*ಟಿ.ಎಂ.ಸತೀಶ್
ಬೆಂಗಳೂರು ಮಹಾ ನಗರದಿಂದ 16
ಕಿಮೀ ದೂರದಲ್ಲಿರುವ ಪುರಾತನ ಗ್ರಾಮವೇ ಬನ್ನೇರುಘಟ್ಟ. 997 ಅಡಿ ಎತ್ತರವಾದ
ಗಿರಿಶ್ರೇಣಿ, ದಟ್ಟವಾದ ಅರಣ್ಯವನ್ನು ಹೊಂದಿರುವ ಈ ಸ್ಥಳ ಆನೆಗಳ ಬೀಡಷ್ಟೇ
ಅಲ್ಲ ಚಂಪಕಧಾಮಸ್ವಾಮಿಯ ನೆಲೆವೀಡೂ ಹೌದು.
ಬೆಂಗಳೂರಿಗೆ ಅನತಿ ದೂರದಲ್ಲೇ ಇಂದಿಗೂ 129 ಚದರ ಕಿಲೋ ಮೀಟರ್ ದಟ್ಟ ಕಾನನವಿದೆ,
ಇದರಲ್ಲಿ 100ಕ್ಕೂ ಹೆಚ್ಚು ಕಾಡಾನೆಗಳಿವೆ ಎಂದರೆ ಜನ ನಂಬುವುದಿಲ್ಲ. ಆದರಿದು
ವಾಸ್ತವ. ಈ ಪ್ರಾಣಿಗಳನ್ನು ಕಾನನಗಳನ್ನು ಸಂರಕ್ಷಿಸಲು ಸರ್ಕಾರ ಇಲ್ಲಿ ವನ್ಯಜೀವಿ
ಧಾಮವನ್ನು ನಿರ್ಮಿಸಿದ್ದು, ಈ ಪ್ರದೇಶವನ್ನು ಸಂರಕ್ಷಿತ ಅಭಯಾರಣ್ಯ ಎಂದು
ಘೋಷಿಸಿದೆ.
ಬನ್ನೇರುಘಟ್ಟ
ಕಾನನಪ್ರದೇಶವಷ್ಟೇ ಅಲ್ಲ ಚಂಪಕಧಾಮ ಸ್ವಾಮಿಯ ನೆಲೆವೀಡೂ ಹೌದು. ಬನ್ನೇರುಘಟ್ಟ
ಅಭಯಾರಣ್ಯಕ್ಕೆ ಹೋಗುವ ಮುನ್ನ ಬನ್ನೇರುಘಟ್ಟ ಗ್ರಾಮದಲ್ಲಿ
ಚಂಪಕಧಾಮ ಸ್ವಾಮಿಯ ಭವ್ಯ ದೇವಾಲಯ
ನಮ್ಮನ್ನು ಕೈಬೀಸಿ ಕರೆಯುತ್ತದೆ.
ಬೆಂಗಳೂರಿನಿಂದ
ಬನ್ನೇರುಘಟ್ಟಕ್ಕೆ ಹೋಗುವ ರಸ್ತೆಯಲ್ಲಿ ಸಾಗಿದರೆ ದೇವಾಲಯದ ಮುಂದೆಯೇ ಹೋಗಿ ನಾವು
ನಿಲ್ಲುತ್ತೇವೆ. ಎತ್ತರವಾದ ಗಿರಿಯ ಮೇಲೆ ಚಂಪಕಧಾಮ ದೇವಾಲಯವಿದೆ. ಅತ್ಯಂತ
ಆಕರ್ಷಕವಾದ ಮಹಾದ್ವಾರ ನಯನಮನೋಹರವಾಗಿದೆ.
ಬಹು ಹಿಂದೆಯೇ ಇಲ್ಲಿ ಜನವಸತಿ
ಇತ್ತು, ದಾಮೋದರ ದೇವಾಲಯವಿತ್ತು ಎನ್ನುವುದು ಇತಿಹಾಸದಿಂದ ತಿಳಿದುಬರುತ್ತದೆ. ಈ
ದೇವಾಲಯವನ್ನು ಹೊಯ್ಸಳರ ಸಾಮಂತನಾಗಿದ್ದ ಪೂರ್ವಾದಿರಾಯನೆಂಬ ತಮಿಳರಸ 1257ರಲ್ಲಿ
ಕಟ್ಟಿಸಿದ ಎಂದು ಶಾಸನಗಳು ಸಾರುತ್ತವೆ.
ಮೆಟ್ಟಿಲುಗಳನ್ನೇರಿ
ಮುಖ್ಯದ್ವಾರ ಪ್ರವೇಶಿಸಿ ಒಳಹೋದರೆ, ಬಂಡೆಯ ಮೇಲೆ ವಿಶಾಲವಾದ ಹಾಗೂ ಭವ್ಯವಾದ
ದೇವಾಲಯವಿದೆ. ದೇವಾಲಯದ ಎದುರು ಧ್ವಜಸ್ತಂಭವಿದೆ. ಈ ಸ್ತಂಭದ ಬುಡದಲ್ಲಿ 12ನೇ
ಶತಮಾನಕ್ಕೆ ಸೇರಿದ ತಮಿಳು ಶಾಸನವೂ ಇದೆ. ಗರ್ಭಗುಡಿಯಲ್ಲಿ
ಲಕ್ಷ್ಮೀ ಹಾಗೂ ಭೂದೇವಿ ಸಹಿತ ಚಂಪಕಧಾಮ ಸ್ವಾಮಿಯ
ಸುಂದರ ಮೂರ್ತಿಯಿದೆ.
ದೇವಾಲಯದಲ್ಲಿ ಪುರಾತನ ಉತ್ಸವ ಮೂರ್ತಿ ಹಾಗೂ ಸುಂದರವಾದ ಗರುಡಗಂಭವೂ ಇದೆ.
ಹಿಂಬದಿಯಲ್ಲಿ ಇರುವ ಎತ್ತರ
ಗಿರಿಯಲ್ಲಿ
ಲಕ್ಷ್ಮೀನರಸಿಂಹ, ಸಂಪಂಗಿರಾಮದೇವರ ದೇವಾಲಯವಿದೆ. ಪ್ರತಿವರ್ಷ ಮಾರ್ಚ್-ಏಪ್ರಿಲ್
ತಿಂಗಳಲ್ಲಿ ಇಲ್ಲಿ 3 ದಿನಗಳ ಕಾಲ ರಥೋತ್ಸವ ಜರುಗುತ್ತದೆ. ಸಂಜೆಯ ವೇಳೆ ಈ
ಗಿರಿಶಿಖರದ ಮೇಲೆ ನಿಂತು ಉತ್ತರದಿಕ್ಕಿಗೆ ಕಣ್ಣು ಹಾಯಿಸಿದರೆ ಬೆಂಗಳೂರಿನ
ಝಗಮಗಿಸುವ ವಿದ್ಯುತ್ ದೀಪಗಳ ನೋಟ ಮನಸೆಳೆಯುತ್ತದೆ. ತುಸು ಮಬ್ಬು ಗತ್ತಲಿರುವಾಗ
ದಕ್ಷಿಣದಿಕ್ಕಿಗೆ ಹಾಗೂ ಪೂರ್ವಕ್ಕೆ ನೋಡಿದರೆ ಹಚ್ಚ ಹಸುರಿನಿಂದ ಕೂಡಿದ ದಟ್ಟವಾದ
ಕಾನನ ಕಣ್ಮನ ಸೆಳೆಯುತ್ತದೆ.
ಸಂಪರ್ಕ: ನಿರ್ದೇಶಕರು,
ಪ್ರವಾಸೋದ್ಯಮ ಇಲಾಖೆ, ಖನಿಜ ಭವನ,
ರೇಸ್‌ಕೋರ್ಸ್ ರಸ್ತೆ, ಬೆಂಗಳೂರು.
ದೂರವಾಣಿ :080-22352901 /22352909 /22352903
Email : kstdc@vsnl.in
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.