ಪರಿಸರ ನಾಶವಾದರೆ ಮನುಷ್ಯ ನಾಶವಾದಂತೆ. ಆದ್ದರಿಂ ದ ಎಲ್ಲರೂ ಪರಿಸರ ಸಂರಕ್ಷಣೆಗೆ ಪ್ರತಿ ವರ್ಷ ಒಂದೊಂದು ಸಸಿ ನೆಟ್ಟಿದ್ದರೆ ಇಡೀ ರಾಜ್ಯದಲ್ಲಿ 6 ಕೋಟಿ+ ಸಸಿಗಳನ್ನು ಬೆಳೆಸಿದಂತಾಗುತ್ತದೆ ಎಂದು ಜಿಲ್ಲಾ ವಿಜ್ಞಾನ ಕೇಂದ್ರದ ಕಾರ್ಯದರ್ಶಿ ದಾನಿ ಬಾಬುರಾವ ನುಡಿದರು.
ವಿಶ್ವದ ಜೀವ ವೈವಿಧ್ಯದ ಸಂರಕ್ಷಣೆ, ಪರಿಸರ ಸಂಬಂಧಿ ಸಮಸ್ಯೆಗಳನ್ನು ಪತ್ತೆಹಚ್ಚುವುದು ಹಾಗೂ ಅವುಗಳನ್ನು ಸರಿಪಡಿಸುವ ಮಾರ್ಗೋಪಾಯಗಳನ್ನು ಕಂಡು ಹಿಡಿಯುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಯತ್ನವಾಗಿ ಪ್ರತಿವರ್ಷ ಜೂನ್ 5 ರಂದು ‘ವಿಶ್ವ ಪರಿಸರ ದಿನ'ವನ್ನು ಆಚರಿಸಲಾಗುತ್ತದೆ. ಇದು ನಮ್ಮ ಸದ್ಯದ ಸ್ಥಿತಿ. ದಿನೇ ದಿನೇ ನಮ್ಮ ಅನುಕೂಲತೆಗೆ ತಕ್ಕಂತೆ ಜೀವನ ಸಾಗಿಸುತ್ತಿರುವ ನಾವುಗಳು ಪರಿಸರದ ಬಗ್ಗೆಯೂ ಒಂದಿಷ್ಟು ಗಮನ ಹರಿಸಬೇಕಾದ ಅಗತ್ಯತೆ ಇಂದು ಹೆಚ್ಚಾಗಿಯೇ ಇದೆ. ಪರಿಸರ ಉಳಿವಿಗಾಗಿ ಜನಜಾಗೃತಿ ಮೂಡಿಸಲು ಪ್ರಯತ್ನಗಳು ಪ್ರತೀವರ್ಷ ಈ ದಿನದಂದು ನಡೆಯುತ್ತವೆ. ಮಾರನೆಯ ದಿನ ಎಲ್ಲರೂ ತಮ್ಮ-ತಮ್ಮ ಕೆಲಸದಲ್ಲಿ ಬ್ಯುಸಿಯಾಗಿ ಬಿಡುತ್ತೇವೆ. ದೊಡ್ಡ-ದೊಡ್ಡ ಗಿಡವನ್ನು ರೋಡ್ ವಿಸ್ತಾರ ಮಾಡಲೆಂದು ಕತ್ತರಿಸಿ ಉರುಳಿಸುವಾಗ ರೋಡ್ ಅಗಲವಾದರೆ ನನ್ನ ಗಾಡಿ ಸರಾಗವಾಗಿ ಹೋಗಬಹುದೆಂದು ಮನದಲ್ಲಿಯೇ ಖುಷಿ ಪಡುತ್ತಾ ಮೂಖರಂತೆ ನಿಂತು ನೋಡುತ್ತೇವೆ.
ಒಂದು ದೇಶ ಆರ್ಥಿಕವಾಗಿ ಬೆಳೆಯಲು, ಜನರ ಅವಶ್ಯಕತೆಗಳನ್ನು ಪೂರೈಸಲು ಕೈಗಾರಿಕೆಗಳು ಬೇಕು. ಆದರೆ ಇವುಗಳು ಪರಿಸರಕ್ಕೆ ಅಷ್ಟೇ ಮಾರಕ. ಕೈಗಾರಿಕೆಗಳು ಇಲ್ಲದೆ ಜೀವನ ಊಹಿಸಲು ಸಾಧ್ಯವಿಲ್ಲ, ಪರಿಸರ ಹಾಳಾದರೆ ಬದುಕುವುದು ಕಷ್ಟ. ಆದ್ದರಿಂದ ಕೈಗಾರಿಕೆಗಳ ತ್ಯಾಜ್ಯ ವಸ್ತುವನ್ನು ಸರಿಯಾಗಿ ವಿಲೇವಾರಿ ಮಾಡುವುದೇ ಸ್ವಲ್ಪ ಮಟ್ಟಿಗೆ ಪರಿಸರ ರಕ್ಷಣೆಗೆ ನಾವು ಕೊಡುವ ಕಾಣಿಕೆ. ಒಂದು ವೇಳೆ ಕಾರ್ಖಾನೆಗಳು ಈ ಕೆಲಸದಲ್ಲಿ ಎಡವಿದರೆ ಇದರ ವಿರುದ್ಧ ಧ್ವನಿ ಎತ್ತುವುದು ಪ್ರತಿಯೊಬ್ಬ ಜನ ಸಾಮಾನ್ಯನ ಕರ್ತವ್ಯ. ಇಷ್ಟು ಸಾಲದು ಎಂಬಂತೆ ನಗರ ಪ್ರದೇಶದ ಕೆಲವು ಕಡೆಗಳಲ್ಲಿ ಕಸ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ. ಇದರ ಪರಿಣಾಮ ಸುಂದರ ಪರಿಸರ ಕಸದಿಂದ ತುಂಬಿ ತುಳುಕುತ್ತಿದೆ. ಇದಕ್ಕೆ ಮುನ್ಸಿಪಾಲಿಟಿಯವರು ಮಾತ್ರವಲ್ಲ, ಕಸವನ್ನು ಕಂಡ-ಕಂಡಲ್ಲಿ ಹಾಕುವ ಜನಸಾಮಾನ್ಯ ಮೊದಲ ತಪ್ಪಿತಸ್ಥ. ಪ್ಲಾಸ್ಟಿಕ್ ಮಣ್ಣಿನಲ್ಲಿ ಕೊಳೆಯಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ, ಇದರಿಂದಾಗಿ ಮಳೆ ನೀರು ಭೂಮಿನಲ್ಲಿ ಇಂಗುವುದಿಲ್ಲ, ಎಲ್ಲಾ ಗೊತ್ತಿದ್ದರೂ ಪ್ಲಾಸ್ಟಿಕ್ ಬಳಸುತ್ತಿದ್ದೇವೆ.
ಸ್ವಲ್ಪ ಪೇಪರ್ ರೀತಿಯ ಪ್ಲಾಸ್ಟಿಕ್ ಬಂದಿದೆಯಾದರೂ ಯಾವುದೇ ಪ್ಲಾಸ್ಟಿಕ್ ಆಗಿರಲಿ ಅದು ಪರಿಸರಕ್ಕೆ ಹಾನಿಕಾರವೇ. ಪರಿಸರ ಮಾಲಿನ್ಯಕ್ಕೆ ನಮ್ಮ ಅನಿವಾರ್ಯ ಕೊಡುಗೆಗಳಿವು! ಜಗತ್ತಿನಲ್ಲಿ ಉತ್ಪಾದಿತ ಆಹಾರದಲ್ಲಿ ಶೇ. 50ರಷ್ಟು ಮನುಷ್ಯನ ಹೊಟ್ಟೆ ಸೇರುವ ಮೊದಲೇ ವ್ಯರ್ಥವಾಗುತ್ತಿದೆ. ಈ ಹಿನ್ನೆಲೆಯಲ್ಲಿ ನೀರಿನ ಸದ್ಭಳಕೆ, ಆಹಾರದ ಸದುಪಯೋಗದ ಚಿಂತನೆ ಅಗತ್ಯ. ಇದು ಹಸಿದವರಿಗೆ, ಮುಂದಿನ ಪೀಳಿಗೆಗೆ ನಾವು-ನೀವು ನೀಡಬಹುದಾದ ದೊಡ್ಡ ಕೊಡುಗೆ. ಒಂದು ಸಮೀಕ್ಷೆಯ ಪ್ರಕಾರ ಭಾರತೀಯರು ತಿನ್ನುವುದಕ್ಕಿಂತಲೂ ಆಹಾರ-ನೀರು ವ್ಯರ್ಥ ಮಾಡುವುದೇ ಹೆಚ್ಚು. ಜಗತ್ತಿನ 700+ ಕೋಟಿ ಜನಸಂಖ್ಯೆ 2050 ರಲ್ಲಿ 900+ ಕೋಟಿಗೇರಲಿದೆ. ಆದರೆ ಭೂಮಿ ಮಾತ್ರ ಒಂದಿಷ್ಟೂ ಹೆಚ್ಚದು. ಹೀಗಾಗಿ ಆಹಾರ, ನೀರು ವ್ಯರ್ಥ ಮಾಡೋದು ಮುಂದಿನ ಜನಾಂಗದ ತುತ್ತು-ಜಲ ಕಸಿದಂತೆ. ಹೀಗೆ ನಡೆದರೆ ನಮ್ಮ ದೈನಂದಿನ ಬದುಕು ಸಮಾಜಕ್ಕೆ, ಸರಕಾರಕ್ಕೂ ಹೊರೆಯಾಗಲಿದೆ, ಪರಿಸರಕ್ಕೆ ಮಾರಕವಾಗಲಿದೆ. ಗಿಡ ನೆಟ್ಟು, ಭಾಷಣ ಬಿಗಿಯುವ ಬದಲು ನೆಡುವ ಗಿಡಗಳನ್ನು ಪೋಷಿಸುವ ಕೆಲಸ ಮಾಡೋಣ. ಇರುವ ಸಂಪನ್ಮೂಲಗಳನ್ನು ವಿತವಾಗಿ ಬಳಕೆ ಮಾಡುವ ಕುರಿತು ಯೋಚಿಸೋಣ ಏನಂತಿರಾ?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.