ಬೆಳಗಾವಿಯಿಂದ 70 ಕಿಲೋ ಮೀಟರ್ ದೂರದಲ್ಲಿರುವ ಸವದತ್ತಿ ಪುರಾಣ ಪ್ರಸಿದ್ಧ ಕ್ಷೇತ್ರ. ಐತಿಹ್ಯದ ರೀತ್ಯ ಇಲ್ಲಿರುವ ಎಲ್ಲಮ್ಮನ ದೇವಸ್ಥಾನವನ್ನು ಸುಮಾರು 2,000 ವರ್ಷಗಳಷ್ಟು ಹಿಂದೆಯೇ ಸ್ಥಾಪಿಸಲಾಗಿತ್ತು. ಆದರೆ ಈಗಿರುವ ದೇವಾಲಯ ಅಷ್ಟು ಪ್ರಾಚೀನವಲ್ಲ, ಕ್ರಿ.ಶ. 1514ರಲ್ಲಿ ಬಾಗಿಬೊಮ್ಮಪ್ಪನಾಯಕ ಇದನ್ನು ಕಟ್ಟಿಸಿರುವನೆಂಬುದು ತಜ್ಞರ ಅಭಿಮತ.
ಚಾಲುಕ್ಯ ಹಾಗೂ ರಾಷ್ಟ್ರಕೂಟರ ವಾಸ್ತುಶೈಲಿಯಲ್ಲಿರುವ ದೇವಾಲಯದ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿರುವ ಎಲ್ಲಮ್ಮನಿಗೆ ವೀರಶೈವ ಸಂಪ್ರದಾಯದ ರೀತ್ಯ ಪೂಜೆ ನಡೆಯುತ್ತದೆ. ಎಲ್ಲಮ್ಮ ದೇವಾಲಯಕ್ಕೆ ಎಲ್ಲ ಜಾತಿ, ಮತ, ಪಂಥಗಳ ಭಕ್ತರೂ ಆಗಮಿಸುತ್ತಾರೆ. ನಿತ್ಯವೂ ಇಲ್ಲಿಗೆ ಹೊಸ ಹೊಸ ಭಕ್ತರು ಬರುವುದು ವಿಶೇಷ. ಯಾವ ದಿನ ನನ್ನ ದೇವಾಲಯಕ್ಕೆ ಹೊಸ ಭಕ್ತರು ಬರುವುದಿಲ್ಲವೋ ಅಂದು ತಾನಲ್ಲಿ ಇರುವುದಿಲ್ಲ ಎಂದು ತಾಯಿ ಹೇಳಿದ್ದಾಳೆಂಬುದು ಜನರ ನಂಬಿಕೆ.
ಪ್ರತಿ ಮಂಗಳವಾರ ಹಾಗೂ ಶುಕ್ರವಾರಗಳಂದು ದೇವಾಲಯದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಪ್ರತಿ ಹುಣ್ಣಿಮೆಯ ದಿನವಂತೂ ಜನ ಜಾತ್ರೆಯೇ ನೆರೆದಿರುತ್ತದೆ. ಭಾರತ ಪೂರ್ಣಿಮೆಯ ದಿನ ಇಲ್ಲಿ 2 ಲಕ್ಷಕ್ಕೂ ಅಧಿಕ ಭಕ್ತರು ಸೇರಿ ದೊಡ್ಡ ಜಾತ್ರೆ ಆಚರಿಸುತ್ತಾರೆ.
ಸ್ಥಳ ಪುರಾಣಗಳ ರೀತ್ಯ ಭೂಮಿಯಲ್ಲಿ ದಶವತಾರವೆತ್ತಿದ ಶ್ರೀಮನ್ನಾರಾಯಣ ಪರಶುರಾಮಾವತಾರದಲ್ಲಿ ಇಲ್ಲಿ ನೆಲೆಸಿ ತಪವನ್ನಾಚರಿಸಿದರಂತೆ. ಪರಶುರಾಮರ ತಂದೆ ಜಮದಗ್ನಿ ಹಾಗೂ ತಾಯಿ ರೇಣುಕಾದೇವಿ ಇಲ್ಲಿ ಆಶ್ರಮವಾಸಿಗಳಾಗಿದ್ದರು. ಪ್ರತಿನಿತ್ಯ ಯಜ್ಞಕ್ಕೆ ನೀರು ತರಲು ಹೊಳೆಗೆ ಹೋಗುತ್ತಿದ್ದ ರೇಣುಕಾದೇವಿ, ಮರಳಲ್ಲಿ ಮಡಕೆ ಮಾಡಿ, ಹಾವನ್ನೇ ಸಿಂಬೆಯಾಗಿಟ್ಟುಕೊಂಡು ನೀರು ತರುತ್ತಿದ್ದಳಂತೆ. ಒಂದು ದಿನ ನೀರಿನ ನೆರಳಲ್ಲಿ ಯಕ್ಷರ ಸರಸ ನೋಡಿ ಮೋಹಪರವಶಳಾದ ಕಾರಣ, ಮರಳಿನಲ್ಲಿ ಮಡಕೆ ಮಾಡಲಾಗಲಿಲ್ಲ. ಕುಪಿತನಾದ ಜಮದಗ್ನಿ ಶಾಪಕ್ಕೆ ಗುರಿಯಾಗಿ ತೊನ್ನು, ಕುಷ್ಠರೋಗಿಯಾದಳು. ಆಶ್ರಮದಿಂದ ಹೊರಗಟ್ಟಲ್ಪಟ್ಟಳು. ಹೀಗೆ ಪತಿಯಿಂದ ಪರಿತ್ಯಕ್ತೆಯಾದ ರೇಣುಕಾಮಾತೆ, ಸವದತ್ತಿಯ ಈಗಿನ ಜೋಗುಳ ಬಾವಿಯ ಬಳಿ ಬಂದು, ಎಕ್ಕಯ್ಯ, ಜೋಗಯ್ಯ ಎಂಬ ಸಿದ್ಧರ ದರ್ಶನ ಮಾಡಿ, ಅವರ ಆಣತಿಯಂತೆ ಜೋಗುಳ ಬಾವಿಯಲ್ಲಿ ಸ್ನಾನ ಮಾಡಿ, ಮೈಗೆ ಹರಿಶಿನ ಲೇಪಿಸಿಕೊಂಡಾಗ ರೋಗಮುಕ್ತಳಾಗಿ ಹಿಂದಿನ ರೂಪವೇ ಬರುತ್ತದೆ. ಶಾಪವಿಮೋಚನೆ ಆದ ಬಳಿಕ ಮತ್ತೆ ಆಶ್ರಮಕ್ಕೆ ಹಿಂತಿರುಗಿದ ಪತ್ನಿಯನ್ನು ಕಂಡು ಕೋಪಾಗ್ನಿಯಿಂದ ಕುದಿಯುತ್ತಿದ್ದ ಜಮದಗ್ನಿ ತನ್ನ ಮಗ ಪರಶುರಾಮರಿಗೆ ತಾಯಿಯ ತಲೆ ಕತ್ತರಿಸುವಂತೆ ಆಜ್ಞಾಪಿಸುತ್ತಾರೆ. ಪರಶುರಾಮರು ಪಿತೃವಾಕ್ಯ ಪರಿಪಾಲಿಸಿ ನಂತರ ಮತ್ತೆ ತಂದೆಯನ್ನು ಸಂತೈಸಿ, ಅವರ ತಪೋಬಲದಿಂದಲೇ ತಾಯಿಗೆ ಮರುಜನ್ಮ ದೊರಕಿಸುತ್ತಾರೆ.
ಹೀಗೆ ಎರಡು ಬಾರಿ ಹುಟ್ಟಿದ ತಾಯಿ ರೇಣುಕಾದೇವಿ, ತನ್ನ ಶಾಪವಿಮೋಚನೆಗೆ ಕಾರಣವಾದ ಬಾವಿಯ ಬಳಿ ಎಲ್ಲಮ್ಮನಾಗಿ ನೆಲೆಸಿ ಭಕ್ತರನ್ನು ಹರಸುತ್ತಿದ್ದಾಳಂತೆ.ಈ ಪವಿತ್ರ ತಾಣದಲ್ಲಿ ಜಮದಗ್ನಿ ಹಾಗೂ ಪರಶುರಾಮರ ದೇವಾಲಯಗಳೂ ಇವೆ.
ಮತ್ತೊಂದು ಕಥೆಯ ಪ್ರಕಾರ, ಶ್ರೀಮಂತ ವೀರಶೈವ ಕುಟುಂಬದಲ್ಲಿ ಜನಿಸಿದ ಎಲ್ಲಮ್ಮ. ತೊನ್ನು ರೋಗಕ್ಕೆ ತುತ್ತಾಗುತ್ತಾಳೆ. ಯಾರೂ ಆಕೆಯನ್ನು ಮದುವೆಯಾಗುವುದಿಲ್ಲ. ಸವದತ್ತಿಗೆ ಬಂದು ಗುಡ್ಡದಲ್ಲಿ ಎಕ್ಕಯ್ಯ ಜೋಗಯ್ಯರ ಪಾದುಕೆಯ ಮೇಲಿನ ಮಳೆನೀರು ಬಿದ್ದಕ್ಷಣವೇ ತೊನ್ನು ಮಾಯವಾಯಿತು. ಆಗ ಆಕೆ ಸಿದ್ದರ ಧ್ಯಾನದಲ್ಲಿ ಅಲ್ಲೇ ಕುಳಿತಳು. ಕೊನೆಗೆ ಪ್ರತ್ಯಕ್ಷರಾದ ಅವರು ಎಲ್ಲ ರೀತಿಯ ಯಂತ್ರ ಮಂತ್ರ ರಸವಿದ್ಯೆಗಳನ್ನು ಹೇಳಿಕೊಟ್ಟರಂತೆ. ಎಲ್ಲಮ್ಮನಿಗೆ ಪರಮಪವಿತ್ರವಾದ ಶಿವಪಂಚಾಕ್ಷರಿ ಮಂತ್ರವನ್ನೂ ಉಪದೇಶಿಸಿದರಂತೆ. ಗುರುವಾಜ್ಞೆಯಂತೆ ಎಲ್ಲಮ್ಮ ಅಲ್ಲಿಯೇ ನೆಲೆಸಿ ತಪವನ್ನಾಚರಿಸಿ, ಭಕ್ತರ ಅಭಿಷ್ಠ ಪೂರೈಸಲು ದೇವತೆಯಾಗಿ ಅಲ್ಲಿಯೇ ಪ್ರತಿಷ್ಠಾಪಿತಳಾದಳಂತೆ.
ಹಿಂದೆ ಸುಗಂಧವರ್ತಿ, ಸಂವಧವರ್ತಿ, ಸವಧವರ್ತಿ ಎಂದು ಖ್ಯಾತವಾಗಿದ್ದ ಪಟ್ಟಣ 10ರಿಂದ 13ನೇ ಶತಮಾನದಲ್ಲಿ ರಟ್ಟರ ರಾಜಧಾನಿಯಾಗಿತ್ತು. ಇಲ್ಲಿ ಅಂಕುರೇಶ್ವರ, ಪುರಂದರೇಶ್ವರ, ಶಂಕರಲಿಂಗ ದೇವ ಮುಂತಾದ ಹಳೆಯ ದೇವಾಲಯಗಳಿವೆ. ಒಂದು ಜೈನ ಬಸದಿಯೂ ಇದೆ. ಸವದತ್ತಿಯ ಉತ್ತರಕ್ಕೆ 11 ಕಿಮೀ ದೂರದಲ್ಲಿರುವ ಮನೋಳಿಯ ಮಲಪ್ರಭಾ ದಂಡೆಯ ಮೇಲೆ ಸುಂದರವಾದ ಪಂಚಲಿಂಗದೇವರ ಮಂದಿರಗಳಿವೆ. ಹತ್ತಿರದ ಮುರಗೋಡಿನಲ್ಲಿ ಮಲ್ಲಿಕಾರ್ಜುನ ದೇವಾಲಯವಿದೆ.
ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.