ಕಲ್ಯಾಣ
ಕರ್ನಾಟಕದ ಶಕ್ತಿ ಕೇಂದ್ರ ಗುಲ್ಬರ್ಗಾ ಜಿಲ್ಲೆ.
ಈ ಜಿಲ್ಲೆಯ ಪ್ರಮುಖ ನಗರ ಗುಲ್ಬರ್ಗಾ.
ಬಿರು ಬಿಸಿಲಿಗೆ ಹೆಸರಾದ ಜಿಲ್ಲೆಯಲ್ಲಿ
ಕೃಷ್ಣ, ಭೀಮಾ,
ಅಮರ್ಜಾ, ಕಾಗಿಣಾ, ಮುಲ್ಲಾಮರಿ, ಬೆಣ್ಣೆತೊರೆ ನದಿಗಳು
ಹರಿಯುತ್ತವೆ. ಈ ನಾಡಿಗೆ ಕಲಬುರ್ಗಿ ಎಂಬ ಹೆಸರೂ ಇದೆ.
ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಯಾದವರು, ಹೊಯ್ಸಳರು ಆಳಿದ ಈ ನಾಡನ್ನು ದೆಹಲಿಯ ದೊರೆ
ಮಹಮ್ಮದ್ ಬಿನ್ ತುಘಲಕ್ ವಾರಂಗಲ್ ನಲ್ಲಿ ಆಳುತ್ತಿದ್ದ ಕಾಕತೀಯರನ್ನು ಸೋಲಿಸಿ
ತನ್ನ ಕೈವಶಪಡಿಸಿಕೊಂಡನೆಂದು
ಇತಿಹಾಸ ಸಾರುತ್ತದೆ. ಇಲ್ಲಿ ಧ್ವಂಸಗೊಂಡಿರುವ ಕೋಟೆ ಕೊತ್ತಲಗಳು, ನಿರ್ವಹಣೆ
ಇಲ್ಲದೆ ಹಾಳಾಗಿರುವ ಸ್ಮಾರಕಗಳು ಕರಾಳ ಕುರುಹುಗಳಾಗಿ ಇತಿಹಾಸದ ಕಥೆ ಹೇಳುತ್ತವೆ.
ರಕ್ತ ಸಿಕ್ತ ಇತಿಹಾಸದ ಗುಲ್ಬರ್ಗಾ ಬಹುಮನಿ
ರಾಜ್ಯ ಸ್ಥಾಪನೆಯಾದಾಗ ಮತ್ತೆ ರಾಜಧಾನಿಯಾಯಿತು. ನಂತರ
ಹೈದ್ರಾಬಾದ್ ನಿಜಾಮರ
ಆಳ್ವಿಕೆಗೆ ಒಳಪಟ್ಟಿತು.
ಒಂದು ಕಾಲದಲ್ಲಿ ವೈಭವದಿಂದ
ಮೆರೆದ ಗುಲ್ಬರ್ಗಾ ಇಂದು ರಾಜ್ಯದ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಒಂದು ಎಂಬುದು
ಮಾತ್ರ ವಿಷಾದದ ಸಂಗತಿ. ನೈರ್ಮಲ್ಯ ಎಂಬ ಪದದ ಪರಿಚಯ ಬಹುಶಃ ಇಲ್ಲಿನ ಸರ್ಕಾರಿ
ಅಧಿಕಾರಿಗಳಿಗೆ ಇದ್ದಂತೆಯೇ ಇಲ್ಲ ಎಂಬುದನ್ನು ಊರು ನೋಡಿದವರಿಗೆ ಅನ್ನಿಸದಿರದು.
ಆದರೆ, ಇತ್ತೀಚೆಗೆ ಅಭಿವೃದ್ಧಿ ಕಂಡಿರುವ ಶರಣ ಬಸವೇಶ್ವರ ಕೆರೆ ಇದಕ್ಕೆ
ಅಪವಾದವಾಗಿದೆ.
ಸ್ಥಳೀಯರ, ಸರ್ಕಾರಿ
ಅಧಿಕಾರಿಗಳ ನಿರ್ಲಕ್ಷ್ಯದ ನಡುವೆಯೂ ಇಲ್ಲಿ ಉಳಿದಿರುವ ಐತಿಹಾಸಿಕ ಕಟ್ಟಡಗಳ ಪೈಕಿ
ಶರಣ ಬಸವೇಶ್ವರ ದೇವಾಲಯವೂ ಒಂದು.
ಹಲವು ಹೋರಾಟಗಳ ನೆಲವಾದ
ಗುಲ್ಬರ್ಗಾ ಧರ್ಮ ಕರ್ಮಗಳ ನೆಲೆವೀಡೂ ಹೌದು. ಇಲ್ಲಿರುವ ಶ್ರೀ ಶರಣ ಬಸವೇಶ್ವರ
ದೇವಸ್ಥಾನ ಪವಿತ್ರ ತಾಣ.
ಜೇವರ್ಗಿ ತಾಲೂಕಿನ ಅರಳಗುಂಡಿಯ
ಶರಣ ಬಸವೇಶ್ವರರು (1746-1822) ವೀರಶೈವ ಧರ್ಮ ಪ್ರಚಾರ ಮಾಡುತ್ತಾ ಗುಲ್ಬರ್ಗಕ್ಕೆ
ಬಂದು ನೆಲೆಸಿದರು. ಬಸವೇಶ್ವರರು ಲಿಂಗೈಕ್ಯರಾದ ಬಳಿಕ ಅವರ ಸಮಾಧಿಗೆ ಗೋಪುರ
ನಿರ್ಮಿಸಲಾಯಿತು. ಅದುವೇ ಇಂದು ಶರಣ ಬಸವೇಶ್ವರ ದೇವಾಲಯವಾಗಿದೆ.
ದೇವಾಲಯದಲ್ಲಿ
ಗದ್ದುಗೆಯ ಮೇಲೆ ಶರಣ ಬಸವೇಶ್ವರರ ನೆಚ್ಚಿನ ಶಿಷ್ಯ ಆದಿ ದೊಡ್ಡಪ್ಪ ಮತ್ತು ಶರಣ
ಬಸವೇಶ್ವರರ (ಗುರು-ಶಿಷ್ಯರ) ಬೆಳ್ಳಿಯ ಜೋಡಿ ಮುಖವಾಡಗಳನ್ನು
ಪ್ರತಿಷ್ಠಾಪಿಸಲಾಗಿದೆ. ದೇವಾಲಯದ ಮುಂಭಾಗದಲ್ಲಿ ಅಪ್ಪನ ಕೆರೆ ಇದ್ದು, ಇದನ್ನು ಈಗ
ವಿಹಾರ ತಾಣವಾಗಿ ಮಾರ್ಪಡಿಸಲಾಗಿದೆ. 1927ರಲ್ಲಿ ಮಹಾತ್ಮಾ ಗಾಂಧಿಜಿ
ಇಲ್ಲಿಗೆ ಭೇಟಿ ನೀಡಿದ್ದರು. ಶರಣ ಬಸವೇಶ್ವರ ಜಾತ್ರೆಯ ವೇಳೆ ಸಹಸ್ರಾರು ಭಕ್ತರು
ಸೇರಿ, ಶರಣಬಸವೇಶ್ವರ ತೇರು ಎಳೆಯುತ್ತಾರೆ.
ಜೈನ ಬಸದಿಗಳು, ಬೌದ್ಧ ವಿಹಾರ,
ಚರ್ಚ್, ದೇವಾಲಯ, ದರ್ಗಾ, ಗುರುದ್ವಾರಗಳನ್ನು ಒಳಗೊಂಡ ಗುಲ್ಬರ್ಗಾ ಜಿಲ್ಲೆ ಕೋಮು
ಸ್ವಾಹಾರ್ದದ ನಾಡೆಂದೇ ಖ್ಯಾತವಾಗಿದೆ. ಖ್ವಾಜಾ ಬಂದೇ ನವಾಜ್ ದರ್ಗಾ,
ಶ್ವೇತಾಂಬರ ಜೈನ ಮಂದಿರ, ಮಹಾವೀರ ಬಸದಿ, ಆದಿ ತೀರ್ಥಂಕರ ಬಸದಿ, ನೋಡಲೇ
ಬೇಕಾದ ತಾಣಗಳು.
ಸಂಪರ್ಕ: ನಿರ್ದೇಶಕರು,
ಪ್ರವಾಸೋದ್ಯಮ ಇಲಾಖೆ, ಖನಿಜ ಭವನ,
ರೇಸ್‌ಕೋರ್ಸ್ ರಸ್ತೆ, ಬೆಂಗಳೂರು.
ದೂರವಾಣಿ :080-22352901 /22352909 /22352903
Email : kstdc@vsnl.in
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.