ಅಪ್ಪಂದಿರ ದಿನ ಬಂತು, ಎಲ್ಲರಿಗೂ ಅಪ್ಪ ಅಂದ್ರೆ ತುಂಬಾ ವಿಶೇಷ. ನಂಗು ಕೂಡ. ಆದ್ರೆ ನಾನು ಅವರ ಜೊತೆ ಕಳೆದ ಕ್ಷಣ ಕಡಿಮೆ ಇದ್ದರೂ ಅವರ ಪ್ರೀತಿ ನಂಗೆ ಅಪಾರವಾಗಿ ಸಿಕ್ಕಿದೆ. ನಾನು೮ ವರ್ಷ ಇದ್ದಾಗ ಅಪ್ಪ-ಅಮ್ಮನ್ನ ಕಳ್ಕೊಂಡೆ. ಆದ್ರೆ ಅವರ ನೆನಪು ನನ್ನ ಮನಸಲ್ಲಿ ಅಚ್ಚಳಿಸದೇ ಉಳಿದಿದೆ. ಆ ಮುದ್ದು ನೆನಪನ್ನ ನಿಮ್ಮ ಜೊತೆ ಹಂಚ್ಕೊತಾ ಇದ್ದೀನಿ.
ನಾನು ನನ್ನಪ್ಪನಿಗೆ ತುಂಬಾ ಮುದ್ದಿನ ಒಬ್ಬಳೇ ಮಗಳು, ಅದರಲ್ಲಂತು ನನ್ನಪ್ಪನಿಗೆ
ನಾನು ಅಂದ್ರೆ ಪಂಚಪ್ರಾಣ. ನನ್ನ ಅಮ್ಮ ದೊಡ್ಡ ಸಂಸಾರದ ದೊಡ್ಡ ಸೊಸೆ ಆಗಿದ್ರಿಂದ ಮನೆಯ
ಎಲ್ಲ ಜವಾಬ್ದಾರಿ ನನ್ನಮ್ಮನ್ದೆ. ನಾದಿನಿಯರ ಮದುವೆ, ಬಾಣಂತನ ಇದರಲ್ಲಿಯೇ ನನ್ನಮ್ಮ
ಕಳೆದುಹೋದ್ರು. ಹಾಗಾಗೀ ನಂಗು ನನ್ನಪ್ಪನಿಗೂ ಅವಿನಾಭಾವ ಸಂಬಂಧ. ನಂಗೆ ಒಂದು ರೀತಿ
ಅಮ್ಮ, ಅಪ್ಪ ಎಲ್ಲ ಅವರೇ ಆಗಿದ್ರೂ.
ಅವರೇ ನಂಗೆ ಸ್ನಾನ, ಊಟ ಎಲ್ಲ ಮಾಡಿಸಬೇಕು. ಒಂದು ದಿನ ಕೂಡ ನಾನು ಕಥೆ ಕೇಳದೆ ಮಲಗೇ
ಇಲ್ಲ. ಒಂದು ದಿನ ಅಂತು ನನ್ನಪ್ಪ ಎಲ್ಲಿಗೋ ಹೊರಗೆ ಹೋಗಿದ್ರು, ಹಾಗಾಗಿ ನನ್ನಮ್ಮ
ಬಲವಂತದಲ್ಲಿ ನನ್ನ ತಲೆಗೆ ಎಣ್ಣೆ ಹಾಕಿ ನಿನ್ನಪ್ಪ ಬಂದ ಮೇಲೆ ಅವರೇ ಸ್ನಾನ ಮಾಡಿಸ್ತಾರೆ
ಅಂತ ಹೇಳಿದ್ದವರು, ನಂಗೆ ನಿದ್ದೆ ಬರ್ತಾ ಇದೆ ಅನ್ನೋ ಕಾರಣಕ್ಕೆ ಅವ್ರೆ ನಂಗೆ ಸ್ನಾನ
ಮಾಡಿಸೋಕ್ಕೆ ಬಚ್ಚಲು ಮನೆಗೇ ಕರ್ಕೊಂಡೋಗಿ ನೀರು ಹಾಕೋಕೆ ಶುರು ಮಾಡಿದ್ರು, ಆದ್ರೆ ನಾನು
ಅಲ್ಲಿದ್ದ ಟವೆಲ್ ಸುತ್ತ್ಕೊಂಡು ನನ್ನಪ್ಪನ್ನ ಹುಡ್ಕೊಂಡು ಹೋಗಿದ್ದೆ. ಅವಾಗ ನಂಗೆ ೬
ವರ್ಷ.
ನಾನು ನನ್ನಪ್ಪ ಬರೋ ತನಕ ಊಟ ಮಾಡ್ತಾ ಇರಲಿಲ್ಲ. ಕೆಲವು ಸಲ ನನ್ನಪ್ಪ ಮನೆಗೆ ಬರೋದು
ತಡ ಆದ್ರೆ ನಂಗೆ ಎಲ್ಲಿ ನಿದ್ರೆ ಬರುತ್ತೋ ಅಂತ ನನ್ನಮ್ಮ ಏನೇನೋ ಕಥೆ ಹೇಳಿ, ಆಟ ಆಡಿಸಿ
ಪಾಪ ಊಟ ಮಾಡಿಸ್ತಿದ್ರು. ಆದ್ರೆ ನನ್ನಪ್ಪ ಬಂದ ಮೇಲೆ ಎಷ್ಟೇ ನಿದ್ರೆ ಮಾಡ್ತಿದ್ರು
ಕೂಡಾ ನಾನು ಎದ್ದು ನನ್ನಪ್ಪನ ಜೊತೆ ಒಂದು ತುತ್ತಾದರೂ ತಿನ್ನಲೆಬೇಕು.
ಒಂದು ಸಲ ನಾನು ಶಾಲೆ ಇಂದ ಬರುವಾಗ ಜೋರು ಮಳೆ.. ನನ್ನಪ್ಪ ತಮ್ಮೆಲ್ಲಾ ಕೆಲಸ
ಬಿಟ್ಟು, ಕೊಡೆ ಹಿಡ್ಕೊಂಡು ನನ್ನ ಶಾಲೆ ಹತ್ರ ಬಂದಿದ್ರು, ನನ್ನನ್ನು ತಮ್ಮ ಹೆಗಲ ಮೇಲೆ
ಕೂಡಿಸ್ಕೊಂಡು ಮನೆಗೆ ಕರ್ಕೊಂಡು ಬನ್ದ್ರು. ನನ್ನ ಒಂದು ದಿನ ಕೂಡ ಬಿಟ್ಟು
ಇರ್ತಿರ್ಲಿಲ್ಲ. ಆದ್ರೆ ನಂಗೆ ಹೇಳದೆ ತುಂಬಾನೇ ದೂರ ಹೋದ್ರು.
ಅಪ್ಪ ನಂಗೆ ನಿಮ್ಮ ನೆನಪು ತುಂಬಾನೇ ಆಗುತ್ತೇ. ನಂಗೆ ಮತ್ತೆ ನಿಮ್ಮ ಮಡಿಲಲ್ಲಿ
ಮಲಗ್ಬೇಕು ಅನಿಸುತ್ತೆ. ನಿಮಗೆ ಒಂದು ಸಿಹಿ ಸುದ್ದಿ ಹೇಳ್ಬೇಕು – ನಾನು, ನಿಮ್ಮ ಪುಟಾಣಿ
ಮಗಳು – ಈವಾಗ ಒಂದು ಪುಟ್ಟ ಮಗನಿಗೆ ಅಮ್ಮ ಆಗಿದ್ದೇನೆ. ನಿಮ್ಮ ಮಗಳ ಮೇಲಿನ
ಪ್ರೀತಿಯಿಂದ ನೀವೇ ಇವನ ರೂಪದಲ್ಲಿ ವಾಪಸ್ಸು ಬಂದಿದ್ದೀರಾ ಅನ್ನಿಸ್ತಿದೆ.. ಹೌದಲ್ವ
ಪಪ್ಪಾ…
– ಇಬ್ಬನಿ June 22, 2014
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.