ಅವ್ವ, ಅಮ್ಮ ಅಂತ ಅಂದ್ರೆ ಯಾರಿಗೆ ತಾನೇ ಇಶ್ಟಾ ಇಲ್ಲಾ ಹೇಳಿ. ಎಲ್ಲರೂ ಅವ್ವನನ್ನು ಪೂಜಿಸುವವರೆ. ನಮ್ಮ ಅವ್ವಂದಿರು ಮಾಡಿರುವ ತ್ಯಾಗ, ಅವರ ಪ್ರೀತಿಗೆ, ಮಮತೆಗೆ ಬೆಲೆಯಿಲ್ಲ. ಈ ಸಾರಿಯ ಅವ್ವಂದಿರ ದಿನಕ್ಕೆ ನೂರು ವರುಶದ ಹುರುಶ. ಆದರೆ ಇಂತಹ ಅವ್ವಂದಿರ ದಿನಕ್ಕೆ ನೋವಿನ ಹಿನ್ನೆಲೆಯಿದೆ ಅಂದರೆ ನೀವು ನಂಬುತ್ತೀರಾ? ಇದಕ್ಕಾಗಿ ಅನ್ನಾ ಜಾರ‍್ವೀಸ್ ತನ್ನ ಸಂಪತ್ತನ್ನೆಲ್ಲಾ ಕಳೆದುಕೊಂಡಳು, ಒಂದು ಮುರುಕಲು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಳು.
ಈ ಕತೆ ಶುರುವಾಗುವುದು 1850 ರ ಸಮಯದಲ್ಲಿ. ಪಡುವಣ ವರ‍್ಜೀನಿಯಾ ಮಹಿಳೆಯರ ಗುಂಪಿನ ಮುಂದಾಳಾದ ಆನ್ ರೀವ್ಸ್ ಜಾರ‍್ವೀಸ್, ಅನ್ನಾ ಜಾರ‍್ವೀಸ್ ಳ ತಾಯಿ ಅವ್ವಂದಿರ ದಿನದಂದು ರೋಗಗಳ ವಿರುದ್ದ ಹೋರಾಡಲು, ಹಾಲು ಅಶುದ್ದಿಯ ವಿರುದ್ದ, ಆರೋಗ್ಯದ ಚೊಕ್ಕಟತೆಯದ ಬಗ್ಗೆ ಹಾಗೂ ಕೂಸು ಮರಣದ (Infant Mortality) ಯ ಬಗ್ಗೆ ಅರಿವು ಮೂಡಿಸಲು ಶಿಬಿರಗಳನ್ನು ಏರ‍್ಪಾಡು ಮಾಡುತ್ತಿದ್ದಳು. ಇದರ ಜೊತೆಜೊತೆಗೆ ಈ ಗುಂಪು 1861-1865 ರ ಅಮೇರಿಕಾದ ಜನರ ಕಾಳಗದಲ್ಲಿ ಎರಡೂ ಪಂಗಡ ಗಾಯಾಳುಗಳನ್ನು ಆರಯ್ಕೆ ಮಾಡುತ್ತಿದ್ದರು.
ಕಾಳಗದ ನಂತರದ ದಿನಗಳಲ್ಲಿ ಜಾರ‍್ವೀಸ್ ಮತ್ತು ಬಳಗ ಅವ್ವಂದಿರ ಗೆಳೆತನದ ದಿನ ಹೊರಊಟ (Picnic) ಮತ್ತು ಇತರೇ ಕೆಲಸಗಳ ಮೂಲಕ ಎರಡೂ ಕಡೆಯ ಜನರನ್ನು ಒಂದುಗೂಡಿಸುವ ಕೆಲಸ ಮಾಡುತ್ತಿದ್ದರು. ಇದೇ ಸಮಯದಲ್ಲಿ ಆನ್ ಜಾರ‍್ವೀಸ್ ಅವ್ವಂದಿರ ಗೆಳೆತನದ ದಿನದ ಮೂಲಕ ಬೆಂಬಲಿಗರನ್ನು ಒಗ್ಗೂಡಿಸುವ ಕೆಲಸ ಮಾಡಿತ್ತಿದ್ದಳು. ಆದರೆ ಅನ್ನಾ ಜಾರ್‍ವೀಸ್ ಮಾಡಿದ ಕೆಲಸಗಳೇ ನಮ್ಮ ಇಂದಿನ ಅವ್ವಂದಿರ ದಿನಕ್ಕೆ ಕಾರಣ.
ಅವ್ವನ ದಿನ:
ಅನ್ನಾ ಜಾರ‍್ವೀಸ್ ಗೆ ತನ್ನದೇ ಆದ ಮಕ್ಕಳಿರಲಿಲ್ಲ. ಆದರೆ 1905 ರಲ್ಲಿ ತೀರಿಹೋದ ತನ್ನ ಅವ್ವನ ನೆನಪಿನಲ್ಲಿ 1908 ರಲ್ಲಿ ಮೊದಲ ಅವ್ವನ ದಿನವನ್ನು ಮಾಡಲಾಯಿತು. 1908 ರ ಮೇ ತಿಂಗಳಿನಲ್ಲಿ ಪಡುವಣ ವರ‍್ಜೀನಿಯಾದ ಗ್ರಾಪ್ಟನ್ ನಲ್ಲಿದ್ದ ಚರ‍್ಚ್ ಒಂದರಲ್ಲಿ ಕುಟುಂಬದ ಸದಸ್ಯರೆಲ್ಲ ಕೂಡಿ ಕಾರ‍್ಯಕ್ರಮವೊಂದನ್ನು ಮಾಡಿದರು. ಈಗ ಆ ಚರ‍್ಚ್ ಅನ್ನು “ಅಂತರಾಶ್ಟ್ರೀಯ ಅವ್ವನ ದಿನದ ಗುಡಿ” (International Mother’s Day Shrine) ಎಂದು ಕರೆಯಲಾಗುತ್ತದೆ. ಇದರ ಜೊತೆಜೊತೆಗೆ ಪಿಲಾಡೆಲ್ಪಿಯಾದ ಚರ‍್ಚ್ ಹಾಗೂ ಇನ್ನು ಅನೇಕ ನಗರಗಳಲ್ಲಿ ಈ ಹೆಸರಿನ ಚರ‍್ಚ್ ಗಳನ್ನು ನೋಡಬಹುದು.
ಹೆಚ್ಚಾಗಿ ಜಾರ‍್ವೀಸ್ ಅವರ ಪ್ರಯತ್ನದಿಂದಾಗಿ ಅಮೇರಿಕಾದ ಹೆಚ್ಚಿನ ನಗರಗಳಲ್ಲಿ ಹಾಗೂ ರಾಜ್ಯಗಳಲ್ಲಿ ಅವ್ವನ ದಿನ ಆಚರಣೆ ಜಾರಿಗೆ ಬಂತು. ಇದಾದ ನಂತರ ಅಂದಿನ ಅಮೇರಿಕಾದ ಅದ್ಯಕ್ಶರಾಗಿದ್ದ ವುಡ್ ರೋವ್ ವಿಲ್ಸನ್ ಮೇ ತಿಂಗಳ ಎರಡನೇ ಬಾನುವಾರವನ್ನು ಅವ್ವನ ದಿನ ಎಂದು 1914 ರಲ್ಲಿ ಆದೇಶ ಹೊರಡಿಸಿದರು. ಆದರೆ ಜಾರ‍್ವೀಸ್ ಅವರ ಕನಸು ಇದಾಗಿರಲಿಲ್ಲ. ಅವರ ಪ್ರಕಾರ “ಈ ದಿನ ನೀವು ನಿಮ್ಮ ಮನೆಗೆ ಹೋಗಿ ನಿಮ್ಮ ಅವ್ವನ ಜೊತೆ ಸಮಯವನ್ನು ಕಳೆದು, ಅವಳು ಮಾಡಿರುವ ತ್ಯಾಗಕ್ಕೆ ವಂದನೆಗಳನ್ನು ಹೇಳುವುದು ಆಗುತ್ತು”. ಅನ್ನಾ ಜಾರ‍್ವೀಸ್ ಬಗ್ಗೆ ಪಿ.ಎಚ್.ಡಿ ಮಾಡಿರುವ ಅಂಟೋಲಿನಿ ಈ ಕೆಳಗಿನ ಮಾತುಗಳನ್ನು ಹೇಳುತ್ತಾರೆ.
It wasn’t to celebrate all mothers. It was to celebrate the best mother you’ve ever known—your mother—as a son or a daughter.” That’s why Jarvis stressed the singular “Mother’s Day,” rather than the plural “Mothers’ Day.”
ಆದರೆ ಕೆಲವೇ ವರುಶಗಳಲ್ಲಿ ಜಾರ‍್ವೀಸ್ ಕಂಡಿದ್ದ ಕನಸು ಅವರ ಕಣ್ಣ ಮುಂದೆಯೇ ಸೋಲತೊಡಗಿತ್ತು.
ಸೋತ ಅವ್ವನ ದಿನ:
ಅನ್ನಾ ಜಾರ‍್ವೀಸ್ ಕಂಡಿದ್ದ ಕುಟುಂಬದವರು ಮಾತ್ರ ಆಚರಿಸಬೇಕಾಗಿದ್ದ ಅವ್ವನ ದಿನ ಮಾರುಕಟ್ಟೆಯ ಹಾದಿ ಹಿಡಿಯಿತು. ಅವ್ವನ ದಿನ ಅವ್ವಂದಿರ ದಿನವಾಗಿ ಬದಲಾಯಿತು. ಈ ದಿನ ಮಾರುಕಟ್ಟೆಗೆ ಬಂಗಾರದ ಗಣಿಯಾಗಿ ಪರಿಣಮಿಸಿತು. ಹೂವುಗಳನ್ನು ಕೊಳ್ಳುವುದು, ಕೊಡುವುದು, ಸಿಹಿ ತಿಂಡಿಗಳು ಮತ್ತು ಗ್ರೀಟಿಂಗ್ ಕಾರ‍್ಡ್ ಗಳನ್ನು ಕಳಿಸುವುದು. ಇವುಗಳು ಜಾರ‍್ವೀಸ್ ಅವರನ್ನು ಬೇಜಾರಿಗೆ ನೂಕಿದವು. ಆಗ ಅವರು ಮತ್ತು ಅವರ ಚಿಂತನೆಯನ್ನು ಒಪ್ಪುತ್ತಿದ್ದ ಕೆಲವರು ಹಿಂದೆ ಅವ್ವನ ದಿನ ಇದ್ದಂತಹ ರೀತಿ ಮರುಳಿಸಬೇಕು ಎಂದು ಅಣಿಗೊಳಿಸಿಕೊಂಡರು.
ಅನ್ನಾ ಜಾರ‍್ವೀಸ್ Mother’s Day International Association ಒಂದನ್ನು ಶುರು ಮಾಡಿ ಅದರ ಮೂಲಕ ಈ ದಿನದ ಬಗ್ಗೆ ಹಿಡಿದ ಪಡೆದುಕೊಳ್ಳಲು ಯತ್ನಿಸಿದರು. ಮಾರುಕಟ್ಟೆ ಹಾದಿ ಹಿಡಿದ ಈ ದಿನ ವಿರುದ್ದ ಪ್ರತಿಬಟನೆಗಳನ್ನು ಮಾಡಿದರು. ಕಾನೂನಿನ ಮೂಲಕ ಹೋರಾಟದ ಎಚ್ಚರಿಕೆಗಳನ್ನು ನೀಡಿದರು. ಇದಲ್ಲದೇ ಅವ್ವಂದಿರ ದಿನದಂದು ಚಂದಾ ಎತ್ತುತ್ತಿದ್ದ ಅಮೇರಿಕಾದ ಮೊದಲ ಮಹಿಳೆ ಎಲೆನಾರ್ ರೂಸೋವೆಲ್ಟ್ ಅವರ ವಿರುದ್ದ ಪ್ರತಿಬಟಿಸಿದರು. ಇವರ ಪ್ರತಿಬಟನೆ ಯಾವ ಮಟ್ಟಕ್ಕಿತ್ತೆಂದರೆ 1923 ರಲ್ಲಿ ಮಿಟಾಯಿ ಮಾಡುವವರ ಸಮ್ಮೇಳನದಲ್ಲಿ ನುಗ್ಗಿ ಗಲಾಟೆ ಮಾಡಿದರು. ಇದಾದ ನಂತರ 1925 ರಲ್ಲಿ ನಡೆಯುತ್ತಿದ್ದ ಅವ್ವಂದಿರ ದಿನ ಯುದ್ದದಲ್ಲಿ ತಮ್ಮವರನ್ನು ಕಳೆದುಕೊಂಡಿದ್ದ ಜನರು ಚಂದಾ ಎತ್ತಲು ನಡೆಸುತ್ತಿದ್ದ ಸಮ್ಮೇಳನಕ್ಕೆ ನುಗ್ಗಿ ಗಲಾಟೆ ಮಾಡಿ ಬಂದನಕ್ಕೊಳಗಾದರು.
ಅವ್ವಂದಿರ ದಿನವನ್ನು ತಾನದುಕೊಂಡ ರೀತಿಯಲ್ಲಿ ಕೇವಲ ಅವ್ವನ ನೆನಪಿಗೆ ಮಾತ್ರವಿರಬೇಕೆಂಬ ಹಂಬಲದಿಂದ 1940 ರ ಮೊದಲ ಕೆಲವು ವರುಶಗಳವರೆಗೂ ಜಾರ‍್ವೀಸ್ ಹೋರಾಡುತ್ತಾರೆ. 1948 ರಲ್ಲಿ ಜಾರ‍್ವೀಸ್ ತನ್ನ 84ನೇ ಇಳಿವಯಸ್ಸಿನಲ್ಲಿ ಪಿಲಾಡೆಲ್ಪಿಯಾದ ಮಾರ‍್ಶಲ್ ಸ್ಕ್ವೇರ್ ಎಂಬ ಮುರುಕಲು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆಯುತ್ತಾರೆ. ಇದರ ಬಗ್ಗೆ ಅಂಟೋಲಿನಿ “ಬುದ್ದಿ ಕಳೆದುಕೊಂಡ ಸ್ತಿತಿಯಲ್ಲಿ, ಒಂದು ಕಿಲುಬು ಕಾಸಿಲ್ಲದೆ ಸಣ್ಣ ಆಸ್ಪತ್ರೆಯೊಂದರಲ್ಲಿ ಸತ್ತ ಈ ಹೆಣ್ಣು ಮಗಳು, ಬೇಕಿದ್ದರೆ ಅವ್ವಂದಿರ ದಿನದ ಹೆಸರಿನಲ್ಲಿ ಬಹಳಶ್ಟು ದುಡ್ಡು ಮಾಡಬಹುದಾಗಿತ್ತು. ಆದರೆ ಇದರ ದುರುಪಯೋಗ ಪಡಿಸಿಕೊಂಡವರ ವಿರುದ್ದ ಹೋರಾಡಿ ತನ್ನ ಹಣ ಮತ್ತು ದೇಹದ ಶಕ್ತಿ ಎರಡನ್ನೂ ಕಳೆದುಕೊಂಡಳು” ಎಂದು ಹೇಳುತ್ತಾರೆ.
ಇವತ್ತಿನ ಅವ್ವಂದಿರ ದಿನ: ಬ್ರಂಚ್, ಹೂಗುಚ್ಚ, ಒಡವೆಗಳು
ಇವತ್ತು ಅವ್ವಂದಿರ ದಿನ ಮಾರುಕಟ್ಟೆಯ ಕೊಳ್ಳುಬಾಕ ಸ್ತಿತಿಯ ಮೇಲೆ ನಡೆಯುತ್ತಿದೆ. ನ್ಯಾಶನಲ್ ರಿಟೇಲ್ ಪೆಡರೇಶನ್ ಪ್ರಕಾರ ಈ ವರುಶ ಅಮೇರಿಕನ್ನರು ತಮ್ಮ ಅವ್ವಂದಿರ ಮೇಲೆ $162.94 ದುಡ್ಡನ್ನು ಕರ‍್ಚು ಮಾಡಿದ್ದಾರೆ. ಇದು ಕಳೆದ ವರುಶಕ್ಕಿಂತ ಕಡಿಮೆಯಿದೆ. ಹೋದ ವರುಶ ಇದು $168.94 ಇತ್ತು. ಒಟ್ಟು ಕರ‍್ಚು $19.9 ಬಿಲಿಯನ್ ದಾಟಲಿದೆ ಎಂದು ಅಂದಾಜಿಸಲಾಗಿದೆ. ಅಮೇರಿಕಾದ ನ್ಯಾಶನಲ್ ರೆಸ್ಟೂರ ಅಸೋಶಿಯೇಶನ್ ಪ್ರಕಾರ ಅವ್ವಂದಿರ ದಿನ ಅತಿ ಹೆಚ್ಚು ಜನರು ಹೊರಗೆ ಊಟ ಮಾಡಲು ಬಯಸುವ ರಜೆ ದಿನವಾಗಿದೆ. ಹಾಲ್ ಮಾರ‍್ಕ್ಸ್ ಕಾರ‍್ಡ್ 1920 ರಲ್ಲಿ ಮೊದಲ ಬಾರಿಗೆ ಅವ್ವಂದಿರ ದಿನದ ಚೀಟಿಗಳನ್ನು ಹೊರಬಿಟ್ಟಿತ್ತು. ಅದು ಹೇಳುವ ಪ್ರಕಾರ ಕ್ರಿಸ್ಮಸ್ ಮತ್ತು ವ್ಯಾಲಂಟಯ್ನ್ ದಿನದ ನಂತರ ಅವ್ವಂದಿರ ದಿನವೇ ಅತಿ ಹೆಚ್ಚಿ ಚೀಟಿಗಳು ಮಾರಾಟವಾಗುವ ದಿನ.
ಅವ್ವಂದಿರ ದಿನ ಪ್ರಪಂಚಕ್ಕೆ ಹರಡಿದೆ:
ಅನ್ನಾ ಜಾರ‍್ವೀಸ್ ಹುಟ್ಟುಹಾಕಿದೆ ರಜೆ ಇಂದು ಪ್ರಪಂಚದೆಲ್ಲೆಡೆ ಹರಡಿದೆ. ಇದನ್ನು ಹಲವಾರು ರೀತಿಗಳಲ್ಲಿ, ಉತ್ಸಾಹದಿಂದ ಮತ್ತು ಬೇರೆ ಬೇರೆ ದಿನಗಳಂದು ಆಚರಿಸಲಾಗುತ್ತಿದೆ. ಹೆಚ್ಚಾಗಿ ಮೇ ತಿಂಗಳ ಎರಡನೆಯ ಬಾನುವಾರದಂದು. ಅರಬ್ ದೇಶಗಳಲ್ಲಿ, ಅವ್ವಂದಿರ ದಿನವನ್ನು ಮಾರ‍್ಚ್ 21 ಕ್ಕೆ ಆಚರಿಸಲಾಗುತ್ತದೆ. ಪನಾಮಾ ದೇಶದಲ್ಲಿ ಡಿಸೆಂಬರ್ 8 ಕ್ಕೆ ಆಚರಿಸಲಾಗುತ್ತದೆ, ಇದೇ ದಿನ ಕ್ಯಾತೋಲಿಕ್ ಚರ‍್ಚ್ ಗಳು ವರ‍್ಜಿನ್ ಮೇರಿಯ ಹಬ್ಬವನ್ನು ಆಚರಿಸುತ್ತವೆ. ತಾಯ್ಲ್ಯಾಂಡ್ ನಲ್ಲಿ ಆಗಸ್ಟ್ 12 ರಂದು ಆಚರಿಸಲಾಗುತ್ತದೆ. ಇದು ರಾಣಿ ಸಿರಿಕಿತ್ ಅವರ ಹುಟ್ಟಿದ ದಿನ. ಈ ರಾಣಿ 1956 ರಿಂದ ರಾಜ್ಯಬಾರ ವಹಿಸಿಕೊಂಡಿದ್ದಾರೆ ಮತ್ತು ಹೆಚ್ಚಿನ ತಾಯ್ ದೇಶದವರು ಇವರನ್ನು ತಮ್ಮ ತಾಯಿಯಂದು ತಿಳಿದುಕೊಂಡಿದ್ದಾರೆ.
ಬ್ರಿಟನ್ ನಲ್ಲಿ ನೂರಾರು ವರುಶಗಳಾದ ಹಳೆಯದಾದ ಮದರಿಂಗ್ ಸಂಡೆ ಆಚರಣೆಯಲ್ಲಿದೆ. ಅಂದು ಜನರು ಅವರ ಪ್ರದೇಶದ ಮುಕ್ಯ ಚರ‍್ಚ್ ಅತವಾ ತಾಯಿ ಚರ‍್ಚಿಗೆ ಹೋಗುತ್ತಾರೆ. ಈ ಮದರಿಂಗ್ ಸಂಡೆ ಚರ್‍ಚ್ ಗಳು ಹಲವಾರು ಕುಟುಂಬಗಳನ್ನು ಕೂಡಿಸಿರುವ ಇತಿಹಾಸವಿದೆ. ಇದು ನಂತರ ಬ್ರಿಟನ್ನಿನ ಅವ್ವಂದಿರ ದಿನವಾಗಿ ಮಾರ‍್ಪಟ್ಟಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.