ಕಾವೇರಿ | |
---|---|
| |
ಉಗಮ | ತಲಕಾವೇರಿ |
ಕೊನೆ | ಬಂಗಾಳ ಕೊಲ್ಲಿ |
ಮೂಲಕ ಹರಿಯುವ ದೇಶಗಳು | ಭಾರತ (ಕರ್ನಾಟಕ ಮತ್ತು ತಮಿಳುನಾಡು) |
ಉದ್ದ | ೭೬೫ ಕಿ.ಮಿ. |
ಜಲನಯನ ಪ್ರದೇಶ | ೨೭,೭೦೦ ಚದುರ ಕಿ.ಮಿ. |
ಕಾವೇರಿ ಕರ್ನಾಟಕದ ಜೀವನದಿ. ಕೊಡಗು ಜಿಲ್ಲೆಯ ಪಶ್ಚಿಮ ಘಟ್ಟದಲ್ಲಿ ತಲಕಾವೇರಿಯೆಂಬ ಸ್ಥಳದಲ್ಲಿ ಉಗಮಿಸುವ ಈ ನದಿ, ಮೈಸೂರು ಜಿಲ್ಲೆಯ ಮೂಲಕ ತಮಿಳುನಾಡಿಗೆಹರಿದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಮುಖ್ಯವಾಗಿ ದಕ್ಷಿಣ-ಪೂರ್ವ ದಿಶೆಯಲ್ಲಿ ಹರಿಯುವ ಈ ನದಿಯ ಪಥ ಸುಮಾರು ೭೬೫ ಕಿ.ಮಿ.ಗಳಷ್ಟು ಉದ್ದವಾಗಿದೆ.
ಪರಿವಿಡಿ
ಇತಿವೃತ್ತ
ಕಾವೇರಿ ಜಲಾನಯನ ಪ್ರದೇಶ ೨೭,೭೦೦ ಚದುರ ಮೈಲಿಗಳಷ್ಟಿದ್ದು, ಕಾವೇರಿಯ ಉಪನದಿಗಳಲ್ಲಿ ಶಿಂಶಾ, ಹೇಮಾವತಿ, ಅರ್ಕಾವತಿ, ಕಪಿಲಾ, ಕಬಿನಿ, ಲಕ್ಷ್ಮಣ ತೀರ್ಧ ಮತ್ತುಲೋಕಪಾವನಿ ನದಿಗಳನ್ನು ಹೆಸರಿಸಬಹುದು. ಕಾವೇರಿ 'ದಕ್ಷಿಣ ಗಂಗೆ'ಯೆಂದು ಪ್ರಸಿದ್ಧಿ ಪಡೆದ ಕರ್ನಾಟಕದ ಮಹಾನದಿ.ತುಲಾಮಾಸದಲ್ಲಿ ಕಾವೇರಿ ಸ್ನಾನ ಮಾಡಿದರೆ ಸಕಲ ಪಾಪಗಳೂ ನಾಶವಾಗುವುದೆಂಬ ನಂಬಿಕೆಯಿದೆ.ಕೊಡಗರು ಕಾವೇರಿಯನ್ನು ತಮ್ಮ ಕುಲದೈವದಂತೆ ಪೂಜಿಸುತ್ತಾರೆ. ಕಾವೇರಿಯು ಪುರಾಣಗಳಲ್ಲಿ ವರ್ಣಿಸಲಾದ ಸಪ್ತ ಪುಣ್ಯ ನದಿಗಳಲ್ಲಿ ಒಂದು, ಹಾಗೂ ದಕ್ಷಿಣದಲ್ಲಿರುವ ಏಕೈಕ ಮಹಾ ನದಿ.
ಪುರಾಣ ಮೂಲದಲ್ಲಿ ಕಾವೇರಿ
- ಬ್ರಹ್ಮನ ಮಗಳಾದ ಲೋಪಾಮುದ್ರೆಯು ಭೂಲೋಕದಲ್ಲಿ ಲೊಕೊದ್ಧಾರಕ್ಕಾಗಿ ವಾಸಿಸುತಿದ್ದಳು. ಕವೇರನೆಂಬ ಮುನಿಯು ಬ್ರಹ್ಮನನ್ನು ಕುರಿತು ತಪಸ್ಸನ್ನಾಚರಿಸಿ ಬ್ರಹ್ಮನಿಂದ ವರವನ್ನು ಪಡೆದನು. ನದಿಯ ಉಗಮಕ್ಕಾಗಿ ಮುನಿಗಳು ಸೂಕ್ತಜಾಗದ ಅನ್ವೇಷಣೆಯಲ್ಲಿ ಇರುವುದನ್ನು ತಿಳಿದಿದ್ದ ಗಣೇಶ ಇದೇ ಜಾಗ ಸೂಕ್ತವಾಗಿದೆ ಎಂದೆನಿಸಿ ಕಮಂಡಲವನ್ನು ನೆಲದ ಮೇಲೆ ಇಟ್ಟುಬಿಟ್ಟನು.
- ಅಲ್ಲಿಯೇ ಹಾರಾಡುತ್ತಿದ್ದ ಕಾಗೆಯೊಂದು ಕಮಂಡಲವನ್ನು ತಾಕುವಂತೆ ಕುಳಿತುಕೊಂಡಿತು. ಅಷ್ಟರಲ್ಲಿ ಹಿಂತಿರುಗಿದ ಅಗಸ್ತ್ಯ ಮುನಿಗಳು ಕಾಗೆಯನ್ನು ನೋಡಿ ಧಾವಂತದಿಂದ ಅದನ್ನು ಓಡಿಸಲು ಪ್ರಯತ್ನಿಸಿದಾಗ ಕಮಂಡಲದ ನೀರು ಚೆಲ್ಲಿತು. ಸಣ್ಣ ಪ್ರಮಾಣದ ಜಲವು ಜಲಧಾರೆಯಾಗಿ ನದಿಯಾಗಿ ಹರಿಯಿತು. ತಲಕಾವೇರಿಯ ಸ್ಥಳವನ್ನು ಈಗಲೂ ಪವಿತ್ರವೆಂದು ಪರಿಗಣಿಸಲಾಗುತ್ತಿದ್ದು, ಇಲ್ಲಿ ನಿತ್ಯ ಪೂಜೆ ಪುನಸ್ಕಾರಗಳು ನಡೆಯುತ್ತಿವೆ.
- ಮಹಾಭಾರತದ ಆದಿಪರ್ವದಲ್ಲಿ ಅರ್ಜುನನು ತೀರ್ಥಯಾತ್ರೆಗೆ ಹೋಗಿದ್ದಾಗ, ಈ ನದಿಯಲ್ಲಿ ಸ್ನಾನ ಮಾಡಿದನೆಂಬ ಉಲ್ಲೇಖವಿದೆ. ರಾಜಸೂಯಯಾಗದ ಸಮಯದಲ್ಲಿ ನಕುಲನು ಇಲ್ಲಿಗೆ ಬಂದಿದ್ದನೆಂದು ನಂಬಲಾಗಿದೆ. ಅಗಸ್ತ್ಯ ಮಹಾಮುನಿಯು ಲೋಪಾಮುದ್ರೆಯನ್ನು ಮದುವೆಯಾಗುವ ಇಚ್ಛೆಯನ್ನು ವ್ಯಕ್ತ ಪಡಿಸುತ್ತಾನೆ. ಅದಕ್ಕೆ ಲೋಪಾಮುದ್ರೆ ಮೊದಲು ನಿರಾಕರಿಸುತ್ತಾಳೆ.
- ನಂತರ ದಾರಿಯಲ್ಲಿ ತೆರಳುತ್ತಿರುವ ವೇಳೆ ಅಗಸ್ತ್ಯ ಮಹಾಮುನಿ ಭೇಟಿಯಾದಾಗ, ಲೋಪಾಮುದ್ರೆಯು ತನ್ನನ್ನು ಎಂದೂ ಕಾಯಿಸಬಾರದು, ಕಾಯಿಸಿದರೆ ನಾನು ಸ್ವತಂತ್ರಳು. ಇದಕ್ಕೆ ಒಪ್ಪುವುದಾದರೆ ಮದುವೆಯಾಗುವುದಾಗಿ ಹೇಳುತ್ತಾಳೆ. ಅದಕ್ಕೆ ಓಪ್ಪಿದ ಅಗಸ್ತ್ಯಮುನಿಯು ಲೋಪಾ ಮುದ್ರೆಯನ್ನು ಮದುವೆಯಾಗುತ್ತಾನೆ.
- ಒಂದು ದಿನ ಅಗಸ್ತ್ಯಮುನಿಯು ತನ್ನ ಶಿಷ್ಯಂದಿರಿಗೆ ಪಾಠ ಮಾಡುತ್ತಾ ತಲ್ಲೀನನಾಗಿ ಸಮಯವನ್ನು ಮರೆತು ಬಿಡುತ್ತಾನೆ. ಆಗ ಲೋಪಾಮುದ್ರೆಯು ಅಲ್ಲಿಂದ ಹೊರಟು ತಲಕಾವೇರಿಗೆ ಬಂದು ಅಂತರ್ಜಲದಲ್ಲಿ ಹಾರಿ ನದಿಯಾಗಿ ಹರಿಯುತ್ತಾಳೆ. ಅವಳು ಕವೇರನೆಂಬ ಮುನಿಯ ಮಗಳಾದು ದರಿಂದ ಈ ನದಿಗೆ ಕಾವೇರಿಯೆಂಬ ಹೆಸರು ಬಂದಿದೆ.
- ಇನ್ನೊಂದು ಕಥೆಯ ಪ್ರಕಾರ ಅಗಸ್ತ್ಯ ಮುನಿಗಳ ಕಮಂಡಲ ಮಗುಚಿ ಬಿದ್ದಾಗ ಅದರ ನೀರು ಹೊರ ಚೆಲ್ಲಿತು ಅದೇ ಕಾವೇರಿ ನದಿಯಾಯಿತು. ಆ ಕಥೆ ಹೀಗಿದೆ :- ದಕ್ಷಿಣದ ಪ್ರಾಂತ್ಯವು ನೀರಿಲ್ಲದೆ ಬಂಜರಾಗಿತ್ತು. ಹಾಗಾಗಿ ಇಲ್ಲಿನ ಜಲಕ್ಷಾಮವನ್ನು ಹೋಗಲಾಡಿಸಲು ಮುನಿ ಅಗಸ್ತ್ಯರು, ಬ್ರಹ್ಮನ ಆಶಿರ್ವಾದದೊಂದಿಗೆ,ಶಿವನಿಂದ ಪವಿತ್ರವಾದ ಜಲವನ್ನು ಪಡೆದು ಅವರ ಕಮಂಡಲದಲ್ಲಿ ತುಂಬಿದ್ದರು.
- ಭೋರ್ಗರೆಯುತ್ತಾ ಉಕ್ಕಿ ಹರಿಯುವ ನದಿಯ ಸೃಷ್ಟಿಗಾಗಿ ಸೂಕ್ತ ಜಾಗವನ್ನು ಹುಡುಕುವ ಆಶಯದಿಂದ, ಅಗಸ್ತ್ಯ ಮುನಿಗಳು ದಕ್ಷಿಣ ಭಾಗಕ್ಕೆ ಪ್ರವಾಸ ಕೈಡೊಂಡು ಕೊಡಗಿನ ಬೆಟ್ಟ ಪ್ರದೇಶವನ್ನು ತಲುಪಿದರು. ವಾಸ್ತವವಾಗಿ, ಆ ಬಾಲಕ ವೇಷ ಮರೆಸಿದ ಗಣೇಶನಾಗಿದ್ದನು. ದೇಹಬಾಧೆ ಪೀಡಿತರಾಗಿದ್ದ ಅಗಸ್ತ್ಯ ಮುನಿಗಳು ಶೌಚಕ್ಕಾಗಿ ಸೂಕ್ತ ಸ್ಥಳವನ್ನು ಹುಡುಕುತ್ತಿದ್ದು, ತನ್ನ ಕೈಲಿರುವ ನೀರಿನ ಕಮಂಡಲವನ್ನು ಜಾಗರೂಕತೆಯಿಂದ ಹಿಡಿದುಕೊಳ್ಳಲು ಆ ಬಾಲಕನನ್ನು ವಿನಂತಿಸಿ ಕೊಳ್ಳುವುದು ಸಭಾಪರ್ವದಲ್ಲಿ ಬರುತ್ತದೆ.
ನದಿಯ ಪಾತ್ರ
- ಕೊಡಗಿನ ಬಳಿಯ ಬೆಟ್ಟಗಳನ್ನು ಬಿಟ್ಟ ನಂತರ ಕಾವೇರಿ ನದಿ ದಕ್ಷಿಣ ಪ್ರಸ್ಥಭೂಮಿಯ ಮೇಲೆ ಪೂರ್ವಕ್ಕೆ ಹರಿಯುತ್ತದೆ. ಈ ನದಿಯಲ್ಲಿ ಮೂರು ದ್ವೀಪಗಳಿವೆ - ಕರ್ನಾಟಕದಲ್ಲಿ ಶ್ರೀರಂಗಪಟ್ಟಣಮತ್ತು ಶಿವನಸಮುದ್ರ, ಹಾಗೂ ತಮಿಳುನಾಡಿ ನಲ್ಲಿ ಶ್ರೀರಂಗ. ಶಿವನಸಮುದ್ರದಲ್ಲಿ ಈ ನದಿ ೩೨೦ ಅಡಿಗಳ ಎತ್ತರದಿಂದ ಧುಮುಕಿ, ಗಗನಚುಕ್ಕಿ ಮತ್ತು ಭರಚುಕ್ಕಿ ಎಂಬ ಜಲಪಾತಗಳನ್ನು ಸೃಷ್ಟಿಸುತ್ತದೆ.
- ಭಾರತದ ಮೊದಲ ಜಲವಿದ್ಯುದಾಗಾರ ಇಲ್ಲಿ ೧೯೦೨ ರಲ್ಲಿ ಕಟ್ಟಲ್ಪಟ್ಟು ಬೆಂಗಳೂರು ನಗರಕ್ಕೆ ವಿದ್ಯುಚ್ಛಕ್ತಿಯನ್ನು ಒದಗಿಸುತ್ತಿತ್ತು. ಹೊಗೇನಕಲ್ ಜಲಪಾತವಾಗಿ ಬಿದ್ದಾದ ಮೇಲೆ ತಮಿಳುನಾಡನ್ನು ಪ್ರವೇಶಿಸುವ ಈ ನದಿ, ತಂಜಾವೂರು ಜಿಲ್ಲೆಯ ಮುಖಾಂತರ ಹರಿದು ಕೊನೆಗೆ ಇಬ್ಭಾಗವಾಗಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ.
ಕರ್ನಾಟಕದಲ್ಲಿ ಕಾವೇರಿ
- ಕರ್ನಾಟಕದಲ್ಲಿ ಕಾವೇರಿ ನದಿಗೆ ಹನ್ನೆರಡು ಜಲಾಶಯ ಮತ್ತು ಅಣೆಕಟ್ಟುಗಳಿವೆ. ಈ ಎಲ್ಲ ಅಣೆಕಟ್ಟುಗಳ ಮುಖ್ಯೋದ್ದೇಶ ನೀರಾವರಿ. ಮಡದಕಟ್ಟೆಯ ಬಳಿ ಇರುವ ಅಣೆಕಟ್ಟಿನಿಂದ ಹೊರಡುವ ಕಾಲುವೆ ೭೨ ಮೈಲಿಗಳಷ್ಟು ಉದ್ದವಿದ್ದು, ೧೦,೦೦೦ ಎಕರೆಗಳ ಪ್ರದೇಶಕ್ಕೆ ನೀರಾವರಿ ಸೌಲಭ್ಯವನ್ನು ಒದಗಿಸುತ್ತದೆ.
- ಇದೇ ಕಾಲುವೆ ಮೈಸೂರು ನಗರಕ್ಕೆ ಕುಡಿಯುವ ನೀರಿನ ಸೌಲಭ್ಯವನ್ನೂ ಭಾಗಶಃ ಒದಗಿಸುತ್ತದೆ. ಶ್ರೀರಂಗಪಟ್ಟಣದ ಬಳಿ ಇರುವ ಬಂಗಾರ ದೊಡ್ಡಿ ನಾಲೆ ಮೈಸೂರಿನ ಒಡೆಯರ್ ರಾಜಮನೆತನದ ರಣಧೀರ ಕಂಠೀರವ ಕಟ್ಟಿಸಿದ್ದು. ಕರ್ನಾಟಕದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಅತಿ ಪ್ರಸಿದ್ಧ ಜಲಾಶಯ ಕೃಷ್ಣರಾಜಸಾಗರ.
ತುಲಾ ಸಂಕ್ರಮಣ - ತಲಕಾವೇರಿಯ ತೀರ್ಥೋದ್ಭವ
- ಸೂರ್ಯನು ತುಲಾ ರಾಶಿಯನ್ನು ಪ್ರವೇಶಿಸುವ ದಿನವನ್ನು ತುಲಾ ಸಂಕ್ರಮಣವೆಂದು ಕರೆಯುತ್ತಾರೆ. ಈ ಶುಭ ದಿನವು ಸಾಧಾರಣವಾಗಿ ಆಂಗ್ಲದ ಅಕ್ಟೋಬರ್ ತಿಂಗಳಿನ ೧೭ನೇ ದಿನಾಂಕದಂದು ಬರುತ್ತದೆ. ಈ ಪುಣ್ಯ ದಿನದಂದು ಗಂಗೆಯೇ ಮೊದಲಾದ ಆರು ಪವಿತ್ರ ನದಿಗಳು ಕಾವೇರಿಯಲ್ಲಿ ಬಂದು ಸೇರುತ್ತವೆಂಬ ನಂಬಿಕೆಯಿದೆ. ಇದಕ್ಕೆ ಸಾಕ್ಷಿಯೆಂಬಂತೆ ಪ್ರತಿ ವರ್ಷವೂ ತುಲಾ ಸಂಕ್ರಮಣದ ದಿನ ನಿರ್ಧಾರಿತ ಲಗ್ನ ಹಾಗೂ ಮುಹೂರ್ತದಲ್ಲಿ ತಲಕಾವೇರಿಯ ಜ್ಯೋತಿ ಮಂಟಪದ ಮುಂದಿರುವ ಕುಂಡದಲ್ಲಿ ನೀರಿನ ಬುಗ್ಗೆ ಮೂರು ಬಾರಿ ಬರುತ್ತದೆ.
- ಇದನ್ನೆ ತೀರ್ಥೊದ್ಭವವೆಂದು ಕರೆಯಲಾಗುತ್ತದೆ. ಈ ಬುಗ್ಗೆಯಲ್ಲಿ ಮಿಕ್ಕ ಆರೂ ಪುಣ್ಯ ನದಿಗಳು (ಅಂದರೆ - ಗಂಗೆ, ಯಮುನೆ, ಗೋದಾವರೀ, ಸರಸ್ವತೀ, ನರ್ಮದೆ ಮತ್ತು ಸಿಂಧು) ಅಂತರ್ವಾಹಿನಿಯಾಗಿ ಬಂದು ಕಾವೇರಿಯನ್ನು ಸೇರಿ ತಾವು ಮನುಷ್ಯರನ್ನು ತೊಳೆದು ಪ್ರಾಪ್ತಿ ಮಾಡಿಕೊಂಡ ಕರ್ಮಗಳನ್ನು ಕಳೆದುಕೊಳ್ಳುತ್ತಾರೆಂಬ ಪ್ರತೀತಿಯಿದೆ. ಕೊಡವರಿಗೆ ಕಾವೇರಿಯೇ ಕುಲದೈವ. ಹಾಗಾಗಿ ಅವರಿಗೆ ತೀರ್ಥೊದ್ಭವವು ಸಂಭ್ರಮ ಸಡಗರದಿಂದ ಆಚರಿಸುವ ಪ್ರಮುಖ ಹಬ್ಬ ಹಾಗೂ ಧಾರ್ಮಿಕ ಆಚರಣೆಯಾಗಿದೆ.
- ತೀರ್ಥೊದ್ಭವದ ದಿನ ತಲಕಾವೇರಿಯಲ್ಲಿ ಮೀಯುವುದರಿಂದ ಸಕಲ ಪಾಪಗಳೂ ಪರಿಹಾರವಾಗುತ್ತವೆ ಎಂದು ಭಕ್ತರ ಧೃಢ ನಂಬಿಕೆ. ತೀರ್ಥೊದ್ಭವದ ದಿನ ತಲಕಾವೇರಿಯ ಕುಂಡದ ನೀರನ್ನು ಶೇಖರಿಸಿಕೊಂಡು ತಮ್ಮ ಬಂಧು ಮಿತ್ರರಲ್ಲಿ ವಿತರಿಸುವ ಆಚರಣೆಯೂ ವಾಡಿಕೆಯಲ್ಲಿದೆ. ಮೃತ್ಯು ಶಯ್ಯೆಯಲ್ಲಿರುವ ವ್ಯಕ್ತಿಗಳಿಗೆ ಈ ನೀರಿನ ಹನಿಗಳನ್ನು ಕುಡಿಸಿದಲ್ಲಿ ಅವರಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆಯೆಂದೂ ಆಸ್ತಿಕರು ನಂಬುತ್ತಾರೆ.
- ತಮಿಳು ನಾಡಿನ ಜನರಲ್ಲಿ ತುಲಾ ಮಾಸದ ಕಾವೇರಿ ಸ್ನಾನವು ಸರ್ವ ಪಾಪಗಳನ್ನು ಪರಿಹಾರ ಮಾಡುತ್ತದೆ ಎಂಬ ನಂಬಿಕೆ ಇರುವುದರಿಂದ, ಇಡೀ ತುಲಾ ಮಾಸದಲ್ಲಿ ಜನರು ಕಾವೇರಿಯ ದಡಗಳಲ್ಲಿರುವ ಪವಿತ್ರ ಸ್ಥಳಗಳನ್ನು ಸೇರಿ ಅಲ್ಲಿ ಸ್ನಾನವನ್ನಾಚರಿಸಿ ದೇವತಾ ದರ್ಶನ ಮೊದಲಾದ ಧಾರ್ಮಿಕ ಆಚರಣೆಗಳಲ್ಲಿ ತೊಡಗುತ್ತಾರೆ.
ತಮಿಳು ನಾಡಿನಲ್ಲಿ ಕಾವೇರಿ
ತಮಿಳು ನಾಡಿನ ಮೆಟ್ಟೂರು ಎಂಬಲ್ಲಿ ಈ ನದಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟಲಾಗಿದೆ.
ಕಾವೆರಿ ನದಿ ನೀರು ಹಂಚಿಕೆ
- ಕರ್ನಾಟಕದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಅತಿ ಪ್ರಸಿದ್ಧ ಜಲಾಶಯ ಕೃಷ್ಣರಾಜಸಾಗರ.ಅದರ ಗರಿಷ್ಟ ಮಟ್ಟ ೧೨೪.೮ ಅಡಿ.(ಅಲ್ಲಿಯ ನೆಲ ಮಟ್ಟದಿಂದ)ಕಾವೇರಿ ಕಣಿವೆಯ ನೀರಿನಲ್ಲಿ ಅರ್ಧಕ್ಕಿಂತ ಹೆಚ್ಚು ಪಾಲನ್ನು ಈಗಾಗಲೆ ಗಿಟ್ಟಿಸಿದ್ದರೂ ತಮಿಳುನಾಡಿಗೆ ತೃಪ್ತಿ ಇಲ್ಲ. ಕಾವೇರಿ ಕಣಿವೆಯಲ್ಲಿರುವ ಒಟ್ಟು ನೀರು 740 ಟಿಎಂಸಿ ಅಡಿ. ಈ ಪೈಕಿ 419 ಟಿಎಂಸಿ ಅಡಿ ನೀರನ್ನು ತಮಿಳುನಾಡಿಗೆ, 270 ಟಿಎಂಸಿ ಅಡಿ ನೀರನ್ನು ಕರ್ನಾಟಕಕ್ಕೂ ನ್ಯಾಯಾಧಿಕರಣ ಈಗಾಗಲೆ ಹಂಚಿಕೆ ಮಾಡಿದೆ.
- ಒಟ್ಟು ನೀರು 740 ಟಿಎಂಸಿ ಅಡಿ.-ಇದು ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಒಟ್ಟು ಲಭ್ಯವಾಗುವ ನೀರಿನ ಪ್ರಮಾಣ ;ಮಳೆ ಸರಾಸರಿ ಉತ್ತಮ ಮಳೆಯಾದಾಗ; ಕರ್ನಾಟಕವು ತನಗೆ ಲಭ್ಯವಾಗುವ ನೀರಿನಲ್ಲಿ 192 ಟಿ.ಎಮ್.ಸಿ.ಅಡಿ ನೀರನ್ನು ತಮಿಳನಾಡಿಗೆ ಬಿಡಬೇಕು. ಹಾಗೆ ಬಿಟ್ಟಾಗ ಕರ್ನಾಟಕಕ್ಕೆ 270 ಟಿಎಂಸಿ ಅಡಿ ನೀರು ಉಳಿಯುವುದೆಂದು ಅಂದಾಜು. ಮಳೆ ಕಡಿಮೆಯಾದಾಗ ಪ್ರಧಾನ ಮಂತ್ರಿಯವರ ಅಧ್ಯಕ್ಷತೆಯ ಕಾವೇರಿ ಆಯೋಗ ನೀರಿನ ಪ್ರಮಾಣವನ್ನು ನಿರ್ಧರಿಸುವುದು.
- ಹೆಚ್ಚು ಕಡಿಮೆ ಶೇ.80ರಷ್ಟು ಕಾವೇರಿ ನೀರು ತನಗೇ ಸಲ್ಲಬೇಕು ಎಂಬುದು ತಮಿಳುನಾಡಿನ ಆಗ್ರಹ. ಅರ್ಥಾತ್ 740 ಟಿಎಂಸಿಗಳಲ್ಲ್ 566 ಟಿಎಂಸಿ ತನ್ನ ನ್ಯಾಯಯುತ ಪಾಲು ಎನ್ನುತ್ತದೆ.ಹೀಗಾಗಿ 419ಕ್ಕೆ ಸಮಾಧಾನ ಇಲ್ಲ. ಕರ್ನಾಟಕದ ಪಾಲಿನ ನೀರಿಗೆ ಕತ್ತರಿ ಹಾಕಿ ಮತ್ತಷ್ಟು ನೀರು ಪಡೆದುಕೊಳ್ಳುವ ಪ್ರಯತ್ನ ನಿರಂತರ. ತೀರ್ಪು ಸಂಬಂಧ ಸಲ್ಲಿಸಿರುವ ವಿಶೇಷ ಮೇಲ್ಮನವಿ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಅಂಗೀಕರಿಸಿದೆ.
- ಹೀಗಾಗಿ ನಾವು ಈ ವಿವಾದದ ವಿಚಾರಣೆ ನಡೆಸುವುದು ಸರಿಯಲ್ಲ ಎಂಬ ನಿಲುವನ್ನು ನ್ಯಾಯಮಂಡಳಿ ವ್ಯಕ್ತಪಡಿಸಿತು. ಏಳು ವರ್ಷದ ನಂತರ ಇದೇ ಮೊದಲ ಬಾರಿಗೆ ನ್ಯಾಯಮಂಡಳಿಯು ಸಭೆ ಸೇರಿತ್ತು.ನ್ಯಾ. ಬಿ.ಎಚ್. ಚೌಹಾಣ್ ಕಾವೇರಿ ನ್ಯಾಯಮಂಡಳಿ ಹೊಸ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಸೇರಿದ ನ್ಯಾಯಮಂಡಳಿ ಕಲಾಪ ಕೇವಲ ಒಂದು ಗಂಟೆಯೊಳಗೆ ಮುಗಿದು ಹೋಯಿತು.(15-7-2014)
-
- ಕಾವೇರಿ ನ್ಯಾಯಮಂಡಳಿ 2007ರ ಫೆಬ್ರುವರಿ ಐದರಂದು ಅಂತಿಮ ತೀರ್ಪು ನೀಡಿದೆ. ಅದರಂತೆ ಕಾವೇರಿ ಒಟ್ಟಾರೆ ನೀರಿನ ಪ್ರಮಾಣವನ್ನು 740 ಟಿಎಂಸಿ ಅಡಿ ಎಂದು ಅಂದಾಜಿಸಿದೆ.
- ಇದರಲ್ಲಿ ತಮಿಳುನಾಡಿಗೆ 419ಟಿಎಂಸಿ (ಬೇಡಿಕೆ 562ಟಿಎಂಸಿ ಅಡಿ), ಕರ್ನಾಟಕಕ್ಕೆ 270 ಟಿಎಂಸಿ ಅಡಿ (ಬೇಡಿಕೆ 465 ಟಿಎಂಸಿ ಅಡಿ) ಕೇರಳಕ್ಕೆ 30 ಟಿಎಂಸಿ ಅಡಿ, ಪುದುಚೇರಿಗೆ ಏಳು ಟಿಎಂಸಿ ಹಾಗೂ ಪರಿಸರ ಸಂರಕ್ಷಣೆಗೆ 10 ಟಿಎಂಸಿ ಅಡಿ ನೀರನ್ನು ಹಂಚಿಕೆ ಮಾಡಿದೆ.
- ನ್ಯಾಯಮಂಡಳಿ ಐತೀರ್ಪು ಪ್ರಶ್ನಿಸಿ ತಮಿಳುನಾಡು ಮತ್ತು ಕರ್ನಾಟಕ ಸುಪ್ರೀಂ ಕೋರ್ಟ್‌ಗೆ ವಿಶೇಷ ಮೇಲ್ಮನವಿ ಸಲ್ಲಿಸಿದ್ದು, ಈ ಅರ್ಜಿಗಳು ವಿಚಾರಣೆಗೆ ಅಂಗೀಕಾರ ಆಗಿವೆ. ನ್ಯಾಯಮಂಡಳಿ ಮುಂದೆಯೂ ಕೆಲವು ಸ್ಪಷ್ಟನೆಗಳನ್ನು ಕೇಳಿ ಸಂಬಂಧಪಟ್ಟ ರಾಜ್ಯಗಳು ಅರ್ಜಿ ಹಾಕಿವೆ.೩
ಕಾವೇರಿ ನದಿಯ ಮೇಕೆದಾಟು ಅಣೆಕಟ್ಟು ಯೋಜನೆ ಮತ್ತು ವಿವಾದ
- ಬೆಂಗಳೂರಿನಿಂದ ೧೦೦ ಕಿ.ಮೀ. ಹಾಗೂ ಅರ್ಕಾವತಿ ಮತ್ತು ಕಾವೇರಿ ನದಿಗಳ ಸಂಗಮ ಸ್ಥಾನದಿಂದ ೪ ಕಿ.ಮೀ. ದೂರದಲ್ಲಿ ಮೇಕೆದಾಟು ಇದೆ. ಕಾವೇರಿ ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿನ ಬಹುತೇಕ ತಾಲ್ಲೂಕುಗಳು ಬರಪೀಡಿತವಾಗಿದ್ದು, ಅಂತರ್ಜಲವನ್ನು ಹೆಚ್ಚಾಗಿ ಅವಲಂಬಿಸಿವೆ. ಕಾವೇರಿ ಜಲ ವಿವಾದ ನ್ಯಾಯಮಂಡಳಿಯ ಅಂತಿಮ ಆದೇಶದಂತೆ ಕರ್ನಾಟಕ ನಿಗದಿತ ಪ್ರಮಾಣದ ನೀರನ್ನು ತಮಿಳುನಾಡಿಗೆ ಬಿಟ್ಟಿರುವುದಕ್ಕೆ ಅಂಕಿಅಂಶ, ಸಾಕ್ಷ್ಯಾಧಾರಗಳು ಲಭ್ಯವಿವೆ. ಆದರೂ ಈ ವಿಚಾರದಲ್ಲಿ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸುತ್ತಲೇ ಇರುತ್ತದೆ.
- ಉತ್ತಮವಾಗಿ ಮಳೆಯಾದಂತಹ ವರ್ಷಗಳಲ್ಲೂ ನೀರಿನ ಪ್ರಮಾಣದ ಬಗ್ಗೆ ತಮಿಳುನಾಡು ಆಕ್ಷೇಪ ಎತ್ತುತ್ತದೆ. ಇದನ್ನು ತಡೆಗಟ್ಟಿ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕೆಂಬುದು ಕರ್ನಾಟಕದ ಬಯಕೆ. ಕೃಷ್ಣರಾಜಸಾಗರ ಜಲಾಶಯದ ಕೆಳಭಾಗದಿಂದ ತಮಿಳುನಾಡಿನ ಗಡಿಯ ವರೆಗೆ ಕಾವೇರಿ ನದಿಯ ಜಲಾನಯನ ಪ್ರದೇಶ ೨೩,೨೩೧ ಚದರ ಕಿ.ಮೀ. ಕೆ.ಆರ್.ಎಸ್. ಜಲಾಶಯದ ಕೆಳಭಾಗದಲ್ಲಿನ ಅಚ್ಚುಕಟ್ಟು ಪ್ರದೇಶದಲ್ಲಿ ಗಣನೀಯ ಪ್ರಮಾಣದ ಬಸಿ ನೀರು ಉತ್ಪತ್ತಿಯಾಗುತ್ತಿದೆ.
- ಇದು ಸಹ ಕಾವೇರಿ ನದಿಯೊಂದಿಗೆ ತಮಿಳುನಾಡನ್ನು ಸೇರುತ್ತದೆ. ಈ ಹರಿವಿನ ಮೇಲೂ ಕರ್ನಾಟಕಕ್ಕೆ ಯಾವುದೇ ನಿಯಂತ್ರಣ ಇಲ್ಲದಿರುವುದರಿಂದ, ನ್ಯಾಯ ಮಂಡಳಿಯಿಂದ ನಿಗದಿಯಾದ ಪ್ರಮಾಣಕ್ಕಿಂತಲೂ ಹೆಚ್ಚಿನ ನೀರು ತಮಿಳುನಾಡಿಗೆ ಬಿಡುಗಡೆಯಾಗುತ್ತದೆ. ಆದರೂ ತಮಿಳುನಾಡು ಈ ಅಣೆಕಟ್ಟಿನ ವಿರುದ್ಧ ಕೇಂದ್ರ ಸರ್ಕಾರ ಮತ್ತು ನ್ಯಾಯಾಲಯಕ್ಕೆ ದೂರು ತೆಗೆದುಕೊಂಡುಹೋಗಿದೆ.
ತಮಿಳುನಾಡಿಗೆ ಹರಿದ ಕಾವೇರಿ ನೀರು
- 29-11-2014
- ಬಿಳಿಗೊಂಡ್ಳಿನಲ್ಲಿ ದಾಖಲೆಯಂತೆ ತಮಿಳುನಾಡಿಗೆ ಹರಿದ ಕಾವೇರಿ ನೀರು ನೀರಿನ ಪ್ರಮಾಣ ಟಿ.ಎಂ.ಸಿ. ಅಡಿಗಳಲ್ಲಿ .
- ಕಾವೇರಿ ನ್ಯಯ ಮಂಡಳಿ ತೀರ್ಪಿನ ಪ್ರಕಾರ ತಮಿಳುನಾಡಿಗೆ ವಾಡಿಕೆ ಮಳೆಯಾದಾಗ ವರ್ಷಕ್ಕೆ 192 ಟಿ,ಎಂ.ಸಿ. ಅಡಿ ನೀರು ಬಿಡಬೇಕು.
- ವರ್ಷ-ತಮಿಳನಾಡಿಗೆ ಬಿಟ್ಟ ನೀರಿನ ಪ್ರಮಾಣ ಟಿ.ಎಂ.ಸಿ. ಅಡಿಗಳಲ್ಲಿ
ವರ್ಷ | ನೀರಿನ ಪ್ರಮಾಣ | ವರ್ಷ | ನೀರಿನ ಪ್ರಮಾಣ | ವರ್ಷ | ನೀರಿನ ಪ್ರಮಾಣ | ||
---|---|---|---|---|---|---|---|
1991 | 340.58 | 1999 | 273.68 | 2007 | 353.63 | ||
1992 | 358.61 | 2000 | 319.26 | 2008 | 210.12 | ||
1993 | 230.39 | 2001 | 192.26 | 2009 | 222.66 | ||
1994 | 394.00 | 2002 | 109.89 | 2010 | 211.76 | ||
1995 | 195.51 | 2003 | 075.56 | 2011 | 240.45 | ||
1996 | 245.75 | 2004 | 183.91 | 2012 | 100.44 | ||
1997 | 277.06 | 2005 | 383.92 | 2013 | 260.52 | ||
1998 | 260.40 | 2006 | 258.58 | 2014 | 192.00
(ಇದುವರೆಗೆ) 29-11-2014
|
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.