ಬೆಂಗಳೂರಿನಿಂದ
ಮೈಸೂರಿಗೆ ಹೋಗುವ ಹೆದ್ದಾರಿಯಲ್ಲಿ ರೇಷ್ಮೆಯ ನಾಡು ಎಂದೇ ಹೆಸರಾದ ಚನ್ನಪಟ್ಟಣದ
ಹೊರವಲಯದಲ್ಲಿರುವ ದೊಡ್ಡ ಮಳೂರಿನ ಬಳಿ ಬಲಕ್ಕೆ ತಿರುಗಿದರೆ ಪುರಾತನ ದೇವಾಲಯವಿರುವ
ನದಿ ನರಸಿಂಹಸ್ವಾಮಿಯ ನೆಲವೀಡಿಗೆ ಹೋಗುತ್ತೇವೆ.
ಕಣ್ವ
ಮಹರ್ಷಿಗಳು ಪ್ರತಿಷ್ಠಾಪಿಸಿದ ಈ ನರಸಿಂಹಸ್ವಾಮಿ ನದಿಯ ಪಕ್ಕದಲ್ಲಿರುವ ಕಾರಣ ನದಿ
ನರಸಿಂಹ ಎಂದೇ ಖ್ಯಾತನಾಗಿದ್ದಾನೆ. ಈಗ ಊರಿನ ಹೊರಗೆ ದೇವಾಲಯವಿದೆ. ಆದರೆ, ಹಿಂದೆ
ಊರೇ ಇಲ್ಲಿತ್ತು ಎನ್ನುತ್ತಾರೆ ಊರ ಹಿರಿಯರು.
ಒಮ್ಮೆ ಪ್ರವಾಹ ಬಂದು ಊರಿಗೆ ಊರೇ ಮುಳುಗಿಹೋಯಿತು. ಆಗ ಇಲ್ಲಿ ಉಳಿದಿದ್ದೆಲ್ಲಾ ಬರಿ
ಮರಳು. ಹೀಗಾಗಿ ಊರು ಮರಳೂರು ಎಂದು ಹೆಸರಾಯ್ತು. ಚಿಕ್ಕ ಮರಳೂರು, ದೊಡ್ಡ ಮರಳೂರು
ಎಂಬ ಭಾಗವೂ ಆಯ್ತು. ದೊಡ್ಡ ಮರಳೂರು ಅಪ್ರಮೇಯನ ದೇವಾಲಯದಿಂದ ಖ್ಯಾತವಾದರೆ,
ಚಿಕ್ಕಮರಳೂರು ನರಸಿಂಹಸ್ವಾಮಿಯಿಂದ ಖ್ಯಾತವಾಯ್ತು.
ಒಮ್ಮೆ ಕಣ್ವ ಮಹರ್ಷಿಗಳ ಕನಸಿನಲ್ಲಿ ಬಂದ ಲಕ್ಷ್ಮೀನಾರಾಯಣ, ಕಾವೇರಿಯ ತಟದಲ್ಲಿ
ತನ್ನನ್ನು ಪ್ರತಿಷ್ಠಾಪಿಸಿ ಪೂಜಿಸುವಂತೆ ಸೂಚಿಸಿದನಂತೆ. ಅಂದು ಕಣ್ವರು
ಪ್ರತಿಷ್ಠಾಪಿಸಿದ ಈ ನರಸಿಂಹ ಅಲ್ಲಿಯೇ ನೆಲೆಸಿ ತನ್ನ ಬಳಿಗೆ ಬರುವ ಭಕ್ತರನ್ನು
ಪೊರೆಯುತ್ತಿದ್ದಾನೆ ಎನ್ನುತ್ತಾರೆ ಅರ್ಚಕರು.
ನಾಲ್ವಡಿ
ಕೃಷ್ಣರಾಜ ಒಡೆಯರು ದೇವಾಲಯಕ್ಕೆ 12 ಎಕರೆ ಭೂಮಿಯನ್ನು ಇನಾಂ ಆಗಿ ನೀಡಿದ್ದರು
ಎಂಬುದನ್ನು ಇತಿಹಾಸ ತಿಳಿಸುತ್ತದೆ. ಸ್ವಾತಿ ನಕ್ಷತ್ರದಲ್ಲಿ ನಡೆಯುವ ಪೂಜೆ ಇಲ್ಲಿನ
ವಿಶೇಷ. ಪ್ರತಿ ವರ್ಷ ಶ್ರಾವಣ ಮಾಸದ ಕೊನೆಯ ಶನಿವಾರ ಇಲ್ಲಿ ಪರ ನಡೆಯುತ್ತದೆ.
ಪಾಂಚರಾತ್ರಾಗಮ ರೀತ್ಯ ನಿತ್ಯ ಪೂಜೆ, ಅಭಿಷೇಕ ಜರುಗುತ್ತದೆ. ಪ್ರತಿ ಮಂಗಳವಾರ
ದೇವಾಲಯದಲ್ಲಿ ವಿಶೇಷ ಪೂಜೆ ಇರುತ್ತದೆ.
ನದಿ
ನರಸಿಂಹನ ದೇವಾಲಯ ಸಾಧಾರಣ ಕಗ್ಗಲಿನಿಂದ ನಿರ್ಮಿಸಲಾಗಿದೆ. ದೇವಾಲಯದ ಬಿತ್ತಿಗಳಲ್ಲಿ
ಯಾವುದೇ ವಿಶೇಷ ಕೆತ್ತನೆಗಳಿಲ್ಲ. ಆದರೆ, ದೇವಾಲಯದ ಗರ್ಭಗೃಹದಲ್ಲಿರುವ ಮೂರ್ತಿ
ಮನಮೋಹಕವಾಗಿದೆ. ಲಕ್ಷ್ಮೀನರಸಿಂಹಸ್ವಾಮಿಯಶಾಂತವದನ
ಹೃನ್ಮನ ಸೆಳೆಯುತ್ತದೆ. ಭಕ್ತಿಭಾವ ಮೂಡಿಸುತ್ತದೆ.
ಗರ್ಭಗೃಹದ ಪಕ್ಕದಲ್ಲಿ ವಿಘ್ನನಿವಾರಕ ವಿನಾಯಕನ ಸುಂದರ ವಿಗ್ರಹವಿದೆ. ದೇವಾಲಯದ
ಗರ್ಭಗೃಹದ ಮುಂದೆ ಜನರು ಸಾಲುಗಟ್ಟಿ ನಿಲ್ಲಲು ನಿರ್ಮಿಸಿರುವ ಕಬ್ಬಿಣದ ಸರಳುಗಳಿಗೆ
ಸುಲಿಯದ ತೆಂಗಿನ ಕಾಯಿಗಳನ್ನು ಭಕ್ತರು ಕಟ್ಟಿರುವುದು ಗಮನ ಸೆಳೆಯುತ್ತದೆ. ಇಲ್ಲಿ
ಹರಕೆ ಹೊತ್ತು ತೆಂಗಿನ ಕಾಯಿ ಕಟ್ಟಿದರೆ ನೆರವೇರುತ್ತದೆ ಎಂಬುದು ನಂಬಿಕೆ. ಅಂತೆಯೇ
ವಿವಿಧ ಧಾನ್ಯಗಳನ್ನು ಕೈಯಲ್ಲಿ ಹಿಡಿದು ಅಗರಬತ್ತಿ ಹಚ್ಚಿಸಿ ಅದರಲ್ಲಿ ಸಿಕ್ಕಿಸಿ
ದೇವಾಲಯಕ್ಕೆ 48 ಪ್ರದಕ್ಷಿಣೆ ಹಾಕಿದರೆ ಅಂದುಕೊಂಡದ್ದು ನಡೆಯುತ್ತದೆ ಎಂದೂ ಜನ
ನಂಬಿದ್ದಾರೆ.
ದೇವಾಲಯದ ಸುತ್ತಲೂ ಪ್ರಹ್ಲಾದ, ಧ್ರುವ, ಹನುಮಂತ, ಹಯಗ್ರೀವ, ಪರಾಶರ ಮೊದಲಾದ
ಕೆತ್ತನೆಗಳಿವೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.