ನವೆಂಬರ್ 1 ಬಂತೆಂದರೆ ಜಯಭಾರತ ಜನನಿಯ ತನುಜಾತೆಗೆ 63 ವರ್ಷ ತುಂಬುತ್ತದೆ. ಕನ್ನಡ ಮಾತೆ 63 ರ ಕದ ತಟ್ಟಲು ಅಣಿಯಾಗುತ್ತಿದ್ದಾಳೆ. ಆಕೆಯನ್ನು ಅರುವತ್ತರ ಅಧ್ವರ್ಯು ಎಂದು ಕರೆಯಲಪ್ಪಣೆಯೆ, ದೊರೆಯೇ. ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಹರಿದು ಹಂಚಿಹೋಗಿದ್ದ ಕರ್ನಾಟಕದ ಚಾಪೆಯನ್ನು ಒಗ್ಗೂಡಿಸಿ ರತ್ನಗಂಬಳಿ ನೇಯ್ದ ಕರ್ನಾಟಕ ಏಕೀಕರಣ ಚಳವಳಿಯ ಹೋರಾಟಗಾರರಿಗೆ ಪುನಃ ನಮಿಸುವ ಕಾಲ ಮತ್ತೆ ಬರುತ್ತಿದೆ. ನಿಸ್ವಾರ್ಥ ಸೇವಕ, ಚಳವಳಿಯ ನಾಯಕ ಆಲೂರು ವೆಂಕಟರಾಯರಿಗೆ ಮೊದಲ ನಮಸ್ಕಾರಗಳು.
ನವೆಂಬರ್ ಒಂದು ನಾಡಹಬ್ಬ. ಅಂದು ಎಲ್ಲರಿಗೂ ರಜೆ. ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳು, ಸರಕಾರಿ, ಅರೆಸರ್ಕಾರಿ, ಕೊರೆ ಸರ್ಕಾರಿ, ಖಾಸಗಿ ಖಿಲ್ಲತ್ತುಗಳೂ ರಾಜ್ಯೋತ್ಸವ ಆಚರಿಸುತ್ತವೆ. ಮಂಚೂಣಿಯಲ್ಲಿ ನಿಂತು ರಾಜ್ಯದ ಮುಖ್ಯಮಂತ್ರಿಗಳು ಕೆಂಪು ಹಳದಿ ಬಣ್ಣದ ಧ್ವಜಾರೋಹಣ ಮಾಡುತ್ತಾರೆ. ಕೆಂಪು ಹಳದಿ ಬಾವುಟ ನಮ್ಮ ರಾಜ್ಯದ ಅಧಿಕೃತ ಧ್ವಜವೇನಲ್ಲ. ಆದರೂ ಅದೇ ನಮ್ಮ ಧ್ವಜವೆಂದು ಒಪ್ಪಿಕೊಂಡು ಹಾರಿಸುತ್ತಾ ಬಂದಿದ್ದೇವೆ. ಇನ್ನು ಕೆಂಪು ಹಳದಿ ಬಾವುಟವು ಕನ್ನಡ ನಾಡು ನುಡಿಯ ಸಾರ್ವಭೌಮತ್ವವನ್ನು ಪ್ರತಿನಿಧಿಸುತ್ತದೆ ಎಂದು ಮತ್ತೆ ನೆನಪಿಸುವ ಕರ್ನಾಟಕದ ಸಂದಿಗೊಂದಿಗಳಲ್ಲಿ ಸುಳಿದಾಡುವ ಆಟೋರಿಕ್ಷ ಚಾಲಕರಿಗೆ ಎರಡನೇ ನಮಸ್ಕಾರ. ರಾಜ್ಯೋತ್ಸವ ಬಂತೆಂದರೆ ರಾಜ್ಯೋತ್ಸವ ಪ್ರಶಸ್ತಿಗಳು ಬೆನ್ನೇರಿ ಬರುತ್ತವೆ. Not only ಬಂದಾಗ but also ಬರಬೇಕೆಂಬ ವ್ಯಾಕರಣದ ನಿಯಮದ ಹಾಗೆ. ನಾನಾ ಕ್ಷೇತ್ರಗಳಲ್ಲಿ ಅವಿಸ್ಮರಣೀಯ ಸೇವೆ ಸಲ್ಲಿಸಿ ಧನ್ಯರಾದ ಕನ್ನಡದ ಕುವರರು ಮತ್ತು ಕುವರಿಯರಿಗೆ ಇಡೀ ರಾಜ್ಯದ ಪರವಾಗಿ ಧನ್ಯವಾದ ಹೇಳುವ ಪ್ರತೀಕವಾಗಿ ಪ್ರಶಸ್ತಿಗಳನ್ನು ಕೊಡಮಾಡಲಾಗುತ್ತದೆ. ಇದು ಸಂಪ್ರದಾಯ. ಏನೇ ಮಾಡಿದರೂ ಅದಕ್ಕೊಂದು ಲೆಕ್ಕಾಚಾರ ಇರಬೇಕು. ತೂಕ ತುಂಡು ಇರಬೇಕು.
ಪ್ರಶಸ್ತಿಗೆ ಪಾತ್ರರಾರು ಎಂದು ನಿರ್ಧರಿಸುವುದು ಅಷ್ಟೇ ಕಷ್ಟದ ಕೆಲಸ. ಪರಂತು, ನಮ್ಮಲ್ಲಿ ಸಾಧಕರು ಅತಿಹೆಚ್ಚು ಸಂಖ್ಯೆಯಲ್ಲಿ ಕಾಣಸಿಗುವುದರಿಂದ ಯಾರು ಹೆಚ್ಚು, ಯಾರು ಕಮ್ಮಿ ಎಂದು ಅಳೆದೂ ಸುರಿದು ಇತ್ಯರ್ಥ ಮಾಡುವುದು ತುಂಬಾ ತ್ರಾಸದ ಕೆಲಸ. ಪ್ರಶಸ್ತಿ ಪಟ್ಟಿ ತಯಾರಿಸುವುದಕ್ಕೆ ಒಂದು ಸಮಿತಿಯನ್ನು ರಚಿಸಲಾಗುತ್ತದೆ. ಯೋಗ್ಯರ ಪಟ್ಟಿ ಮಾಡಿ, ಜರಡಿ ಹಿಡಿದು, ಒಳ್ಳೆ ಹೆಸರುಗಳನ್ನು ಸರಕಾರಕ್ಕೆ ಶಿಫಾರಸ್ಸು ಮಾಡುವುದು ಕಮಿಟಿಯ ಜವಾಬ್ದಾರಿ ಆಗಿರುತ್ತದೆ. ಈ ಬಾರಿಯೂ ಹಾಗೇ ಆಗ್ತದೆ. ಆದರೆ, ಪ್ರಶಸ್ತಿಗೆ ಆಯ್ಕೆ ಮಾಡುವಾಗ ಯಾವುದಾದರೂ ಒಂದು ಮಾನದಂಡ ಇದ್ದರೆ ಲೇಸು. ಹಾಗಾಗಿ, ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಸಮಿತಿ ಸಾರ್ವಜನಿಕರಲ್ಲಿ ಒಂದು ಕೋರಿಕೆಯನ್ನು ಇಟ್ಟಿದೆ. ಅದು ಹೀಗಿದೆ -
ಮಾನ್ಯರೆ,
ಕರ್ನಾಟಕ ಸರ್ಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಪ್ರತಿ ವರ್ಷ ನವೆಂಬರ್ 1 ರಂದು ಕೊಡಮಾಡುವ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರಕ್ಕೆ ಅಗತ್ಯ ಮಾನದಂಡಗಳನ್ನು ನಿರ್ಧರಿಸಲು ಸಲಹಾ ಸಮಿತಿಯು ಸಾರ್ವಜನಿಕರಿಂದ ಸಲಹೆ ಸೂಚನೆಗಳನ್ನು ಆಹ್ವಾನಿಸಿದೆ.
ಇಂತಿ ನಿಮ್ಮ ಪ್ರೀತಿಯ ಕನ್ನಡಿಗ
[ವಿದ್ಯಾಶಂಕರ ಹರಪನಹಳ್ಳಿ]
- ಕೆ.ವಿ.ರಾಧಾಕೃಷ್ಣ ಸಮನ್ವಯಕಾರರು-ಕಣಜ ಯೋಜನೆ
ಇ-ಕನ್ನಡ ವಿಭಾಗ,
ಕನ್ನಡ ಭವನ,
ಜೆ.ಸಿ.ರಸ್ತೆ ಬೆಂಗಳೂರು- 560 002.
080-22227478, 09844192952
1.ಮೊದಲನೇಯ ನಮಸ್ಕಾರ -- ಆಲೂರು ವೆಂಕಟರಾಯ
2. ಎರಡನೇಯ ನಮಸ್ಕಾರ -- ಆಟೋರಿಕ್ಷ ಚಾಲಕ
3. ಮೂರನೇ ನಮಸ್ಕಾರ -- *****
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.