ದತ್ತಾತ್ರೇಯ ಕ್ಷೇತ್ರ ಗಾಣಗಾಪುರ
*ಟಿ.ಎಂ.ಸತೀಶ್
ಗುಲ್ಬರ್ಗಾ
ಜಿಲ್ಲೆಯಲ್ಲಿ ರಾಯಚೂರು –
ಪುಣೆ ರೈಲು ಮಾರ್ಗದಲ್ಲಿ ಬರುವ ಪವಿತ್ರ ಪುಣ್ಯಕ್ಷೇತ್ರ ಗಾಣಗಾಪುರ. ದತ್ತಕ್ಷೇತ್ರವೆಂದೇ
ಪ್ರಸಿದ್ಧವಾದ ಈ ಊರು ರೈಲು ನಿಲ್ದಾಣದಿಂದ 14 ಕಿಲೋ ಮೀಟರ್ ದೂರದಲ್ಲಿದೆ.
ಭೀಮಾ ಮತ್ತು ಅಮರಜಾ ನದಿಗಳ ಸಂಗಮ
ಸ್ಥಳ ಹಿಂದೆ ಗಂಧರ್ವಪುರ, ಗಣಾಗಾಭವನ ಎನಿಸಿಕೊಂಡಿತ್ತೆಂದು ಗುರುಚರಿತ್ರೆಯಲ್ಲಿ
ಉಲ್ಲೇಖವಿದೆ. ಕಾಲಾನಂತರದಲ್ಲಿ ಇದು ಗಾಣಗಾಪುರವಾಯ್ತು. ಈ ಪವಿತ್ರ ಕ್ಷೇತ್ರದಲ್ಲಿ
ಅನಸೂಯಾ ತನಯ, ತ್ರಿಮೂರ್ತಿ ರೂಪನಾದ ದತ್ತಾತ್ರೇಯ ಸ್ವಾಮಿ ನೆಲೆಸಿದ್ದಾನೆ.
ನೂರಾರು ವರ್ಷಗಳ ಹಿಂದೆ ವಾಡಿಯ
ನಿವಾಸಿಗಳಾಗಿದ್ದ ದತ್ತಾತ್ರೇಯ ಸ್ವರೂಪಿಗಳಾದ ಶ್ರೀನರಸಿಂಹ ಸರಸ್ವತಿಯವರು ಈ
ಕ್ಷೇತ್ರಕ್ಕೆ ಬಂದು 23 ವರ್ಷಗಳ ಕಾಲ ನೆಲೆಸಿದ್ದರಂತೆ. ಅವರ ಕಾಲದಲ್ಲಿ ಈ ಊರು
ದತ್ತಸಂಪ್ರದಾಯದ ತವರಾಯ್ತು. ನಂತರ ಅವರು ಶ್ರೀಶೈಲಕ್ಕೆ ತೆರಳಲು ಅನುವಾದರು. ಆಗ ಪುರ
ಜನರು ಗಾಣಗಾಪುರದಲ್ಲೇ ಉಳಿಯುವಂತೆ ಕೋರಿಕೊಂಡಾಗ, ಅವರು ತಮ್ಮ ಪಾದುಕೆಗಳನ್ನು ಬಿಟ್ಟು
ಹೋದರು ಎಂದು ಸ್ಥಳೀಯರು ಹೇಳುತ್ತಾರೆ.
ಸಂಗಮದ
ಬಳಿ ಅವರು ವಾಸಿಸುತ್ತಿದ್ದ ಆಶ್ರಮ ಇಂದು ದತ್ತಾತ್ರೇಯರ ಮಂದಿರವಾಗಿದೆ ಇಲ್ಲಿ ಈಗಲೂ ಅವರ
ಪಾದುಕೆಯಿದ್ದು, ಇದನ್ನು ನಿರ್ಗುಣ ಪಾದುಕೆ ಎಂದು ಕರೆಯಲಾಗುತ್ತದೆ. ಈ ಪವಿತ್ರ
ಪಾದುಕೆಗಳನ್ನು ಇಲ್ಲಿರುವ ಬೆಳ್ಳಿಯ ಕಿಂಡಿಯ ಮೂಲಕ ದರ್ಶಿಸಬಹುದು. ಪ್ರತಿ ನಿತ್ಯ
ಪಾದುಕೆಗಳಿಗೆ ಕೇಸರಿ ಮತ್ತು ಅಷ್ಟಗಂಧಗಳಿಂದ ಪೂಜೆ ನಡೆಯುತ್ತದೆ. ಗುರುವಾರಗಳಂದು
ರಾತ್ರಿ ಪಲ್ಲಕ್ಕಿಸೇವೆ ನಡೆಯುತ್ತದೆ.
ಮಠದ ಆವಾರದಲ್ಲಿ ಶಂಖ, ಚಕ್ರ,
ತ್ರಿಶೂಲ ಹಿಡಿದು, ಕಾಮಧೇನುವಿನ ಮುಂದೆ ನಿಂತಿರುವ ಹಾಲು ಬಿಳುಪಿನ ಅಮೃತ ಶಿಲೆಯ
ದತ್ತಾತ್ರೇಯರ ವಿಗ್ರಹವಿದೆ. ವಿಗ್ರಹದ ಮುಂದೆ ಸಿವಲಿಂಗವಿದೆ. ಇಲ್ಲಿರುವ
ಅಶ್ವತ್ಥದ ಪೊದರಿನಲ್ಲಿ ನಾಗನಾಥ ವಿಗ್ರಹವಿದೆ. ಹತ್ತಿರದಲ್ಲೇ ಭೀಮಾ –
ಅಮರಜಾ ನದಿಗಳ ಸಂಗಮವಿದೆ. ಸಂಗಮದಿಂದ ಊರಿಗೆ ಬರುವ ಮಾರ್ಗದಲ್ಲಿ ಷಟ್‌ಕುಲತೀರ್ಥ,
ನರಸಿಂಹತೀರ್ಥ, ಭಾಗೀರಥೀತೀರ್ಥ,
ಪಾಪವಿನಾಶಿನೀತೀರ್ಥ, ಕೋಟಿತೀರ್ಥ,
ರುದ್ರಪಾದತೀರ್ಥ, ಚಕ್ರತೀರ್ಥ ಮತ್ತು
ಮನ್ಮಥತೀರ್ಥ ಎಂಬ ಅಷ್ಟ ತೀರ್ಥಗಳಿವೆ. ಈ ಎಂಟೂ ತೀರ್ಥಗಳಲ್ಲಿ ಸ್ನಾನ ಮಾಡಿ, ಪಾದುಕೆ
ದರ್ಶನ ಮಾಡಿದರೆ, ಸಪ್ತಜನ್ಮದಲ್ಲಿ ಮಾಡಿದ ಪಾಪಗಳು ಪರಿಹಾರವಾಗುತ್ತದೆ ಎಂಬುದು ಜನರ
ನಂಬಿಕೆ. ಪ್ರತಿ ಪೌರ್ಣಿಮೆ, ಗುರುಪೂರ್ಣಿಮೆ, ದತ್ತ ಜಯಂತಿಯ ವೇಳೆ ಇಲ್ಲಿ ವಿಶೇಷ
ಪೂಜೆಗಳು ನಡೆಯುತ್ತವೆ.
ಇಲ್ಲಿರುವ
ದೇವಾಲಯ ಸುಮಾರು 650 ವರ್ಷಗಳಷ್ಟು ಪುರಾತನವಾಗಿದ್ದು, ವಾಸ್ತವವಾಗಿ ಇದು ಮಠ. ಈ
ಮಠವನ್ನು ಶ್ರೀ ಭಾಸ್ಕರ ಭಟ್ಟರು ನಿರ್ಮಿಸಿದರೆಂದು ಹೇಳಲಾಗುತ್ತದೆ. ಇಲ್ಲಿ ಅನಸೂಯಾ
ತನಯನಾಗಿ ಜನ್ಮತಳೆದ ಬ್ರಹ್ಮ, ವಿಷ್ಣು, ಪರಮೇಶ್ವರ ಸ್ವರೂಪಿಯಾದ ಮೂರು ತಲೆಯ
ದತ್ತಾತ್ರೇಯರ ಸುಂದರ ಅಮೃತಶಿಲೆಯ ವಿಗ್ರಹವಿದೆ.
ದತ್ತಾತ್ರೇಯ ಜನ್ಮವೃತ್ತಾಂತ
: ಪುರಾಣ
ಕಾಲದಲ್ಲಿದ್ದ ಅತ್ರಿ
ಮಹಾಮುನಿ ಹಾಗೂ ಅನಸೂಯಾ ದಂಪತಿಗೆ ಮಕ್ಕಳಿರುವುದಿಲ್ಲ. ಸಂತಾನಾರ್ಥವಾಗಿ ಅತ್ರಿ ಉಗ್ರ
ತಪವನ್ನಾಚರಿಸುತ್ತಾರೆ. ಆತನ ತಪಸ್ಸಿಗೆ ಮೆಚ್ಚಿದ ಬ್ರಹ್ಮ, ವಿಷ್ಣು ಮಹೇಶ್ವರರು
ಪ್ರತ್ಯಕ್ಷರಾಗಿ ತಮ್ಮ ಒಬ್ಬೊಬ್ಬರ ಅಂಶದಿಂದಲೂ ಒಬ್ಬೊಬ್ಬ ಮಗ ಹುಟ್ಟುವನೆಂದು ವರ
ನೀಡಿದರು. ಅದೇ ರೀತಿ ಅನಸೂಯೆಯ ಪಾತಿವ್ರತ್ಯವನ್ನು ಪರೀಕ್ಷಿಸಲು ಬಂದ ತ್ರಿಮೂರ್ತಿಗಳು
ಆಕೆಯ ಮಕ್ಕಳಾಗಿ ಹುಟ್ಟುವುದಾಗಿ ವರ ನೀಡುತ್ತಾರೆ.
ಅದರಂತೆ ಬ್ರಹ್ಮನ ಅಂಶದಿಂದ
ಚಂದ್ರನೂ ವಿಷ್ಣುವಿನ ಅಂಶದಿಂದ ದತ್ತಾತ್ರೇಯನೂ ಶಿವನ ಅಂಶದಿಂದ ದುರ್ವಾಸನೂ
ಜನಿಸಿದರೆಂದು ಪುರಾಣಗಳು ಹೇಳುತ್ತವೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.