fly

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಶುಕ್ರವಾರ, ನವೆಂಬರ್ 14, 2014

ವಾಸ್ತುಶಿಲ್ಪದ ತವರು ಐಹೊಳೆ

ಬಾದಾಮಿ ಚಾಳುಕ್ಯರ ಕಾಲದಲ್ಲಿ ವೈಭವೋಪೇತವಾಗಿ ಮೆರೆದ ಐಹೊಳೆ
*ಟಿ.ಎಂ.ಸತೀಶ್
       ಭಾರತೀಯ ದೇವಾಲಯಗಳ ಪೈಕಿ ವಾಸ್ತು ಶಿಲ್ಪದ ತವರು ಎಂದೇ ಖ್ಯಾತವಾದ್ದು ಐಹೊಳೆ. ಬಾದಾಮಿ ಚಾಳುಕ್ಯರ ಕಾಲದಲ್ಲಿ ವೈಭವೋಪೇತವಾಗಿ ಮೆರೆದ ಈ ಗ್ರಾಮ ಇಂದು ವಿಶ್ವವಿಖ್ಯಾತವಾಗಲು ಇಲ್ಲಿನ ಕೋಟೆಯ ಒಳಗೆ ಹಾಗೂ ಹೊರಗೆ ಹರಡಿಕೊಂಡಿರುವ ಶಿಲ್ಪಕಲಾಶ್ರೀಮಂತಿಕೆಯ 125ಕ್ಕೂ ಹೆಚ್ಚು ಚಿಕ್ಕ ದೊಡ್ಡ ದೇವಾಲಯಗಳೇ ಕಾರಣ. ಹೀಗಾಗೆ ಈ ಊರನ್ನು ಹಿಂದೂ ದೇವಾಲಯಗಳ ವಾಸ್ತು ಶಿಲ್ಪದ ತೊಟ್ಟಿಲೆಂದೇ ಕರೆಯುತ್ತಾರೆ.
ಇತಿಹಾಸ
      ಮಲಪ್ರಭಾ ನದಿಯ ಬಲದಂಡೆಯ ಮೇಲೆ ಪ್ರಶಾಂತವಾಗಿ ಮಲಗಿರುವಂತೆ ತೋರುವ ನಿಸರ್ಗ ರಮಣೀಯ ತಾಣಕ್ಕೆ ಹಿಂದೆ ಅಯ್ಯೋಹೊಳೆ ಎಂದು ಹೆಸರಿತ್ತಂತೆ. ಅಯ್ಯ ಅಥವಾ ಅಯ್ಯನೋರು ಎಂದರೆ ಗುರುಗಳು, ಪಂಡಿತರು ಎಂದು ಅರ್ಥ. ಈ ಊರು ವಿದ್ಯಾಕೇಂದ್ರವಾಗಿ ಅಯ್ಯಗಳಿಂದ ತುಂಬಿದ್ದ ಕಾರಣ ಇದಕ್ಕೆ ಆ ಹೆಸರು ಬಂದಿತ್ತೆಂಬ ವಾದವಿದೆ. ಮತ್ತೊಂದು ಕಥೆಯ ರೀತ್ಯ ಕ್ಷತ್ರಿಯರ ರುಂಡ ಚೆಂಡಾಡಿದ ಪರಶುರಾಮ ಮಲಪ್ರಭೆಯ ಹೊಳೆಯಲ್ಲಿ ತನ್ನ ಪರಶುವನ್ನು ತೊಳೆದಾಗ ಇಡೀ ನದಿ ನೀರು ಕೆಂಪಾಯಿತು. ಮುಂಜಾನೆ ಈ ನೀರು ಕಂಡ ಮಹಿಳೆಯರು ಅಯ್ಯಯ್ಯೋ ಹೊಳೆ ಎಂದು ಉದ್ಗರಿಸಿದರು. ಹೀಗಾಗೆ ಈ ಊರು ಐಹೊಳೆಯಾಯ್ತು.
         ಐಹೊಳೆ ಅತ್ಯಂತ ಪ್ರಾಚೀನ ಗ್ರಾಮ. ಇಲ್ಲಿ ಕ್ರಿ.ಪೂ. 6-7ನೇನೇ ಶತಮಾನದಲ್ಲಿ ಅಂದರೆ ಕಬ್ಬಿಣದ ಯುಗದಲ್ಲೇ ಇಲ್ಲಿ ಜನವಸತಿ ಇತ್ತೆಂದು ಪ್ರಾಗೈತಿಹಾಸಿಕ ಸಂಶೋಧಕರು ಅಂದಾಜು ಮಾಡಿದ್ದಾರೆ. ಇಲ್ಲಿ ಉಸಗು ಕಲ್ಲಿನಿಂದ ಮತ್ತು ಕತ್ತರಿಸಿದ ಬಂಡೆಗಳನ್ನು ಗಾರೆ, ಮಣ್ಣಿನ ನೆರವಿಲ್ಲದೆ ಒಂದರ ಮೇಲೊಂದು ಇಟ್ಟು ನಿರ್ಮಿಸಿದ ಕೋಟೆಯಿದೆ. ಇದನ್ನು ಸುಮಾರು ಕ್ರಿ.ಶ. 6ನೇ ಶತಮಾನದಲ್ಲಿ ನಿರ್ಮಿಸಿರಬಹುದು ಎಂದು ಹೇಳಲಾಗಿದ್ದು ಕರ್ನಾಟಕದಲ್ಲಿ ಉಳಿದಿರುವ ಶಿಲಾಕೋಟೆಗಳ ಪೈಕಿ ಇದು ಅತ್ಯಂತ ಪ್ರಾಚೀನವಾದ್ದಾಗಿದೆ. ಕೋಟೆಯ ಸುತ್ತ ಕಂದಕ ಇರುವುದನ್ನು ಈಗಲೂ ಗುರುತಿಸಬಹುದಾಗಿದ್ದು, ಕೋಟೆಯ ಅವಶೇಷಗಳನ್ನು ಕಾಣಬಹುದು.
ವಾಸ್ತುಶಿಲ್ಪ
          ಐಹೊಳೆಯ ಕೋಟೆಯನ್ನು ಉತ್ತರ ರಸ್ತೆಯಿಂದ ಪ್ರವೇಶಿಸುತ್ತಿದ್ದಂತೆಯೇ ಕಾಣುವ ಕ್ರಿಸ್ತ ಶಕ 5ನೇ ಶತಮಾನದಲ್ಲಿ ನಿರ್ಮಿಸಲಾಗಿರುವ ಸುಂದರ ಹಾಗೂ ಮನಮೋಹಕ ಕೆತ್ತನೆಗಳಿಂದ ಕಂಗೊಳಿಸುವ ದುರ್ಗೆಯ ಮಂದಿರ ಮನಸೆಳೆಯುತ್ತದೆ.
           ದೇವಾಲಯದ ಮುಖಮಂಟಪದ ಭಿತ್ತಿಯ ಅಡ್ಡಪಟ್ಟಿಕೆಗಳಲ್ಲಿ ರಾಮಲಕ್ಷ್ಮಣ ಸೀತಾಮಾತೆಯನ್ನು ಗುಹ -ನಾವೆಯ ನೆರವಿನಿಂದ ನದಿ ದಾಟಿಸಿದ ಸುಂದರ ಉಬ್ಬುಶಿಲ್ಪವಿದೆ. ಪುರಾಣ, ಪುಣ್ಯಕಥೆಗಳ ಹಲವು ಕಥಾನಕಗಳು ಇಲ್ಲಿವೆ.
          ಐಹೊಳೆಯ ದೇವಾಲಯಗಳನ್ನು ಪುರಾತತ್ವ ಸರ್ವೇಕ್ಷಣ ಇಲಾಖೆ 22 ವಿಭಾಗಳಾಗಿ ವಿಂಗಡಿಸಿದೆ. ಇದರಲ್ಲಿ ಹುಚ್ಚಿಮಲ್ಲಿಗುಡಿ, ಲಡಖಾನ್ ಗುಡಿ, ಹುಚ್ಚಪ್ಪಯ್ಯಮಠ, ಗಳಗನಾಥ, ರಾವಲ್ ಪಹಡಿ, ಗುಹಾಂತರ ದೇವಾಲಯ, ಜೈನರ ಮೇಗುತಿ ದೇವಾಲಯ, ಎರಡು ಅಂತಸ್ತಿನ ಜೈನ ದೇವಾಲಯ ಪ್ರಮುಖ ಆಕರ್ಷಣೆ.
ಬೆಂಗಳೂರಿನಿಂದ 460, ಬಿಜಾಪುರದಿಂದ 110 ಹಾಗೂ ಬಾದಾಮಿಯಿಂದ 40 ಕಿ.ಮೀಟರ್ ದೂರದಲ್ಲಿರುವ ಈ ಸುಂದರ ತಾಣ ಕರುನಾಡ ಕಲಾಶ್ರೀಮಂತಿಕೆಗೆ ಸಾಕ್ಷಿಯಾಗಿದೆ. 

ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-2352901 /2352909 /2352903 Email : kstdc@vsnl.in

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು