ಅಪ್ಪನು ಮಾಡಿದ ಚೌತಿಯ ಪ್ರತಿಮೆಗೆ
ಆನೆಯ ಸೊಂಡಿಲ ಮೊಗವಿತ್ತು
ಇಲಿಯನ್ನೇರಿದ ಯಾರಿದು ಎಂದೆನು
ಈಶ್ವರಸುತನೆಂದನು ಅಪ್ಪ
ಉಮಾಕುಮಾರನ ಚೆಲುಹಬ್ಬದದಿನ
ಊಟಕೆ ಬಂದರು ಅತಿಥಿಗಳು
ಎಲೆಯನ್ನಿರಿಸಿ ಅನ್ನವ ಬಡಿಸಲು
ಏಕಾಗ್ರತೆಯಲಿ ಜನರುಣಲು
ಐದು ಬಗೆಯ ಸಿಹಿಭಕ್ಷ್ಯಗಳಿದ್ದುವು
ಒಗ್ಗರಣೆಯ ಹುಳಿಮೊಸರಿತ್ತು
ಓಡುವ ತಿಳಿಪಾಯಸವನು ಮೆಲ್ಲುತ
ಔತಣದೂಟವ ಹೊಗಳಿದರು
ಅಂದದ ಊಟದ ನಂತರ ಅಡಿಕೆಯ
ಅಃ ಎಂದರು ಜನ ಸವಿಯುತಲಿ
ಬಾ ನವಿಲೆ...
ಕರೆಯುವೆ ನಿನ್ನ ಕಣ್ಮಣಿಯನ್ನ
ಕಾಡಿಗೆ ಕಣ್ಣಿನ ಓ ನವಿಲೇ
ಕಿಟಿಕಿಯಾಳಿಂದ ಬಾ ಮುದದಿಂದ
ಕೀಟಲೆ ಮಾಡೆನು ನಾ ನಿನಗೆ
ಕುಡಿಯಲು ಹಾಲು ತರಲೇನ್
ಹೇಳು
ಕೂಗುತ ನಲಿಯುತ ಬಂದುಬಿಡು
ಕೆಣಕುವುದಿಲ್ಲ ಮೋಸವಿದಲ್ಲ
ಕೇಕೇ ಗಾನವ ಮಾಡುತಿರು
ಕೈಯಲ್ಲಿರುವ ಹಣ್ಣನು ಕೊಡುವೆ
ಕೊರಳನು ಬಾಗುತ ಬಾ ಬಾ ಬಾ
ಕೋರಿಕೆಯನ್ನ ನೀ ಸಲಿಸೆನ್ನ
ಕೌತುಕ ಪಡುವೆನು ನಿನಗಾಗಿ
ಕಂದನ ಕರೆಯಿದು ಪ್ರೇಮದ ಕುರುಹಿದು
ಕಃ ಎನ್ನದೆ ಬಾ ಕುಣಿ ಕುಣಿ ।।
(ಈ ಎರಡೂ ಕವಿತೆಗಳನ್ನು, ಮೊನ್ನೆ ಊರಿಗೆ ಹೋಗಿದ್ದಾಗ ಹಳೇ ಪುಸ್ತಕವೊಂದರಲ್ಲಿ ಓದಿದೆ. ಇವನ್ನು ಬರೆದ ಕವಿ ದಿವಂಗತ ಮುಂಡಾಜೆ ರಾಮಚಂದ್ರ ಭಟ್. 1947ರಿಂದ ಸುಮಾರು 1965ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮುಂಡಾಜೆಯಲ್ಲಿ ಪ್ರಾಥಮಿಕ ಶಾಲಾ ಅಧ್ಯಾಪಕರಾಗಿದ್ದ ರಾಮಚಂದ್ರ ಮಾಷ್ಟ್ರು ಸಂಗೀತದಲ್ಲೂ ಪರಿಣತರಾಗಿದ್ದರಂತೆ. ಮಕ್ಕಳಿಗಾಗಿ ಸುಂದರ ಕವಿತೆಗಳನ್ನು ರಚಿಸಿದ ಇವರ ಪ್ರಕಟಿತ ಸಂಕಲನಗಳೆಂದರೆ 'ತಮ್ಮನ ಕವಿತೆಗಳು", 'ಪೀಪೀ", 'ಪುಟ್ಟನ ಪಿಟೀಲು" ಇತ್ಯಾದಿ. ಇವರ 'ರೈಲು ಪ್ರವಾಸದ ಕನಸು" ಎಂಬ ಒಂದು ಕವಿತೆಯಂತೂ ಬಹಳ ಚೆನ್ನಾಗಿದೆ.)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.