fly

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಮಂಗಳವಾರ, ಸೆಪ್ಟೆಂಬರ್ 23, 2014

ರಂಗಭೂಮಿಯ ಭೀಷ್ಮ ಬಿ.ವಿ. ಕಾರಂತ್

ರಂಗಭೂಮಿಯ ಭೀಷ್ಮ ಬಿ.ವಿ. ಕಾರಂತ್
ಕಾರಂತರದು ನಿಂತಲ್ಲಿ ನಿಲ್ಲದ
, ಕುಂತಲ್ಲಿ ಕೂರದ ವ್ಯಕ್ತಿತ್ವ. ಅವರು ನಾಟಕಲೋಕದ ಅಲೆಮಾರಿ, ಸುವಿಹಾರಿ. ಬಿ.ವಿ.ಕಾರಂತ್ ಈಗ ನಮ್ಮೊಂದಿಗಿಲ್ಲ ಎಂದರೆ ನಂಬಲೇ ಸಾಧ್ಯವಾಗುತ್ತಿಲ್ಲ....
*ಶೋಭಾ ಸತೀಶ್
B.V.Karanth,         ಬಿ.ವಿ. ಕಾರಂತ್ ಹೆಸರೇ ಮೋಡಿ ಮಾಡುವಂಥದ್ದು. ಗುಂಗುರು ಗುಂಗುರು ಕಪ್ಪು ತಲೆಗೂದಲು, ಬಿಳಿಯ ಗಡ್ಡ, ಹೊಳೆವ ಕಣ್ಣುಗಳು.... ಆ ಕಣ್ಣುಗಳಲ್ಲಿ ಅದೇನೋ ಸೆಳಕು. ಮುಗ್ಧ ಮುಖಭಾವ. ಪ್ರಥಮ ನೋಟದಲ್ಲೇ ಪಾಮರ ಕೂಡ ತಲೆ ತಗ್ಗಿಸಿ ಗೌರವಿಸುವಂಥ ತೇಜಸ್ಸು. ನಿಂತಲ್ಲಿ ನಿಲ್ಲದ, ಕುಂತಲ್ಲಿ ಕೂರದ ಚಟುವಟಿಕೆ, ಲವಲವಿಕೆಯ ಜೀವ. ಇಂದು ಕಾರಂತ್ ನಮ್ಮೊಂದಿಲ್ಲ ಎಂದರೆ ನಂಬಲೇ ಆಗುತ್ತಿಲ್ಲ.
       ಕಾರಂತರ ವ್ಯಕ್ತಿತ್ವವೇ ಅಂಥದ್ದು. ಬಿ.ವಿ. ಕಾರಂತರ ಮುಖದಲ್ಲಿ ಅಡಕವಾಗಿದ್ದ ಗಾಂಭೀರ್ಯ, ಅವರ ತ್ರಿವಿಕ್ರಮ ಪ್ರತಿಭೆ ಹಾಗೂ ವಿದ್ವತ್ತನ್ನು ಹೊರಸೂಸುತ್ತಿತ್ತು. ಎಂಥವರಿಗೂ ಅವರನ್ನು ಕಂಡಾಗ ಪೂಜ್ಯಭಾವ ಮೂಡುತ್ತಿತ್ತು. ಕಾರಂತರು ಕೊನೆಗಾಲದಲ್ಲಿ ಅನಾರೋಗ್ಯದಿಂದ ಕೃಶವಾಗಿದ್ದರಾದರೂ ಮುಖಕಾಂತಿ ಬಾಡಿರಲಿಲ್ಲ.
             ಕನ್ನಡಕ್ಕೆ ಮೊಟ್ಟ ಮೊದಲ ಸ್ವರ್ಣಕಮಲ ತಂದುಕೊಟ್ಟ ಹಿರಿಮೆಯೂ ಬಿ.ವಿ.ಕಾರಂತರದು. ಕಾರಂತರದು ಬಹುಮುಖ ವ್ಯಕ್ತಿತ್ವ. ಅವರು ಕವಿ, ಸಾಹಿತಿ, ನಾಟಕಕಾರ, ರಂಗಕರ್ಮಿ, ಚಿತ್ರ ನಿರ್ದೇಶಕ, ಸಂಗೀತ ನಿರ್ದೇಶಕ.
                      ಕಾರಂತರು ಹುಟ್ಟಿದ್ದು, ೧೯೨೮ರ ಅಕ್ಟೋಬರ್ ೭ರಂದು. ಹುಟ್ಟೂರು ಉಡುಪಿ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುಕ್ಕಾಜೆ. ತಂದೆ ಬಾಬು ಕೋಡಿ ನಾರಣಪ್ಪಯ್ಯ, ತಾಯಿ ಲಕ್ಷ್ಮಮ್ಮ. ತಾಯಿಯ ಈ ಅಕ್ಕರೆಯ ಪುತ್ರ ವೆಂಕಟರಮಣ. ಅಕ್ಕರೆಯ ಬೋಯಣ್ಣ.
                        ಬಾಲ್ಯದಿಂದಲೇ ಕಾರಂತರಿಗೆ ನಾಟಕದ ಗೀಳು. ಯಕ್ಷಗಾನ ತಾಲೀಮು ನೋಡುವುದು ನಿತ್ಯದ ಕಾಯಕ.  ನಾಟಕ ನೋಡಲು ಪಾಣೆ ಮಂಗಳೂರಿನಿಂದ ಮಂಗಳೂರಿಗೆ ಸೈಕಲ್ ಹೊಡೆಯುತ್ತಿದ್ದ ಕಾರಂತರು, ರಂಗಭೂಮಿಯ ಆಕರ್ಷಣೆಯಿಂದ ಮೈಸೂರಿಗೆ ಹೋದರು.
ರಂಗದ ಸೆಳೆತ: 
              ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಪಿ.ಕೆ. ನಾರಾಯಣರಾವ್ ನಿರ್ದೇಶನದ ಕುವೆಂಪು ವಿರಚಿತ ನನ್ನ ಗೋಪಾಲ ನಾಟಕದ ಮೂಲಕ ಕಾರಂತರು ರಂಗಭೂಮಿ ಪ್ರವೇಶಿಸಿದರು. ಎಂಟನೇ ತರಗತಿವರೆಗೆ ಓದಿದ ಕಾರಂತರಿಗೆ ಊರಲ್ಲಿ ಓದು ಮುಂದುವರಿಸಲು ಸಾಧ್ಯವಾಗಲಿಲ್ಲ. ರಂಗಭೂಮಿಯ ಸೆಳೆತ ಮಾತ್ರ ಕಾರಂತನ್ನು ಬಿಟ್ಟಿರಲಿಲ್ಲ. ರಂಗಭೂಮಿಗೆ ವಿಫುಲ ಅವಕಾಶವಿದ್ದ ಮೈಸೂರಿಗೆ ಪ್ರಯಾಣ. ರಂಗಭೂಮಿಯ ಸೇವೆಯೇನೋ ಸರಿ ಹೊಟ್ಟೆಪಾಡು ನಡೆಯಬೇಕಲ್ಲ. ಅಲ್ಲಿ ಮಾಣಿಯಾಗಿ ಕೆಲಸಕ್ಕೆ ಸೇರಿದರು. ಹಿಂದಿ ಕಲಿಯಲೂ ಆರಂಭಿಸಿದರು.
              ಆನಂತರ ಅಲ್ಲೇ ಬೀಡು ಬಿಟ್ಟಿದ್ದ ಗುಬ್ಬಿ ಕಂಪನಿ ಸೇರಿ ಬಾಲಕೃಷ್ಣ, ಮಾರ್ಕಂಡೇಯ ಮೊದಲಾದ ಪಾತ್ರಗಳಲ್ಲಿ ಅಭಿನಯಿಸಿ, ಅನುಭವ ಸಂಪಾದಿಸಿದರು. ಸ್ತ್ರೀಪಾತ್ರಗಳಲ್ಲಿ ಮಿಂಚಿದರು. ಆನಂತರ ಹೊಸ ಅಲೆಯ ರಂಗ ಮಾಧ್ಯಮಕ್ಕೆ ತಮ್ಮನ್ನು ತೊಡಗಿಸಿಕೊಂಡ ಅವರು, ರಂಗಭೂಮಿಗೇ ಹೊಸ ಆಯಾಮ ನೀಡಿದರು. ಬೋಪಾಲ, ದೆಹಲಿಯನ್ನೆಲ್ಲಾ ಸುತ್ತಾಡಿದರು. ವಿದೇಶಗಳಲ್ಲೂ ಕನ್ನಡ ರಂಗಭೂಮಿಯ ಕಂಪನ್ನು ಪಸರಿಸಿದರು.
ಹಿಂದಿಯನ್ನು ವ್ಯಾಸಂಗ ಮಾಡಿದ್ದ ಕಾರಂತರು ಬೆಂಗಳೂರಿಗೆ ಬಂದು ಹಿಂದಿ ಅಧ್ಯಾಪಕರಾದರು. ಕಾಶಿ ವಿ.ವಿಯಿಂದ ಹಿಂದಿ ಎಂ.ಎ. ಪದವಿ ಪಡೆದರು. ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲೂ ಶಿಕ್ಷಣ ಪಡೆದರು. ಅಲ್ಲಿ ಸರ್ವತೋಮುಖ ಪರಿಣತ ಎಂಬ ಪ್ರಶಸ್ತಿಗೂ ಪಾತ್ರರಾದರು.
                   ಕನ್ನಡ ನಾಟಕಗಳನ್ನು ಹಿಂದಿಗೆ ತರುವ ಪ್ರಯೋಗದಲ್ಲೂ ಯಶಸ್ಸು ಕಂಡರು. ಗಿರೀಶ್ ಕಾರ್ನಾಡರ ಹಯ ವದನ, ತುಘಲಕ್, ಹಿಟ್ಟಿನ ಹುಂಜ, ಶ್ರೀರಂಗರ ಕೇಳು ಜನಮೇಜಯ, ರಂಗ ಭಾರತ, ಕತ್ತಲೆ ಬೆಳಕು ಹಾಗೂ ಶಿವರಾಮ ಕಾರಂತರ ಯಕ್ಷಗಾನ ಸೇರಿದಂತೆ ೧೫ ಕೃತಿಗಳನ್ನು ಹಿಂದಿಗೆ ಅನುವಾದಿಸಿದರು.
ವಿಶ್ವಶ್ರೇಷ್ಠ ನಾಟಕಕಾರರಾದ ಸಂಸ, ಕಂಬಾರ, ಶ್ರೀರಂಗ, ಲಂಕೇಶ್, ಕಾರ್ನಾಡ್, ಜಡಭರತ, ಕುವೆಂಪು, ಷೇಕ್ಸ್‌ಪಿಯರ್ ಮೊದಲಾದವರ ನಾಟಕಗಳನ್ನು ಕಾರಂತ್ ನಿರ್ದೇಶಿಸಿದ್ದಾರೆ. ಕಾರಂತರು ಒಟ್ಟು ೧೦೪ ನಾಟಕಗಳನ್ನು ನಿರ್ದೇಶಿಸಿ ದಾಖಲೆಯನ್ನೇ ಮೆರೆದಿದ್ದಾರೆ. ಕನ್ನಡ ರಂಗಭೂಮಿಯ ಆಕರ್ಷಣೆ ಕಡಿಮೆಯಾಗುತ್ತಿದ್ದ ಕಾಲದಲ್ಲಿ ರಂಗಾಯಣವನ್ನು ಕಟ್ಟಿ ರಂಗಭೂಮಿ ಜೀವಂತವಾಗಿರುವಂತೆ ನೋಡಿಕೊಂಡರು. ಜನರಲ್ಲಿ ನಾಟಕಗಳ ಬಗ್ಗೆ ಆಸಕ್ತಿ ಮೂಡಿಸಿದರು. ರಂಗ ಸಂಗೀತವೆಂದರೆ ಏನೆಂದು ತೋರಿಸಿಕೊಟ್ಟರು. ಹಯವದನಕ್ಕೆ ಕಾರಂತರು ನೀಡಿದ ಸಂಗೀತ ಇಂದು ಮನೆಮಾತು.
            ನಾಟಕದ ಜೊತೆ ಜೊತೆಗೆ ಚಲನಚಿತ್ರ ರಂಗದಲ್ಲೂ ಕಾರಂತರು ಕೃಷಿ ಮಾಡಿದರು. ಕಾರ್ನಾಡರೊಂದಿಗೆ ನಿರ್ದೇಶಿಸಿದ ವಂಶವೃಕ್ಷ ಕಾರಂತರಿಗೆ ಮನ್ನಣೆ ಪ್ರಶಸ್ತಿ ತಂದುಕೊಟ್ಟಿತು. ಫಿಲ್ಮ್‌ಫೇರ್ ಪ್ರಶಸ್ತಿಯೂ ಲಭಿಸಿತು. ಕಾಡು, ಹಂಸಗೀತೆ ಮೊದಲಾದ ಮನೋಜ್ಞ ಚಿತ್ರಗಳಿಗೆ ಸಂಗೀತವನ್ನೂ ನೀಡಿದರು. ಶಿವರಾಮಕಾರಂತರ ಚೋಮನದುಡಿಯನ್ನು ಚಿತ್ರ ಮಾಡುವ ಮೂಲಕ ಸ್ವರ್ಣಕಮಲ ಪ್ರಶಸ್ತಿಯನ್ನೂ ಕನ್ನಡಕ್ಕೆ ತಂದುಕೊಟ್ಟರು. ಕಾರಂತರ ಈ ಸಾಧನೆಗೆ ಕಾಳಿದಾಸ ಪ್ರಶಸ್ತಿ, ಪದ್ಮಶ್ರೀ ಕೇಂದ್ರ ನಾಟಕ ಅಕಾಡಮಿ ಪ್ರಶಸ್ತಿಯೇ ಮೊದಲಾದ ಪ್ರತಿಷ್ಠಿತ ಗೌರವ ಸಂದವು.
ಕಾರಂತರ ಜನಪ್ರಿಯ ನಾಟಕಗಳು :  
  • ಕಕೇಶಿಯನ್ ಚಾಕ್ ಸರ್ಕಲ್
  •  ಗೋಕುಲ ನಿರ್ಗಮನ,  
  • ಸತ್ತವರ ನೆರಳು
  •  ನಾಟಕಕಾರನ ಶೋಧನೆಯಲ್ಲಿ ಆರು ಪಾತ್ರಗಳು,  
  • ಚಂದ್ರಹಾಸ,  
  • ಹೆಡ್ಡಾಯಣ
  •  ಪಂಜರಶಾಲೆ,  
  • ದಾರಿ ಯಾವುದಯ್ಯ ವೈಕುಂಠಕೆ,  
  • ನೀಲಿ ಕುದುರೆ,  
  • ಈಡಿಪಸ್,  
  • ಸಂಕ್ರಾಂತಿ
  • ಜೋಕುಮಾರಸ್ವಾಮಿ,  
  • ಮೂಕನ ಮಕ್ಕಳು
  • ವಿಗಡ ವಿಕ್ರಮರಾಯ,  
  • ಮಿಸ್ ಸದಾರಮೆ,  
  • ಅಶ್ವತ್ಥಾಮನ್,  
  • ಟಿಂಗರ ಬುಡ್ಡಣ್ಣ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು