ಭಾನುವಾರ, ಜನವರಿ 22, 2017

ಅಮ್ಮನ ಬಿಳಿಯ ಕತ್ತಲ್ಲಿಅಮ್ಮನ ಬಿಳಿಯ ಕತ್ತಲ್ಲಿ ಕಪ್ಪು ಮಣಿಯ ಸರ ನೋಡಿದ್ದಾಗೆಲ್ಲ ನನಗೂ ಅಂತಹದೇ ಸರ ಬೇಕೆಂದು ಅತ್ತಿದ್ದೆ
ಅಮ್ಮ ತಿಳಿ ಹೇಳಿದ್ದಳು
ಅದು ಪವಿತ್ರವಾದ ಮಾಂಗಲ್ಯ ಎಂದೂ ಅದು ಆಟಕ್ಕೆ ಹಾಕುವ ಸರ ಅಲ್ಲವೆಂದೂ ದೊಡ್ಡವಳಾದ ಮೇಲೆ ನಿನಗೆಂದೇ ಹುಟ್ಟಿದ ರಾಜಕುಮಾರ ಬಂದು ತನ್ನ ಕೈಯಾರೆ ಅದ ತೊಡಿಸಿ ..
ನಿನ್ನನ್ನು ಎತ್ತಿಕೊಂಡು..
ತನ್ನರಮನೆಗೆ ಕರೆದೊಯ್ವನೆಂದು….
ಅಮ್ಮನ ಮಾತಿಗೆ ಪುಟ್ಟ ಕನಸೊಂದು ಗೂಡು ಕಟ್ಟ ತೊಡಗಿತು
ಯಾವಾಗ ದೊಡ್ಡವಳಾದೇನೋ ರಾಜಕುಮಾರ ಹೇಗಿರುವನೋ
ಅವನರಮನೆಗೆ ತಾನೇ ರಾಣಿಯಾದಂತೆ..
ಅವನೊಲವಿಗೆ ತಾನೇ ಅರಗಿಣಿಯಾದಂತೆ….
ದಿನಗಳೆದಂತೆ ನಾ ಬೆಳೆದೆ
ಕನ್ನಡಿಯು ಹೇಳಿತು ನಾನು ರಾಜಕುವರಿಯೇ ಎಂದು
ಅಪ್ಪ ಅಮ್ಮನ ಮುದ್ದಿನ ಕೂಸು
ಅಣ್ಣನ ಸಕ್ಕರೆ ಗೊಂಬೆ
ಇದ್ದದ್ದರಲ್ಲೇ ನಾನು ರಾಜಕುಮಾರಿ ನನ್ನ ಮನೆಗೆ….
ಬಂದನೊಬ್ಬ ರಾಜಕುಮಾರ ನನ್ನ ಕರೆದೊಯ್ಯಲು..
ನನ್ನ ಕನಸು ನನಸಾದಂತೆ
ನನಗೊಂದು ಕಪ್ಪುಮಣಿ ಸರ ತಂದಂತೆ
ರಾಜಕುವರ ತಂದ ಕಪ್ಪುಮಣಿಯ ಬೆಲೆ ನನ್ನಪ್ಪನ ಜೀವಮಾನದ ದುಡಿಮೆ
ನನ್ನಮ್ಮನ ಕಣ್ಣ ನೀರು
ನನ್ನ ಜೀವದ ಹಕ್ಕು  ಎಂದು ತಿಳಿಯುವಷ್ಟರಲ್ಲಿ ನನ್ನ ಕತ್ತ ಸುತ್ತ ಕಪ್ಪು ಮಣಿ ಹೊಳೆಯುತ್ತಿತ್ತು
ಕನಸು ಗರ್ಭಪಾತವಾಗಿತ್ತು……
ಅಮ್ಮ…..
ಕನಸ ತುಂಬುವ ಮೊದಲು ಕಸುವ ತುಂಬ ಬಾರದಿತ್ತೆ…..
ಅಪ್ಪ..
ಜೀವಮಾನದ ದುಡಿಮೆ ನನಗಾಗಿ ಸುರಿವ ಬದಲು..
ಜೀವನ ನಡೆಸುವ ದುಡಿಮೆ ಕಲಿಸಬಾರದಿತ್ತೆ
ಅಣ್ಣ..
ನಿನ್ನ ಸಕ್ಕರೆಯ ಬೊಂಬೆಗೆ
ಸಕ್ಕರೆ ತರುವುದ ಹೇಳಿಕೊಡಬಾರದಿತ್ತೆ…..
ಕಪ್ಪು ಮಣಿಯ ಆಸೆಗೆ ಜೀವ ತೊತ್ತಾಯಿತೇ..??!!(ಒಂದು ಹಳೆಯ ಪುಟ..:))))
-ಸುನಿತಾ ಮಂಜುನಾಥ್  By  on July 3, 2012

ಕಾಮೆಂಟ್‌ಗಳಿಲ್ಲ: