ನನ್ನಜ್ಜಿ ಕಾಲದ
ಬಾಯ್ ಲೆಕ್ಕ
ಗೋಡೆಗೆ ಗೀಟಾಕಿದರೆ ಒಂದು ಲೆಕ್ಕ
ಹುಂಡಾಕಿದರೆ ಇನ್ನೊಂದು ಲೆಕ್ಕ
ಸುಣ್ಣದುಂಡೇಲಿ
ಬರೀತಿದ್ದ ಲೆಕ್ಕ
ಇಲ್ಲಿ ಈಗ ಬರಿ
ಕಂಪ್ಯೂಟರ್ ಲೆಕ್ಕ.
ಹುಂಡಿಟ್ಟರೆ ಹಾಲ್ಲೆಕ್ಕ
ಗೀಟಾಕಿದರೆ ಬಾಳೆಕಾಯಿ ಲೆಕ್ಕ
ನಂಗೂ ಅಥ೯ ಆಗ್ತಿರಲಿಲ್ಲ
ಆ ಪಾಟಿ ಗಣಿತದ ಲೆಕ್ಕ
ಉಟ್ಟುಂಡು ಎಲೆ ಅಡಿಕೆ
ಮೆದ್ದ ಕೆಂಪನೆ ಬಾಯಲ್ಲಿ
ಬರಿ ಬಾಯಲೆಕ್ಕ ಹೇಳತಿದ್ರು
ಮಗ್ಗಿ ಗಿಗ್ಗಿ ಸೀದಾ ಉಲ್ಟಾ
ಹೇಗೆ ಬೇಕಾದರು ಉದುರುತ್ತಿತ್ತು
ಓದು ಬರಹ ಕಲಿತಿಲ್ಲ
ಪೆನ್ನು ಪುಸ್ತಕ ಕಂಡಿಲ್ಲ.
ನೆನಪಿಗೆ ಹಾಕುತ್ತಿದ್ದರು
ಸೆರಗಿಗೆ ಗಂಟು
ಒಂದಾಕಿದರೆ ಕೊಡೊ ಲೆಕ್ಕ
ಎರಡಾಕಿದರೆ ಇಸ್ಕೋಳ್ಳೊ ಲೆಕ್ಕ
ಬಡ್ಡಿ ಗಿಡ್ಡಿ ಏನಿಲ್ಲ ರೊಕ್ಕಕ್ಕೆ
ಕಷ್ಟಕ್ಕಾಗದ ರೊಕ್ಕ ಇಟ್ಕಂಡೇನು ಪ್ರಯೋಜನ
ಊಟಕ್ಕಿಲ್ಲದ ಉಪ್ಪಿನ ಕಾಯಿ..…ಸಮ
ಹೇಳಿ ಬಾಯಿ ಮುಚ್ಚಿಸುವ ತಾಕತ್ತಿತ್ತು
ಈಗೆಲ್ಲಿ ಕಾಣಲಿ ನನ್ನಜ್ಜಿ ನಿಯತ್ತು
ಬಹುಶಃ ಹಳ್ಳೀಲೂ
ಮಾಯವಾಗಿರಬೇಕು ಈ ಜಾಣೆಯ ಲೆಕ್ಕ.
ಕಾಲ ಕೆಟ್ಟಿಲ್ಲ ಕಾಲ ನಾವೇ ಕೆಡಿಸಿದ್ದು
ಲೋಕಾರೂಢಿ ಮಾತಾಡ್ತಿದ್ದ ನನ್ನಜ್ಜಿ
ಬೆಂಗಳೂರು ಗಲ್ಲಿ ಗಲ್ಲಿ ತಿರುಗಬೇಕು
ಅನ್ನೊ ಆಸೆ ಅವರಿಗೆ ಇರಲಿಲ್ಲ
ಕುದುರೆ ರೇಸು ನೋಡದೆ ಬಿಡಲಿಲ್ಲ
ಚಪ್ಪಲಿ ಮೆಟ್ಟದ ಕಾಲಲ್ಲಿ
ಊರಿಂದ ಊರಿಗೆ ಹೋಗತಿದ್ರು
ಯಕ್ಷಗಾನ, ಪ್ರಸಂಗದ ಗೀಳಿಟ್ಟಕಂಡು
ಅವರ ಉಮೇದಿಗೆ ಹೊಡಿಬೇಕ್ರಿ ಒಂದು ಸಲಾಮ್.
ಹದಿಮೂರಕ್ಕೆ ಮೂವತ್ತೆರಡವನ ವರಿಸಿ
ರಕ್ತ ಹೊಟ್ಬ್ಯಾನೆ ಬಂದು
ಹದಿನಾರಕ್ಕೆ ಗಂಡ ಸತ್ತು
ಬೋಳಿಸಿಬಿಟ್ಟರು ತಲೆ
ಬಳೆ ತೊಟ್ಟ ಕೈ
ರೂಪ ವಿಕಾರಗೊಳಿಸಿ
ಕೆಂಪು ಸೀರೆ ಸೆರಗು
ತಲೆ ಮೇಲಿಂದ ಮುಚ್ಕಂಡು
ಕಂಕಳಲ್ಲಿ ನನ್ನಪ್ಪನೆಂಬ ಕೂಸಿಟ್ಕಂಡು
ಯೌವನವನ್ನೇ ಮರೆತು.
ದಾಯಾದಿ ಅಡಿಯಾಳಾಗಿ
ಬಿಸಿಲಿಲ್ಲ ಬೆಂಕಿಯಿಲ್ಲ
ಜೀತಗೈದ ಅವರ ಬಾಳು
ಮಟ ಮಟ ಮಧ್ಯಾಹ್ನ
ಉರಿಬಿಸಿಲು ಲೆಕ್ಕಕ್ಕಿಲ್ಲ
ಕೊಟ್ಟಿಗೆ ಹಸು ಎಮ್ಮೆ ಮೇಯಿಸಿ
ಮೈ ತಡವಿ ಕಣ್ಣೀರಿಟ್ಟು
ತಮ್ಮ ನೋವ ಮರೀತಿದ್ರು .
ಕೊನೆವರೆಗೂ ನಮಗೆಲ್ಲ ಹರಸ್ತಿದ್ರು
ಹಂಗಿನರಮನೆಗಿಂತ ಇಂಗಡದ ಗುಡಿ ಲೇಸು
ಬದುಕುವುದಕ್ಕೂ ಹೇಳಿಕೊಟ್ಟರು
ತಮ್ಮನುಭವದ ಲೆಕ್ಕ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.