ಅಂಕಿತ ನಾಮ: ಮಾರಯ್ಯಪ್ರಿಯ ಅಮರೇಶ್ವರಲಿಂಗ
ಕಾಲ: 1160
ದೊರಕಿರುವ ವಚನಗಳು: 25 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ:
ಹುಟ್ಟಿದ ಸ್ಥಳ:
ಪರಿಚಯ: ಕಾಲ ಸು. 1160. ಆಯ್ದಕ್ಕಿ ಮಾರಯ್ಯನ ಹೆಂಡತಿ. ಈಕೆಯ 25 ವಚನಗಳು ದೊರೆತಿವೆ. ಕಲ್ಯಾಣದಲ್ಲಿ ಅಕ್ಕಿಯನ್ನು ಆಯ್ದು ಜೀವಿಸುತ್ತಿದ್ದ ಈ ದಂಪತಿಗೆ ಬಸವಣ್ಣ ಒಮ್ಮೆ ಅಕ್ಕಿಯ ದಾನ ನೀಡಿ, ಮಾರಯ್ಯ ಅದನ್ನು ಮನೆಗೆ ತಂದಾಗ ಲಕ್ಕಮ್ಮನು ಇಷ್ಟೊಂದು ಅಕ್ಕಿಯ ಆಸೆ ಅರಸನಿಗೆ ಇರಬೇಕು, ಶರಣನಿಗಲ್ಲ ಎಂದು ಹೇಳಿ ದುಡಿಮೆಯನ್ನು ತಪ್ಪಿಸುವ ದಾನವನ್ನು ಹಿಂದಿರುಗಿಸುವಂತೆ ಮಾಡಿದ ಕಥೆ ‘ಶೂನ್ಯಸಂಪಾದನೆ’ಯಲ್ಲಿ ಇದೆ.
ಬಯಕೆಯರತ ಕೈಯಲ್ಲಿ ತಂಡುಲವನಾಯ್ದುಕೊಂಡು
ಸಂದ ಪ್ರಮ ಥರ ಅಂಗಳಕ್ಕೆ ಬೇಗ ಹೋಗಿ, ಕೊಂಡುಬಾರಯ್ಯಾ,
ಮಾರಯ್ಯಪ್ರಿಯ ಅಮಲೇಶ್ವರಲಿಂಗಕ್ಕೆ ಮಾರಯ್ಯಾ.
ಅವಾರಿಯೆಂದು ಮಾಡುವಲ್ಲಿ ಅವರಿವರೆಂದು ಪ್ರಮಾಣಿಸಲುಂಟೆ ?
ಸಮಯಕ್ಕೆ ಹೋಗಿ ಸಮಯವನರಿಯರೆಂದು ಭವಗೆಡಲುಂಟೆ ?
ಭಾವಜ್ಞನಾದಡೆ ಭಾವವನರಿದಲ್ಲಿ ಶುಚಿಯಾಗಿರಬಲ್ಲಡೆ ಮಾರಯ್ಯಪ್ರಿಯ
ಅಮಲೇಶ್ವರಲಿಂಗವ ಹೊದ್ದುವ ಭಾವ.
ಅಂಗಕ್ಕೆ ಬಡತನವಲ್ಲದೆ ಮನಕ್ಕೆ ಬಡತನವುಂಟೆ ?
ಬೆಟ್ಟ ಬಲ್ಲಿತ್ತೆಂದಡೆ, ಉಳಿಯ ಮೊನೆಯಲ್ಲಿ ಬಡತನವಿದ್ದಡೆ ಒಡೆಯದೆ ?
ಘನಶಿವಭಕ್ತರಿಗೆ ಬಡತನವಿಲ್ಲ ಸತ್ಯರಿಗೆ ದುಷ್ಕರ್ಮವಿಲ್ಲ.
ಎನಗೆ ಮಾರಯ್ಯಪ್ರಿಯ ಅಮಲೇಶ್ವರಲಿಂಗವುಳ್ಳನ್ನಕ್ಕ ಆರ ಹಂಗಿಲ್ಲ
ಮಾರಯ್ಯಾ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.