ಭಾಷೆಯ ಬಳಕೆ ಗ್ರಾಮ್ಯ ಭಾಷೆಯಲ್ಲಿದೆ ,
ಮಂಡ್ಯಾ ಭಾಷೆ ಬಲ್ಲವರಿಗೆ ಇದೊಂದು ಮಜಾ ಕೊಡುವ ಕಥೆಯಾಗುತ್ತದೆ
ಪುಟ್ಮಾದನ ಮದುವೆಯ ಹಾಸ್ಯ ಕಥೆ
"ಲೇ ಹೈದ ಬರಲೇ ಬೇಕು ಕನ್ಲಾ ಮನೆಗೆ ..... ಬರ್ನಿಲ್ಲಾ ಅಂದ್ರೆ ನೋಡು .......! "ಅಂತಾ ದಮಕಿ ಹಾಕ್ತಾ ಬಂದ ನಮ್ ಪುಟ್ಮಾದ .ಮನೆಯ ಮುಂದೆ ಅವನ ಬಿಳೀ ಮಾರುತಿ ಕಾರು ನನ್ನನ್ನು ನೋಡಿ ಕಣ್ ಹೊಡೆದು ಅಣಕಿಸುತ್ತಾ ನಿಂತಿತ್ತು,
ಓ ನಮ್ ಪುಟ್ಮಾದ ಯಪ್ಪಾ ನಿಮಗೆ ಗೊತ್ತಿಲ್ಲಾ......! ನಮ್ "ದುರಾಸೆಪುರದಲ್ಲಿಯೇ"
ಬಹಳ ವಿಚಿತ್ರಾ ಕಣ್ರೀ , ಬಹಳ ಒರಟ ,ನನ್ನ ಕ್ಲಾಸ್ ಮೆಟ್ಟು ...? , ಯಾತಕ್ಕೂ
ಹೆದರದ ಹುಂಬ . ಆದರೆ ಬೆನ್ನಿಗೆ ಬಿದ್ದ ಗೆಳೆಯ, ಮನೆಗೆ ಬಂದ. ಪುಟ್ಮಾದನನ್ನು
ಕಂಡೊಡನೆ ಅವನ ಮದುವೆಯ ಮಾತು ಕಥೆಯ ನೆನಪಾಯ್ತು.
ಹೂ ಕಣ್ರೀ ಅದು ಒಂತರಾ ವಿಚಿತ್ರ ಕಥೆ , ಅವತ್ತು ಹೀಗಾಯ್ತು , ನನ್ನ ಮನೆಯಲ್ಲಿ ವಿರಾಮವಾಗಿ ರಜೆಯ ಸವಿಯನ್ನು ಸವಿಯುತ್ತಿದ್ದೆ, "ಲೇ ಹೈದಾ ಏನ್ಲಾ ಬೊ ಪುರುಸೋತ್ತಾಗಿದ್ದೀ ...... ?" ಅಂತಾ ನಗು ನಗುತ್ತಾ ಎದುರು ನಿಂತಾ ಪುಟ್ಮಾದ .
"ಓ ಹೊ ಹೊ ಬಾರೈಯ್ಯಾ ಬಾ ಬಾ ಅಪರೂಪಕ್ಕೆ ಈ ಕಡೆ ನಮ್ ಮನೆಗೆ ಬಂದೆ ಬಾ ಬಾ" ಅಂತಾ ಸ್ವಾಗತಿಸಿದೆ .
ಲೇ ಅನಿಲ್ ಜಾಸ್ತಿ ಮಾತಾಡೋಕೆ ಪುರುಸೋತ್ತಿಲ್ಲಾ ಬ್ಯಾಗ ರೆಡಿ ಆಗು ಕಿತಾಪತಿ ಪುರಕ್ಕೆ ಹೋಗ್ಬೇಕು ಅಂತಾ ನನ್ನನ್ನು ಎಬ್ಬಿಸಿಕೊಂಡು ಹೊರಟ .
ದಾರಿಯಲ್ಲಿ ತಿಳಿದು ಬಂತು ಈ ಶತ ಒರಟ ಮದುವೆ ಆಗಲು ಹುಡುಗಿ ಹುಡುಕುತ್ತಿದ್ದು ,
ಅವತ್ತು ಒಬ್ಬರ ಸಹಾಯದಿಂದ ಒಂದು ಹುಡುಗಿ ನೋಡಲು ತೆರಳಿದ್ದ , ಜೊತೆಗೆ ನನ್ನನ್ನೂ
ಬಲವಂತಾ ಮಾಡಿ ಕರೆದುಕೊಂಡು ಹೊರಟಿದ್ದಾ . ಇವನಿಗಿಂತಾ ಮೊದಲೇ ಅವನ ಅಪ್ಪಾ ಅಮ್ಮ
ಹೊರಟಿದ್ದರು , "ಕಿತಾಪತಿ ಪುರ" ತಲುಪಿದ ನಾವು , ಅವನ ಗೆಳೆಯರ ಮನೆಗೆ ತೆರಳಿ ಅವರ ಕುಟುಂಬದ ಜೊತೆ ಹುಡುಗಿಯ ಮನೆಗೆ ತೆರಳಿದೆವು. ಹುಡುಗನ ಅಪ್ಪಾ ಅಮ್ಮ ಆಗ್ಲೇ ಅಲ್ಲಿ ತಲುಪಿದ್ದರು
ಹುಡುಗಿಯ ಮನೆ ಹೊಕ್ಕ ನಮ್ಮನ್ನು ನಮ್ಮಿಬ್ಬರ ಎರಡೂ ಕುಟುಂಬವನ್ನು ಬಲ್ಲ ಒಬ್ಬರು
ಸ್ವಾಗತಿಸಿದರು . ಪರಸ್ಪರ ಪರಿಚಯ ಆಯ್ತು , ಮಾತುಕತೆ ಪ್ರಾರಂಭ ಆಯ್ತು.
ಹುಡುಗಿ ಅಪ್ಪಾ :-"ಏನ್ರಪ್ಪಾ ನಮ್ ಪ್ಯಾಮಿಲಿ ಎಲ್ಲಾ ನಿಮಗೆ ಗೊತ್ತು , ನಿಮ್
ಪ್ಯಾಮಿಲಿ ಇಚಾರ ಬಾಳ ಕೇಳಿವ್ನಿ , ಭಾರಿ ದೊಡ್ಡ ಕುಳ
ಅಂತಾ ಸರೀಕರು ಹೇಳವ್ರೆ ,ಈ ಮದ್ವೆ ಆಗ್ಬುಟ್ರೆ , ನಮ್ ಹೆಣ್ಣು
ಸಂದಾಕೆ ಇರಬೈದು ಅಂತಾ ಅನ್ಸದೆ , ಮಾತ್
ಮುಂದುವರ್ಸದೆ ಯೋಳ್ರಪ್ಪಾ ...?"
ಹುಡುಗನ ಅಪ್ಪಾ :- "ಅಯ್ಯೋ ಎಲ್ಲಿ ಭಾರಿ ಕುಳಾ ಅಂದೀರಿ ತಗಳಿ , ಯವಾರಾ
ಎಲ್ಲಾ ಡಲ್ ಆಯ್ತಾ ಅದೇ , ಇನ್ ಮ್ಯಾಕೆ ನಮ್ ಹೈದನೆ ಯವಾರ ನೋಡ್ಕಬೇಕು
ನಂಗೂ ಸಾಕಾಗೋಗದೆ , ನಮ್ ಹೈದಾ ನಿಮ್ ಮಗ್ಳಾ ಇನ್ನೂ ನ್ವಾಡೆ ಇಲ್ಲಾ , ಆಗ್ಲೇ ಮಾತು ಕತೆ ಅಂತೀರಲ್ಲಾ ? ಕರ್ಸಿ ಹೆಣ್ ಮೊಗವ , ನಾಮು ನೋಡುಮ ."
ಹುಡುಗಿ ಅಪ್ಪಾ :- ''ಊ ಅದೂ ಸರ್ಯೇ , ಲೇ ಯಾರಮ್ಮಿ ಒಳಗೆ ಕರ್ಕಾ ಬಮ್ಮಿ ಲಕ್ಸ್ಮಿಯ ಒರಾಕೆ'' ಅಂದ್ರು
.
ಹುಡುಗಿ ನಗು ನಗುತ್ತಾ ನಾಚುತ್ತಾ ಕೈಲಿ ಶರಬತ್ ಗ್ಲಾಸುಗಳ ತಟ್ಟೆ ಹಿಡಿದು ಬಂತು
, ಎಲ್ಲರಿಗೂ ತಲೆ ತಗ್ಗಿಕೊಂಡು ಶರಬತ್ ತುಂಬಿದ ಗ್ಲಾಸ್ ಗಳನ್ನ ನೀಡುತ್ತಾ
ಬರುತ್ತಿತ್ತು.
ಹುಡುಗಿ ಅಪ್ಪಾ :- "ಅವ್ವಾ ನಾಚ್ಕಾ ಬ್ಯಾಡ ಇವರೆಲ್ಲಾ ನಮ್ ಜನ್ಗಳೇ ,
ಇಲ್ಲವ್ರಲ್ಲಾ ದೊಡ್ಡವರು ಅವರಿಗೆ ಕೊಡು ತಾಯಿ, " ಅಂತಾ ಹೇಳಿ, ಮುತುವರ್ಜಿ ವಹಿಸಿ
ಮಗಳಿಗೆ ಧೈರ್ಯ ತುಂಬಿ ಎಲ್ಲರಿಗೂ ಶರಬತ್ ಕೊಡಿಸಿದರು, ಶರಬತ್ ಕೊಟ್ಟ ಹುಡುಗಿ
ನಮ್ ಪುಟ್ಮಾದ ನ ಕಡೆ ಒಂದು ಕಿರು ನಗೆ ಬಿಸಾಕಿ ಒಳಗೆ ಹೋದಳು,
ನಮ್ ಪಕ್ಕಾ ಕುಳಿತಿದ್ದ ಪುಟ್ಮಾದ ಸಣ್ಣಗೆ ಕಂಪಿಸಿದ , ನಾನು ಯಾಕೋ ಪುಟ್ಮಾದ ಎನಾಯ್ತು ? ಹುಡುಗಿ ಚೆನ್ನಾಗಿದ್ದಾಳೆ ಅನ್ಸುತ್ತೆ ಒಪ್ಪಿಗೆನಾ ? ಅಂತಾ ಅವನ ಕಿವಿಯಲ್ಲಿ ಉಸುರಿದೆ , ಏನಿಲ್ಲಾ ಅಂತಾ ಮುಖ ಅರಳಿಸಿ ಅವಳು ಕೊಟ್ಟಾ ಶರಬತ್ ರುಚಿಯಲ್ಲಿ ಅವಳ ಚೆಲುವಿನ ಸವಿ ಸವಿಯುತ್ತಿದ್ದ .
ಸ್ವಲ್ಪ ಹೊತ್ತು ಅದು ಇದೂ ಮಳೆ ಬೆಲೆ ವಿಚಾರ ಮಾತಾಡಿದ ಎರಡೂ ಕಡೆಯವರು ಮುಖ್ಯ ವಿಚಾರಕ್ಕೆ ಬಂದರು,
ಹುಡ್ಗಿಯ ತಾಯಿ ಹೊರಬಂದು , ಒಸಿ ಬನ್ನಿ ಒಳಾಕೆ ಅಂತಾ ಹುಡುಗಿಯ
ಅಪ್ಪನನ್ನು ಮನೆಯ ಕೋಣೆಯೊಳಗೆ ಕರೆದು ಕೊಂಡು ಹೋದರು . ಸ್ವಲ್ಪ ಸಮಯದ ನಂತರ
ಹೊರಬಂದಾ ಇಬ್ಬರ ಮುಖದಲ್ಲೂ ಹುಡುಗ ಒಪ್ಪಿಗೆಯಾದ ಬಗ್ಗೆ ಭಾವನೆ ವ್ಯಕ್ತವಾಗುತ್ತಿತ್ತು.
ಹುಡುಗಿಯ ಅಪ್ಪ :- "ಬಾಳಾ ಒತ್ತಾಯ್ತು , ನಮ್ ಹುಡ್ಗಿ , ಬಗ್ಗೆ ಏನೂ ಯೋಳಲೇ
ಇಲ್ಲಾ ನೀವೆಲ್ಲಾ , ನಮ್ಗೆ ನಿಮ್ ಹುಡುಗ ಒಪ್ಗೆ ಆಗವ್ನೆ , ಏನ್ರಪ್ಪಾ ಒಪ್ಪಿಗೆಯ
ನಿಮಗೆ ಈ ಸಂಬಂಧ , ಊ ಅನ್ನೋದಾದ್ರೆ ಮುಂದುವರ್ಸಿ ಮಾತಾಡುಮಾ ," ಏನನ್ದೀರಿ? ಅಂದ್ರು
.
ಹುಡುಗನ ಅಪ್ಪಾ :- "ಓ ಇದಾ ಇಸ್ಯಾ , ಏನ್ಲಾ ಮೊಗ ಹುಡುಗಿ ನಿಂಗೆ ಒಪ್ಪಿಗೆಯಾ ? "ಯೋಳ್ಲಾ ಅಂದ್ರ್ರೂ,
ಪುಟ್ಮಾದ :- ನನ್ದೆನದೇ ಎಲ್ಲಾ ದೊಡ್ಡವರು ನೀಮೆ ಇದ್ದೀರಲ್ಲಾ , ನಿಮಗೆ ಒಪ್ಗೆ ಆಗಿದ್ರೆ , ನಂಗೂ ಒಪ್ಪಿಗೆಯಾ ಅಂದಾ ,
ಹುಡುಗನ ಅಪ್ಪಾ:- "ಲೇ ಮದುವೇ ಆಗಿ ಸಂಸಾರ ಮಾಡೋವ್ನು ನೀನು ಕನ್ಲಾ ," "
ಸರ್ಯಾಗಿ ಯೋಳೋ ಐವಾನ್ ", ಅಂದ್ರೂ
ನನ್ನ ಕಡೆ ತಿರುಗಿ , ಒಸಿ ಆಚೆ ನಮ್ ಹೈದನ ಆಚೆ ಕರ್ಕಂಡು ಓಗಿ ಕೇಳಪ್ಪಾ ,
ನೀನೆ ಸರಿ ಇವನ ದಾರಿಗೆ ತರೋಕೆ , ಅಂದು ಇಬ್ಬರನ್ನು ಮನೆಯ ಹೊರಗೆ ಕಳುಹಿಸಿದರು
ನಾನು:- "ಲೇ ಪುಟ್ಮಾದ ಹುಡುಗಿ ಒಪ್ಪಿಗೆ ಏನೋ ? " ಅಂದೇ
ಪುಟ್ಮಾದ :- "ಊ ಗುರು, ಉಡ್ಗಿ , ಸಂದಾಗ್ ಅವ್ಳೇ ",
"ಒಸಿ ನೋಡೂಕೆ ಸಿನ್ಮಾ ಆರ್ತಿ ಕಂಡಂಗ್ ಆಯ್ತಾ ಅದೇ"
ಅಂತಾ ಜೊಲ್ಲು ಸುರುಸಿದ.
ನಾನು :- ಸರಿ ಹಾಗಿದ್ರೆ , ಒಪ್ಪಿಗೆ ಅಂತಾ ಹೇಳೋಣ ಬಾ , ಅಂದೇ .
ಪುಟ್ಮಾದ :- ಲೇ ಇರೋ ಒಸಿ , ಮದುವೇಲಿ ಎನ್ಕೊಡ್ತಾರೆ , ಅಂತಾ ತಿಳ್ಕಂಡು ,
ಆಮ್ಯಾಕೆ ಒಪ್ಗೆ ಅಂತಾ ಯೋಳುಮ . ನಮ್ ಅಪ್ಪನ ಕರಿ ,
ಮಾತಾಡ್ಬೇಕೂ ಅಂದಾ
ನಾನು ಹೋಗಿ ಹುಡುಗನ ಅಪ್ಪನನ್ನು ಕರೆದುಕೊಂಡು ಬನ್ದೆ. ಏನ್ಲಾ ನಿಂದು ತಕರಾರು ಲೇ , ಅಂತಾನೆ ಬಂದ್ರು ,
ಪುಟ್ಮಾದ :- ಅಪ್ಪವ್ , ಒಪ್ಕಂಡ್ಬುಟ್ಟಾ ನೀನು ? ಏನ್ ಕೊಟ್ಟಾರಂತೆ , ? ಈಗಲೇ
ಯೋಳ್ತೀನಿ , ನಂಗೆ ಮಾರುತಿ ಕಾರ್ ಕೊಡ್ಸುಕೆ ಯೋಳು , ನೀನಾದ್ರೂ
ತಕೊಡ್ಲಿಲ್ಲ , ಇಂಗಾದ್ರೂ ಬರ್ಲಿ ಅನ್ದಾ.
ಪಕ್ಕದಲ್ಲಿ ಇದ್ದ ನನಗೆ ಇವನ ಮಾತು ಕೇಳಿ ಸುಸ್ತಾಯ್ತು , ಇವನಿಗೆ ನೆಟ್ಗೆ ಮೋಟಾರ್
ಬೈಕ್ ಓದ್ಸೋಕೆ ಬರ್ತಿರ್ಲಿಲ್ಲಾ , ಇನ್ನು ಹುಡುಗಿ ಜೊತೆ ಹೊಸ ಕಾರ್ ಕೊಟ್ರೆ ,
ಹುಡುಗಿ ಕಥೆ ? ಅಂತಾ ಅನ್ನಿಸಿ , ದಿಕ್ಕು ತೋಚದಂತೆ ಆಯಿತು.
ಹುಡುಗನ ಅಪ್ಪಾ ಮಗನ ಬೇಡಿಕೆಗೆ ನಸು ನಕ್ಕು , ನಂ ಮಗ ದಾರೆ ಮಂಟಪದಲ್ಲಿ ತಾಳಿ ಕಟ್ಟುವಾಗ ಮದುವೆಮನೆ ಮುಂದೆ ಸೋರೂಂ ಕಾರು ನಿಂತಿರ್ಬೇಕೂ ಅಂತೀನಿ ಕನ್ಲಾ ಮಗ ನಡಿ ಬಿರಬಿರನೆ , ಅಂತಾ ಹುಡುಗಿಯ ಮನೆಯ ಒಳಗೆ ನಮ್ಮನ್ನೆಲ್ಲಾ ಕರೆದುಕೊಂಡು ಹೊದ್ರು. ನಾನು ಏನೂ ಅರ್ಥವಾಗದವನಂತೆ ಪೆಚಾಗಿ ಮನೆಯ ಒಳಗೆ ನಡೆದೇ .
ಮಾತುಕತೆ ಶುರು ಆಯ್ತು, ನಮ್ ಐದಾ ಎಂ . ಎ . ಪಾಸ್ ಮಾಡವ್ನೆ , ಮನೆಹಾಳ್ ಪುರ
ದಲ್ಲಿ , ನಾಮೂವೆ ಅವನನ್ನ ದೊಡ್ ಕಾಲೇಜ್ಗೆ ಹಾಕಿ ಓದುಸ್ದೋ , ಅಲ್ಲೂ ಬಾಳ
ಒಳ್ಳೆ ಎಸ್ರು ತಗಂಡಾ , ಈಗ ನಮ್ ಯವಾರ ನೋಡ್ಕಳ್ಳೀ ಅಂತಾ , ನಾಮೇ ಕೆಲಸಕ್ ಬ್ಯಾಡ ಮಗಾ
ಅಂದೋ , ಅದ್ಯಾಕೋ ಕಾಣೆ ನಿಮ್ ಹುಡ್ಗಿ ನೋಡಿ ಒಪ್ಕಂದವ್ನೆ , ಬಾಳ ಉಡ್ಗಿರ್
ನೋಡಿದರೂ ಒಪ್ಪಿರ್ನಿಲ್ಲಾ , ನಿಮ್ ಉಡ್ಗಿ ನಸೀಬು ಚಂದಾಕದೆ , ಮಾತು ಕಥೆ ನಡೀಲಿ ಅನ್ನುತ್ತಾ ಪ್ರಸ್ಥಾಪ ಇಟ್ಟರು .
ಹುಡುಗಿ ಅಪ್ಪಾ , ಇನ್ನೇನು ಎಲ್ರುದೂ ಒಪ್ಗೆ ಅಂದಮ್ಯಾಕೆ , ಸುರು ಮಾಡುಮ ಮಾತುಕತೆ,
ಆದ್ರೆ ಉಡುಗ ಸರ್ಕಾರಿ ಕೆಲ್ಸಾ ಮಾಡ್ತಾ ಇಲ್ಲಾ ಅನ್ನೋದೇ ಒಸಿ ಬ್ಯಾಸರಾ , ನಮ್
ಹುಡುಗಿ ಚೆನ್ನಾಗಿ ಬಿ. ಎ . ಓದವಳೇ , ಮನೆಕೆಲ್ಸಾ ಎಲ್ಲಾ ಮಾಡ್ತಾಳೆ , ನಮ್
ಹಟ್ಟಿಗೆ ಲಕ್ಸ್ಮಿ ಇದ್ದಂಗೆ , ಇವಳು ಹುಟ್ಟಿದ್ ಮ್ಯಾಕೆ ನಮ್ ಯಾಪಾರ, ಯವಾರ
ಇನ್ನೂ ಜೋರಾಯ್ತು . ಸರ್ಕಾರಿ ಕೆಲ್ಸಾ ಇರೋ ಗಂಡ ಬೇಕೂ ಅಂತಿದ್ಲು , ಏನ್ ಮಾದುಮಾ ಈಗ
, ಒಳ್ಳೆ ಫಜೀತಿ ಆಯ್ತಲ್ಲಾ , ಅಂತಾ ತಲೆ ಕೆರೀತ , ಸರಿ ಬುಡಿ , ನಾಮೇ ನಮ್
ನೆಂಟ್ರು ಒಬ್ಬರು ಮಂತ್ರಿಯಾಗವ್ರೆ ಅವ್ರ್ತಾವು ಕೈ ಕಾಲ್ ಕಟ್ಟಿ ಕೆಲ್ಸಾ
ಕೊಡಿಸ್ತೀವಿ , ನಮ್ ಕೈಲಾದಂಗೆ ಚಿನ್ನಾ , ಬಣ್ಣಾ ಆಕಿ ಮರ್ಯಾದೆಗೆ ತಕ್ಕಂಗೆ
ಕಿತಾಪತಿ ಪುರದಲ್ಲಿ ಆ ಪುಟ್ಟಣ್ಣನವರ ದೊಡ್ಡ ಚತ್ರಾ ಅದಲ್ಲಾ , ಅದನೆ ಬುಕ್
ಮಾಡಿ ಮದುವೇ ಮಾಡಿಕೊಡ್ತೀವಿ ಬುಡಿ .
ನಮ್ಮ ಪುಟ್ಮಾದನ ಮುಖ ಬಿಳಿಚಿ ಕೊಂಡಿತು , ಪೆಚ್ಛಾಗ್ ಹ್ಯಾಪ ಮೊರೆ ಹಾಕಿಕೊಂಡು
ನಿಂತಾ , ಅವನ ಕನಸಿನ ಮಾರುತಿ ಕಾರಿನ ವಿಚಾರ ಬಂದಿರಲೇ ಇಲ್ಲಾ ಹುಡುಗಿಯ ಅಪ್ಪನ
ಬಾಯಲ್ಲಿ,
ಹುಡುಗನ ಅಪ್ಪಾ :- ಅಯ್ಯೋ ನಮ್ ಹುಡುಗ ಬಾಳ ಒದವ್ನೆ , ಅವನಿಗೆ ಸರ್ಕಾರಿ
ಕೆಲ್ಸಾ ಕೊಡ್ಸೋಕೆ , ನಮ್ ಕಡೆ ಮಂತ್ರಿಗೊಳು ಊ ಅಂದಿದ್ರು , ಅವರ ಸಹಾಯದಿಂದ
ಕೆಲಸದ ಆಡ್ರೂ ಸೈತಾ ಬಂದಿತ್ತು, ನಮ್ ಐದ ಯಾಕೋ ಕಾಣೆ ಮನಸು ಮಾಡ್ನಿಲ್ಲಾ ,
ಅಯ್ಯೋ ಬುಡಪ್ಪಾ , ನಮ್ ಆಸ್ತಿ, ಕಂತ್ರಾಟು , ಜಮೀನು, ನೋಡ್ಕಂಡು ಇರ್ತೀನಿ ಅಂತಾ
ಅಂದಾ, ನಾನು ಒಗ್ಲಿ ಅಂತಾ ಸುಮ್ಕಾದೆ . ಆದ್ರೆ ನಿಮ್ ಮಗಳು ಸರ್ಕಾರಿ ಕೆಲಸದ ಗಂಡು
ಬೇಕೂ ಅಂತಾಳೆ ಅಂತೀರಿ , ಯಂಗು ನಿಮ್ ಕಡೆ ಮಂತ್ರಿಗಳು ಅವ್ರೆ ಅಂತೀರಿ , ನೀಮೆ ಒಂದ್
ಸರ್ಕಾರಿ ಕೆಲ್ಸಾ ಕೊಡ್ಸಿಬುಡಿ ಅತ್ಲಾಗೆ , ಪಾಪ ನಿಮ್ ಹೆಣ್ಮಗಿ ಆಸೆ ಪಡ್ತಾಳೆ ,
ಅವ್ಲ್ಗೂ ಖುಸಿಯಾಯ್ತದೆ , ನಮ್ ದೇನು ಬಿದ್ದೊಗೋ ಮರ ಮುಂದೆ ಬಾಳ್ಮೆ ಮಾಡೋವ್ರು
ಅವ್ರೆ ಅಲ್ವೇ ....? ಅಂತಾ ಬೋ ಉಪಕಾರ ಮಾಡೋ ತರಹ ಮಾತು ನಿಲ್ಲಿಸಿದರು.
ಹುಡುಗನ ತಾಯಿ :- ಓ ಇವರ ಮಾತೂ ನಿಜವೇ , ನಮ್ದೇನು, ಮುಂದಕ್ಕೆ ಇವರೇ ಅಲ್ವೇ
ಸಂಸಾರ ಮಾಡೋವ್ರು, ನಮ್ ಕಡೆ ಇಂದಲೂ ಹುಡುಗಿಗೆ ಕೊಡೊ ಚಿನ್ನಾ, ಬಣ್ಣಾ, ಸೀರೆ ,
ಒಡವೆ , ಎಲ್ಲ ಕೊಡ್ತೀವಿ, ಸರೀಕರ ಮುಂದೆ ಸೈ ಅನ್ನೋ ಹಂಗೆ ನಮ್ ಸೊಸೆಗೆ
ಕೊಡಬೇಕಾದದ್ದ ಕೊಡ್ತೀಮಿ ಬುಡಿ, ಆದ್ರೆ ನಮ್ ಗಂಡು ಪಾಪ ಒಳ್ಳೆ ಮಗ , ಇಂತಾ
ಅಳಿಯನ ಪಡೆಯಾಕೆ ಪುಣ್ಯಾ ಮಾಡಿದ್ರಿ ಬುಡಿ , ಹುಡುಗಿ ಋಣ ನಿಮ್ಮ ಹಟ್ಟೀಲಿ ಅದೇ
ಅವಂದು , ಎಲ್ಲಾ ದ್ಯಾವ್ರ್ ಇಚ್ಚೆ , ನಮ್ ದೇನದೆ , ನಮ್ ಸೊಸೆಯ ನಮ್ ಮಗಳು
ನೋಡ್ಕಂದಂಗೆ ನೋಡ್ಕತೀಮಿ ಯೊಸ್ನೆ ಬ್ಯಾಡ , ನಿಮ್ ಮಗಳು ಅಳಿಯ ಓಡಾಡೂಕೆ ಕಾರು
ಗೀರೂ ಕೊಡಿ , ಅವನ ಜೊತೆಯವ್ರ್ಗೆಲ್ಲಾ ಅವರ ಮಾವನ ಮನೆಯವರು ಕಾರು ಕೊಟ್ಟವ್ರೆ ,
ಸರೀಕರ ಮುಂದೆ ಮರ್ವಾದೆ ಉಳೀಬೇಕೂ ಅಲ್ವೇ ಅಂದ್ರು .
ಹುಡುಗಿಯ ತಾಯಿ :- ಓ ಇದ್ಯಾಕೋ ದುಬಾರಿ ಆಯ್ತದೆ , ನಮ್ ಹೆಣ್ ಮದುವೆ
ಆಗಾಕೆ, ಸರ್ಕಾರಿ ಕೆಲಸದ ಗಂಡುಗಳೇ ಬಂದಿದ್ದೋ , ಆದ್ರೂವೆ ಯಾಕೋ ನಮ್ ಲಕ್ಸ್ಮಿ
ಯಾರ್ನೂವೆ ಒಪ್ಪಿರ್ನಿಲ್ಲಾ , ಯಾಕೋ ಈ ನಿಮ್ ಮಗನ್ನ ಒಪ್ಪ್ಕಂದವ್ಲೆ , ಈಗ ಸರ್ಕಾರಿ
ಕೆಲ್ಸಾ ಕೊಡ್ಸಿ , ಚಿನ್ನಾ , ಬಣ್ಣಾ , ಬಟ್ಟೆ, ಎಲ್ಲಾ ಕೊಟ್ಟು ಜೋರಾಗಿ ಮದುವೆ
ಮಾಡ್ತೀಮಿ , ದೀಪಾವಳಿ ಒತ್ಗೆ ಕಾರ್ ಕೊಡ್ತೀವಿ ಬುಡಿ , ಜೊತೆಗೆ ನಮ್ ಮಗಳ
ಹೆಸರಲ್ಲಿ ಐದು ಎಕರೆ ನೀರಾವರಿ ಜಮೀನದೆ ಅದೂ ಅವಳ್ಗೆ ಅಂತ್ಲೇ ಬುಟ್ತಿದ್ದೋ ಅಂದ್ರೂ, ಈಗ ಅದ ಮಾರ್ಬುಟ್ಟು ಮದುವೇ ಮಾಡಬೇಕೂ ಅಂದ್ರೂ . .
ಪುಟ್ಮಾದ ನ ಮನದಲ್ಲಿ ಮತ್ತೆ ಟೈರ್ ಪಂಚರ್ ಆಯ್ತು, ನನ್ ಕಡೆ ನೋಡಿ , ಅವರ
ಅಪ್ಪನಿಗೆ ಕಿವಿಯಲ್ಲಿ ಪಿಸುಗುಟ್ಟಿದ , ನನಗೋ ಇಲ್ಲಿನ ಸನ್ನಿವೇಶ ವಿಚಿತ್ರವಾಗಿ,
ಶೇರ್ ಮಾರುಕಟ್ಟೆ ಯಂತೆ ಕಾಣ್ತಿತ್ತು . ಒಂದು ಮದುವೆಯಲ್ಲಿ ಇಷ್ಟೊಂದು ಹಣ ಆಸ್ತಿಯ
ವ್ಯವಹಾರ ಇದ್ಯಾ ಅಂತಾ ಅಚ್ಚರಿ ಯಾಗಿತ್ತು.
ಹುಡುಗನ ತಂದೆ:- ನೋಡ್ರಪ್ಪಾ , ಜಾಸ್ತಿ ಎಳದಷ್ಟೂ ಕಿತ್ತೊಯ್ತದೆ , ಎಲ್ಲಾ ಒಂದು
ಹಂತಕ್ಕೆ ಬಂದದೆ , ಇನ್ನು ಕಾರ್ ಗೋಸ್ಕರ ಯಾಕೆ ಮುಖಮುನಿಸು , ಮದುವೇ ದಿನ ಧಾರೆ
ಮಂಟಪದಲ್ಲಿ ಹುಡುಗ ಹುಡುಗಿ, ಮದುವೆಮನೆ ಮುಂದೆ ನೀವು ಕೊಡೊ ಹೊಸ ಕಾರು ನಿಂತಿದ್ರೆ
, ನಿಮಗೂ ಸರೀಕರ ಮುಂದೆ ಮರ್ವಾದೆ ಎಚ್ಛಾಯ್ತದೆ , ನಮ್ ದುರಾಸೆಪುರದ
ಕಡ್ಯೋರಿಗೂ ನಿಮ್ ತಾಕತ್ತು ಗೊತ್ತಾಯ್ತದೆ , ಚೇರ್ಮನ್ ಮನೆ ಸೊಸೆ ಮನೆಯವರು
ಅಳಿಯನಿಗೆ ಒಂದು ಕಾರ್ ಕೊಡಲಿಲ್ಲಾ ಅನ್ನೋ ಅಪಾದನೆ ಬರ್ಬಾರ್ದು ನೋಡಿ, ಸುಮ್ಕೆ
ಖರ್ಚಿನ ಜೊತೆ ಇದೂ ಒಂದು ಖರ್ಚೂ ಮನಸ್ ಮಾದ್ಬುಡಿ ಅಂದ್ರೂ .
ಕೊನೆಗೆ ಅಳೆದು ಸುರಿದೂ ಎರಡೂ ಕಡೆಯವರೂ ಒಪ್ಪಿ ಹುಡುಗನ ಆಸೆಯಂತೆ ಹೊಸ ಮಾರುತಿ
ಬಿಳೀ ಕಾರು ಕೊಡಿಸಲು ಒಪ್ಪಿದರು, ಹುಡುಗನ ಕಡೆ ಎರಡು ಸಾವಿರ , ಹುಡುಗಿ ಕಡೆ ಎರಡು
ಸಾವಿರ ಜನ ಬರೋದಾಗಿ ಒಪ್ಪಂದವಾಗಿ , ಹುಡುಗನ ಕಡೆಯ ಜನರನ್ನು ಮದುವೇ ಮನೆಗೆ
ಕರೆತರಲು, ಎರಡು ಕಾರು, ಒಂದು ಬಸ್ಸು, ಎರಡು ಲಾರಿ ಕಳುಹಿಸಿಕೊಡಲು ಹುಡುಗಿಯ ಮನೆಯವರು
ಒಪ್ಪಿದರು . ಕಿತಾಪತಿ ಪುರದಲ್ಲಿ ನಡೆಯುವ ಮದುವೇಗೆ ಆರ್ಕೆಸ್ಟ್ರಾ ಬೇಕೆಂದು
ತೀರ್ಮಾನ ಆಯ್ತು. ಕಿತಾಪತಿಪುರ ದಲ್ಲಿ ದೊಡ್ಡ ಮದುವೇ ಛತ್ರ ದಲ್ಲಿ ಮದುವೇ ನಡೆಸಲು ಸರ್ವ ಸಮ್ಮತಿಯಿಂದ ತೀರ್ಮಾನವಾಯಿತು, ......... !
ನಮ್ಮ ಪುಟ್ಮಾದ ಆಕಾಶದಲ್ಲಿ ಹಾರಾಡಿದ , ಕನಸುಗಳ ಸಾಮ್ರಾಜ್ಯದಲ್ಲಿ ರಾಜ್ಯಭಾರ
ಮಾಡಿದ , ತನ್ನ ಮದುವೆಗೆ ಎಲ್ಲರನ್ನೂ ತಾನೇ ಖುದ್ದು ಆಹ್ವಾನಿಸಿ ಲಗ್ನ ಪತ್ರಿಕೆ
ಹಂಚಿದ . ಮದುವೆಯ ದಿನ ಬಂದೆ ಬಿಟ್ಟಿತು, ಹುಡುಗನ ಮನೆಯಿಂದ ಕಿತಾಪತಿ ಪುರದಲ್ಲಿ ಎರಡು ಕಾರು, ಒಂದು ಬಸ್ಸು, ಎರಡು ಲಾರಿ ಸಹಿತ ದಿಬ್ಬಣ ಹೊರಟಿತು . ಆಗಿನ ಮದುವೆಯಲ್ಲಿ ಮೊದಲು ಧಾರೆ , ನಂತರ ಆರತಕ್ಷತೆ ಇತ್ತು ,
ಬೆಳಿಗ್ಗೆಯೇ ಮದುವೇ ಮಾಡಿಸಲು ಬಂದಿದ್ದ ಪುರೋಹಿತರು ಶಾಸ್ತ್ರಾ ಶುರು
ಮಾಡಿದ್ದರು, ಕಾಶಿಯಾತ್ರೆ ಗೆ ಹೊರಟ ಗಂಡು ಮಂಗಳ ವಾಧ್ಯ ದೊಡನೆ ಛತ್ರದ ಮುಂದೆ
ಬಂತು, ಅಲ್ಲಿ ಶಾಸ್ತ್ರ ನಡೆದಿತ್ತು, ಆದರೆ ನಮ್ಮ ಪುಟ್ಮಾದ ನ ಕಣ್ಣು ಕಾರಿಗಾಗಿ
ಹುಡುಕುತ್ತಿತ್ತು , ಆದರೆ ಕಾರಿನ ದರ್ಶನವಿಲ್ಲಾ, ಅಲ್ಲೇ ಇದ್ದ ನನ್ನನ್ನು ಕರೆದು
ಗುರು ಇನ್ನೂ ಕಾರು ಬಂದಿಲ್ಲಾ ವಿಚಾರಿಸು , ಅಂತಾ ಹೇಳಿದ .
ನನಗೋ ನಾಚಿಕೆ , ಆದರೂ ಮನಸು ಮಾಡಿ ಹುಡುಗಿಯ ಚಿಕ್ಕಪ್ಪನ ಹತ್ತಿರ ಹೋಗಿ , ನಿಮ್ ಅಣ್ಣನ ಅಳಿಯ ಕೇಳ್ತಾ ಇದ್ದಾರೆ ಕಾರು ಬಂದಿಲ್ವಾ ? ಅಂದೇ, ಅವರು ನನ್ನನ್ನು ಕೆಕ್ಕರಿಸಿ ನೋಡಿ, ಸೋ ರೂಂ ಗೆ ಒಗವ್ರೆ ತರೋಕೆ ಬತ್ತದೆ ಇನ್ನೇನೂ ಅಂದರು , ಅದನ್ನೆ
ಪುಟ್ಮಾದನಿಗೆ ಹೇಳಿದೆ , ಸ್ವಲ್ಪ ಹೊತ್ತಾಯ್ತು, ಕಾಶಿಯಾತ್ರೆ ಶಾಸ್ತ್ರ ಮುಗೀತು,
ಮದುವೇ ಮಂಟಪಕ್ಕೆ ಹುಡುಗನನ್ನು ಕರೆದೊಯ್ದರು, ಪುರೋಹಿತರು, ಉತ್ಸಾಹದಿಂದ ಮಂತ್ರಾ
ಹೇಳುತ್ತಿದ್ದರು , ಆದರೆ ನಮ್ಮ ಗಂಡು ಮಾತ್ರ ಮದುವೇ ಮಂಟಪದಲ್ಲಿ ಕಾರನ್ನು
ಹುಡುಕುತ್ತಿತ್ತು, ಮತ್ತೆ ನನ್ನನ್ನು ಹತ್ತಿರ ಕರೆದು ಕಾರ್ ಬಂತಾ ನೋಡು ? ಅಂತಾ ಸಿಟ್ಟಿನಿಂದಾ ಕೇಳಿದನು
ನನಗೋ ಧರ್ಮ ಸಂಕಟ ಮತ್ತೆ ಆಚೆ ಹೋಗಿ ನೋಡಿದೆ ಕಾರಿನ ಸುಳಿವಿಲ್ಲಾ , ಅಲ್ಲೇ ಇದ್ದ ಹುಡುಗಿಯ ತಂದೆಯವರನ್ನು ಕೇಳ್ದೆ , ಕಾರಾ
ಇನ್ನೇನು ಬತ್ತುದೆ , ತರಾಕೆ ಒಗವ್ರೆ , ನಿಮ್ ಸಿನೆಹಿತರಿಗೆ ನೆಮ್ದಿಯಾಗಿ ಇರಾಕೆ
ಯೋಳಿ , ನಾಮು ಅಂಗೆಲ್ಲಾ ಖಾಲಿ ಪೋಲಿ ಜನ ಅಲ್ಲಾ ಮಾತು ಅಂದ್ರೆ ಮಾತೆಯ , ಅಂದ್ರು
ಅದನ್ನೇ ನನ್ನ ಈ ಎಡವಟ್ಟು ಗೆಳೆಯನಿಗೆ ಹೇಳಿದೆ , ಅಷ್ಟರಲ್ಲಿ ಅವನ ಪಕ್ಕದಲ್ಲಿ
ಹುಡುಗಿಯನ್ನು ಕೂರಿಸಿದ್ದರು ಶಾಸ್ತ್ರ ಮುಂದುವರೆದಿತ್ತು, ಆ ಹುಡುಗಿ ಪುರೋಹಿತರು
ಹೇಳಿದ್ದನ್ನು ಭಕ್ತಿಯಿಂದ ಮಾಡುತ್ತಿದ್ದರೆ, ಪುಟ್ಮಾದ ಮಾತ್ರ ಕಾರನ್ನು
ನೆನೆಸಿಕೊಂಡು ಕಾಟಾ ಚಾರಕ್ಕೆ ಕುಳಿತಿದ್ದ, ನನ್ನನ್ನೂ ಆ ಹುಡುಗಿಯನ್ನು
ಕೆಕ್ಕರಿಸಿಕೊಂಡು ನೋಡುತ್ತಿದ್ದ . ನಾನು ಅವನ ನೋಟ ಎದುರಿಸಲಾಗದೆ ಮರೆಯಾಗಿ ನಿಂತೇ
ಅಷ್ಟರಲ್ಲಿ ಯಾರ್ರೀ ಹುಡುಗನ ಸ್ನೇಹಿತ ಅನಿಲ್ ಮುಂದೆ ಬನ್ರೀ , ಅಂದ್ರೂ ನಾನೂ ಮೆತ್ತಗೆ ಹತ್ತಿರ ಹೋದೆ, ಪುಟ್ಮಾದ ಮಾತಾಡಿ, "ಲೇ
ಗುರು, ಅದೇನು ಕಾರು ಬತ್ತುದೋ ಇಲ್ವೋ ಕೇಳಪ್ಪ , ನಮಗೆ ಇಂಗಾ ಅವಮಾನ ಮಾಡಾದು
ಇವ್ರು ?, ಮುಂಚೆನೇ ಯೋಳಿದ್ರೆ ಹತ್ತು ಹೊಸ ಕಾರು ತಂದು ನಿಲ್ಲಿಸ್ತಿದ್ದೆ , ರೀ
ಪುರೋಯ್ತರೆ ಇರೀ ಒಸಿ ಕಾರ್ ಬರಲಿ ಆಮ್ಯಾಕೆ ತಾಳಿ ಕಟ್ಟ್ಸೋರಂತೆ ," ಅಂದಾ, ಅದಕ್ಕೆ ಹುಡುಗನ ಅಪ್ಪಾ , ಅಮ್ಮಾ ಕೂಡ ಹುಡುಗಿಯ ಕಡೆಯವರನ್ನು ವಿಲ್ಲನ್ ಗಳ ತರಹ ನೋಡುತ್ತಿದ್ದರು,
ಚಿತ್ರ ಕೃಪೆ ಅಂತರ್ಜಾಲ |
ಧಾರೆಗೆ ಇನ್ನು ಕೇವಲಇಪ್ಪತ್ತು ನಿಮಿಷ ಇತ್ತು, ಪುರೋಹಿತರು ಸಾರ್ ನಿಮ್ಮ
ಗೆಳೆಯನಿಗೆ ಹೇಳಿ , ಹಟಾ ಬೇಡಾ ಅಂತಾ , ಕಾರು ಬಂದೆ ಬರುತ್ತೆ, ಹೊಸ ಕಾರು ಬುಕ್
ಮಾಡುವಾಗ , ನಾನೇ ಒಳ್ಳೆ ದಿನಾ ನೋಡಿ ಕಳುಹಿಸಿದ್ದೆ , ಇಬ್ಬರ ಕೂಟಗಳನ್ನೂ
ಲೆಕ್ಕಾಚಾರ ಮಾಡಿ ಬಿಳೀ ಕಾರನ್ನೇ ಬುಕ್ ಮಾಡಲು ತಿಳಿಸಿದ್ದೆ , ಎಂದರು,
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.