಣಗಳಿವೆ. ಅವು ಇದ್ದರೆ ಮಾತ್ರ ಅದು ಬದುಕು.
ರೂಪಾ ಅಯ್ಯರ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.