ಪ್ರತಿ ವರ್ಷ ನವೆಂಬರ್ ಒಂದರಂದು ಹಬ್ಬದ ವಾತಾವರಣದಿಂದ ಪ್ರೇರಿತರಾಗಿ ಕೇವಲ ಒಂದೆರಡು ದಿನ / ವಾರಗಳವರೆಗೆ ಕನ್ನಡ ದ ಜಪ ಮಾಡಿ ಮರೆತುಹೋದರೆ ಸರಿಯೆ?ಸಂಭ್ರಮದಿಂದ ನಲಿಯಲು ಹಬ್ಬ ಬೇಕು, ಆದರೆ ಕನ್ನಡದ ಸೇವೆ ಮಾಡಲು ಹಬ್ಬದ ದಿನವೊಂದೇ ಬೇಕಾಗಿಲ್ಲ. ಹಾಗಾಗಿ, ದಿನನಿತ್ಯದ ಬಳಕೆಯಲ್ಲಿ ಕನ್ನಡಕ್ಕೇ ಪ್ರಾಧಾನ್ಯತೆ ಕೊಟ್ಟು, ವರ್ಷಕ್ಕೊಮ್ಮೆ ಆಚರಿಸುವ ಕನ್ನಡ ಹಬ್ಬದ ಮೂಲಕ ಸಂಭ್ರಮಿಸೋಣ. ವರ್ಷವಿಡೀ ಕನ್ನಡಮಯ ಜೀವನ ನಡೆಸಿದ ಸಾರ್ಥಕ ಮನೋಭಾವದಿಂದ ಕುಣಿದು ಕುಪ್ಪಳಿಸೋಣ. ದೈನಂದಿನ ಜೀವನದಲ್ಲಿ ಕನ್ನಡವನ್ನು ಹೇಗೆ ಬೇರೆ-ಬೇರೆ ವಿಧಗಳಲ್ಲಿ ಬಳಸಬಹುದು ಎಂಬುದನ್ನು ಈ ಪುಟದಲ್ಲಿ ಕಾಣಬಹುದು. ಹೊಸ-ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಆಂಗ್ಲದ ಹಂಗಿನಲ್ಲಿ ಇರಲೇಬೇಕು ಎಂದೇನಿಲ್ಲ.
ಕನ್ನಡಿಗರು ಕನ್ನಡದ ಬಳಕೆಯನ್ನು ಹೆಚ್ಚಿಸಿದರೆ, ಆಗ ತಂತ್ರಜ್ಞಾನ ಒದಗಿಸುವ ಕಂಪನಿಗಳು ಕನ್ನಡಕ್ಕೆ ಒತ್ತುನೀಡಲು ಆರಂಭಿಸುತ್ತವೆ. ನೆನಪಿರಲಿ, ಸತತವಾಗಿ ಆಂಗ್ಲದಲ್ಲಿ ಮೊಬೈಲ್, ಗಣಕ, ಇತ್ಯಾದಿ ತಂತ್ರಜ್ಞಾನದ ಉಪಕರಣಗಳನ್ನು ಬಳಸಿ ನಮಗೆ ಒಮ್ಮೆಲೆ ಅವುಗಳನ್ನು ಕನ್ನಡಕ್ಕೆ ಬದಲಿಸಿದರೆ ಆರಂಭದಲ್ಲಿ ತುಸು ಕಿರಿಕಿರಿಯಾಗಬಹುದು.ಹಾಗೆಂದಮಾತ್ರಕ್ಕೆ ತಾಳ್ಮೆ ಕಳೆದುಕೊಂಡು ಮತ್ತೇ ಆಂಗ್ಲಕ್ಕೆ ಮರಳಿದರೆ ಹೇಗೆ? ನಿಮ್ಮ ತಾಯಿಯ ಮಾತು ನಿಮಗೆ ಕಿರಿಕಿರಿಯುಂಟು ಮಾಡುತ್ತದೆ ಎಂದು ಆಕೆಯನ್ನು ದೂರವಿಡಲಾದೀತೆ?
ಹೊಸದಾಗಿರುವುದು ಹೊಂದಿಕೊಳ್ಳುವವರೆಗಷ್ಟೇ ತುಸು ತ್ರಾಸು.ಆರಂಭದ ಕೆಲ ದಿನಗಳನ್ನು ತಾಳ್ಮೆಯಿಂದ ತಳ್ಳಿದರೆ, ಮುಂದೆ ನೀವೇ ಕನ್ನಡಕ್ಕೆ ಹೊಂದಿಕೊಳ್ಳುತ್ತೀರಿ (ಇದು ಮಾನವನ ಸಹಜ ಗುಣ). ಆಮೇಲೆ, ನೀವೇ ಬೇರೆಯವರಿಗೆ ಕನ್ನಡ ಬಳಸಲು ಹೇಳಿಕೊಡುತ್ತೀರಿ.
ಈಗಾಗಲೇ ಸಾಕಷ್ಟು ಜನ ಸಾಧ್ಯವಿರುವ ಕಡೆಯಲ್ಲೆಲ್ಲ ಕನ್ನಡದ ಬಳಕೆಯನ್ನು ಅಳವಡಿಸಿಕೊಂಡಿದ್ದಾರೆ, ಅವರೆಲ್ಲರಿಗೂ "ಕನ್ನಡಿಗ ಶಿವಕುಮಾರ" ವತಿಯಿಂದ ನಮಸ್ಕಾರಗಳು.