fly

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಮಂಗಳವಾರ, ಮಾರ್ಚ್ 25, 2014

ಎಂದು ಬಂದೀತು ಪರಿವರ್ತನ ಕಾಲ?


ನಿಮಗೆ ಯಾವ ಕಾಲ ಇಷ್ಟ? ಚಳಿಗಾಲವೇ? `ಅಯ್ಯೋ ಚಳಿಗಾಲವೇ? ನಡುಗುವ ಚಳಿಯಲ್ಲಿ ಹೊರ ಹೋಗಲು ಮನಸ್ಸೇ ಬಾರದೆ, ಹೊದ್ದುಕೊಂಡು ಮಲಗಬೇಕು ಎನ್ನಿಸುತ್ತದೆ. ಚಳಿಗಾಲದ ಶುಷ್ಕ ಗಾಳಿಯಿಂದ ತ್ವಚೆ ಒಣಗಿ, ತುಟಿ ಬಿರಿದು ಕಿರಿಕಿರಿಯಾಗುತ್ತದೆ ಅಲ್ಲವೇ?
ಹಾಗಾದರೆ ಬೇಸಿಗೆ ಕಾಲ?
`ಅಯ್ಯೋ ರಾಮ ಬೇಸಿಗೆಯ ಧಗೆ, ಉರಿ ಬಿಸಿಲು, ಬಿಸಿ ಗಾಳಿ. ನರಕ ಯಾತನೆ. ಯಾರಿಗೆ ಬೇಕಪ್ಪ? ಬೇಡವೇ ಬೇಡ. ನೆನಪಿಸಿಕೊಳ್ಳುವುದೂ ಬೇಡ. ಇನ್ನು ಮಳೆಗಾಲ ಇಷ್ಟ ಅಲ್ಲವೇ? `ಅಯ್ಯೋ ಜಿಟಿ ಜಿಟಿ ಮಳೆ ಹತ್ತಿದರೆ ಸಾಕು ಹೊರ ಹೋಗುವುದಿರಲಿ, ನಿತ್ಯದ ಕೆಲಸಗಳಿಗೂ ತೊಂದರೆ. ಮಳೆ ಕಡಿಮೆಯಾದ ಈ ದಿನಗಳಲ್ಲಿ ಹೊರಡುವಾಗ ಕೊಡೆ ಕೊಂಡೋಗುವುದನ್ನು ಮರೆತೇ ಬಿಟ್ಟಿದ್ದೇವೆ. ಅಂಥ ಸಮಯದಲ್ಲೇ ಅಚಾನಕ್ಕಾಗಿ ಬರುವ ಮಳೆ. ಜೊತೆಗೆ ಅಕಾಲ ಮಳೆ ಮತ್ತು ನಗರ ಪ್ರದೇಶಗಳಲ್ಲಿ ಚರಂಡಿ ನೀರು ಮನೆಗೇ ನುಗ್ಗುವ ನರಕಯಾತನೆ.
ಹಾಗಾದರೆ ಯಾವ ಕಾಲ ಮನಕ್ಕೆ ಮುದ ನೀಡುತ್ತದೆ?
ಪರಿವರ್ತನಾ ಕಾಲ! ಹೌದು. ಏನಿದು ಪರಿವರ್ತನ ಕಾಲ? ಮೂರೂ ಕಾಲಗಳ ನಡು ನಡುವೆ ಬರುವುದೇ ಪರಿವರ್ತನ ಕಾಲ (ಟ್ರಾನ್ಸಿಷನ್ ಪೀರಿಯಡ್).
ಚಳಿಗಾಲದಿಂದ ಬೇಸಿಗೆ ಕಾಲಕ್ಕೆ, ಬೇಸಿಗೆಯಿಂದ ಮಳೆಗಾಲಕ್ಕೆ, ನಂತರ ಮಳೆಗಾಲದಿಂದ ಚಳಿಗಾಲಕ್ಕೆ... ಹೀಗೆ ಒಂದು ಕಾಲದಿಂದ ಮತ್ತೊಂದಕ್ಕೆ ನಮ್ಮನ್ನು ಕೊಂಡೊಯ್ಯುವುದೇ ಪರಿವರ್ತನ ಕಾಲ.
ಈ ಕಾಲ ಮನಸ್ಸನ್ನು ಮುದಗೊಳಿಸುವ ಆಹ್ಲಾದವನ್ನು ನೀಡುತ್ತದೆ. ಬೇಸಿಗೆಯಿಂದ ಮಳೆಗಾಲದ ನಡುವಿನ ಪರಿವರ್ತನ ಕಾಲವನ್ನು ತೆಗೆದುಕೊಂಡರೆ, ಬಿಸಿಲ ಬೇಗೆಯಿಂದ ದಣಿದ ದೇಹ- ಮನಸ್ಸಿಗೆ ಹಿತವಾದ ತೇವ ಮಿಶ್ರಿತ ತಂಗಾಳಿಯು ಮಳೆಯ ಮಣ್ಣಿನ ಸುವಾಸನೆಯನ್ನು ತಂದು ಹಾಯ್ ಎನಿಸುವಂತೆ ಮಾಡುತ್ತದೆ.
ಎಲ್ಲ ಸಂಕಷ್ಟಗಳೂ ಬಗೆಹರಿದವೇನೋ ಎನಿಸುವ ಹಿತಾನುಭವ. ಜೊತೆಗೆ ಜಿನುಗುವ ಮುಂಗಾರು ಮಳೆಯಲ್ಲಿ `ಮುಂಗಾರು ಮಳೆಯೇ, ಏನು ನಿನ್ನ ಹನಿಗಳ ಲೀಲೆ...' ಎಂದು ಹಾಡಿ ಕುಣಿಯುವ ಆಸೆ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಉಂಟಾಗುತ್ತದೆ. ಈ ಖುಷಿಯನ್ನು ಇಮ್ಮಡಿಗೊಳಿಸಲು ಆಗಸದಲ್ಲಿ ಕಾಮನಬಿಲ್ಲೂ ಪ್ರತ್ಯಕ್ಷವಾಗುತ್ತದೆ.
ಇನ್ನು ಮಳೆಗಾಲದಿಂದ- ಚಳಿಗಾಲದ ನಡುವಿನ ಪರಿವರ್ತನ ಕಾಲ. ಇಲ್ಲಿ ಗಾಳಿಯಲ್ಲೇನೋ ಬದಲಾವಣೆಯಾದ ಸುಖದ ಅನುಭವ. ಅದೇ ಮೂಡ್ಗಾಳಿ. ಇದು ನಮ್ಮನ್ನು ಕಲ್ಪನಾ ಲೋಕದಲ್ಲಿ ವಿಹರಿಸುವಂತೆ ಮಾಡಿದ ಅನುಭವ ಕಟ್ಟಿಕೊಡುತ್ತದೆ.
ಈ ಚಳಿಗಾಲದ ಆರಂಭದಲ್ಲಿ ಕೆಲವು ವಿಶೇಷ ಹೂಗಳು ಅರಳುತ್ತವೆ. ಅದರಲ್ಲಿ ಆಕಾಶ ಮಲ್ಲಿಗೆ, ಸಂಜೆ ಮಲ್ಲಿಗೆ ಸೇರಿವೆ. ಆಕಾಶ ಮಲ್ಲಿಗೆಯ ಸುಗಂಧವು ಈ ಸಮಯದಲ್ಲಿ ತಂಪಾದ ಗಾಳಿಯೊಡನೆ ತೇಲಿ ಬಂದು ಹಿತಾನುಭವ ಕೊಟ್ಟು, ಆಕಾಶದಲ್ಲಿ ತೇಲಾಡಿದಂತೆ ಖುಷಿ ಕೊಡುತ್ತದೆ.
ಇನ್ನು ಚಳಿಗಾಲದಿಂದ ಬೇಸಿಗೆ ಕಾಲಕ್ಕೆ ಪರಿವರ್ತನೆಗೊಳ್ಳುವ ಕಾಲದಲ್ಲಿ, ಚಳಿಯಿಂದ ನಡುಗಿ ಕುಳಿತ ದೇಹ- ಮನಸ್ಸಿಗೆ ಅತ್ತ ತೀವ್ರ ಚಳಿಯೂ ಅಲ್ಲದ ಇತ್ತ ಬಿರು ಬಿಸಿಲ ಸೆಖೆಯೂ ಅಲ್ಲದ ಸಮತೋಲನದ ಉಷ್ಣತೆ ವಾತಾವರಣವನ್ನು ವ್ಯಾಪಿಸುತ್ತದೆ. ಈ ಕಾಲದಲ್ಲೂ ಅನೇಕ ಹೂಗಳು ಅರಳುತ್ತವೆ. ಆದರೆ ನನಗೆ ಮಾತ್ರ ಅತಿ ವಿಶೇಷವಾದ ಉಲ್ಲಸಿತ ಅನುಭವ ಕೊಡುವುದು ಬೇವಿನ ಹೂ! ಹೌದು ಈ ಬೇವಿನ ಕಂಪು ತಂಪಾದ, ವಿಸ್ಮಯದ ಅನುಭವ ಕೊಡುತ್ತದೆ. ಬೇವಿನ ಮರದ ಎಲೆಗಳು ಚಳಿಗಾಲದಲ್ಲಿ ಒಣಗಿ ಉದುರುತ್ತಾ ಬಂದಿರುವಾಗ, ಪರಿವರ್ತನ ಕಾಲದಲ್ಲಿ ಮತ್ತೆ ಮರ ನಿಧಾನವಾಗಿ ಕೆಂಪು ಎಲೆ, ಚಿಗುರುಗಳ ಜೊತೆಗೆ ಆ ವಿಶಿಷ್ಟ ಬೇವಿನ ಹೂಗಳನ್ನು ಅರಳಿಸುತ್ತದೆ. ಆಗ ಹೊರಡುವ ಬೇವಿನ ಹೂವಿನ ಸುವಾಸನೆ ವರ್ಣನಾತೀತ!
ಉತ್ತರ ಕರ್ನಾಟಕದಂತಹ ಪ್ರದೇಶದಲ್ಲಿರುವ ನನಗೇ ಇಂತಹ ಅನುಭವ ಈ ಬಗೆಯ ಪ್ರಕೃತಿ ವಿಸ್ಮಯದಿಂದ ಆದರೆ, ಇನ್ನು ಮಲೆನಾಡ ಮಂದಿಗೆ ಎಂತಹ ಖುಷಿ ಕೊಡಬಹುದು ಈ ಪರಿವರ್ತನ ಕಾಲ ಅಲ್ಲವೇ?
ಆದರೆ, ಎಲ್ಲ ಕಡೆಯೂ ಕಾಡು ನಾಶ, ಕೃಷಿ ಭೂಮಿ ಒತ್ತುವರಿ, ನಗರೀಕರಣ, ಕಾರ್ಖಾನೆಗಳು ವಿಸರ್ಜಿಸುವ ತ್ಯಾಜ್ಯ, ವಾಹನಗಳ ತ್ಯಾಜ್ಯದ ಜೊತೆಗೆ ನೈಸರ್ಗಿಕ ಸಂಪನ್ಮೂಲಗಳ ಅವ್ಯಾಹತ ದರೋಡೆ ನಡೆಯುತ್ತಿರುವುದರಿಂದ, ನಾವು ಇಂದು ಬರೀ ಬಿರು ಬಿಸಿಲ ಬೇಸಿಗೆ ಕಾಲವೊಂದನ್ನೇ ಹೆಚ್ಚಾಗಿ ಅನುಭವಿಸುತ್ತಿದ್ದೇವೆ. ಪ್ರಕೃತಿಯನ್ನು ಉಳಿಸಲು, ಅದರ ಹಿತವಾದ, ವಿಸ್ಮಯ ಕಾಲಗಳ ಸವಿಯನ್ನು ಅನುಭವಿಸಲು ನಮ್ಮಲ್ಲೂ ಒಳ್ಳೆಯ `ಪರಿವರ್ತನೆ' ಆಗುವ ಕಾಲ ಬರಬಾರದೇ?
                                                                                  => ಈ ಅಂಕಣ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು